Advertisement
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮ್ಮೇಳನಕ್ಕೆ ಬಿಡುಗಡೆಯಾದ ಅನುದಾನದಿಂದ ಹಿಡಿದು ವೇದಿಕೆ ನಿರ್ಮಾಣ, ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ, ಸಮ್ಮೇಳನದಲ್ಲಿ ವಿದೇಶಿಗರ ಪಾಲ್ಗೊಳ್ಳುವಿಕೆ, 86ನೇ ಸಾಹಿತ್ಯ ಸಮ್ಮೇಳನದಲ್ಲಿ 86 ಕೃತಿಗಳ ಬಿಡುಗಡೆ, ದಸರಾ ಮಾದರಿಯಲ್ಲಿ ದೀಪಾಲಂಕಾರ, ಸಮ್ಮೇಳನದಲ್ಲಿ ಸಮಯ ಪಾಲನೆಗಾಗಿ ವಿಶೇಷ ವ್ಯವಸ್ಥೆ, ಸಮ್ಮೇಳನಕ್ಕೆ ಬರುವ ವಾಹನಗಳ ಪಾರ್ಕಿಂಗ್‌ಗಾಗಿ ಕ್ಯೂಆರ್ ಕೋಡ್ ಬಳಕೆ, ಪ್ರತಿನಿಧಿಗಳ ನೋಂದಣಿಗಾಗಿ ಆ್ಯಪ್ ಬಳಕೆ ಮಾಡಿದ್ದು, ರಾಜ್ಯಾದ್ಯಂತ ಕನ್ನಡ ರಥ ಸಂಚಾರ.. ಹೀಗೆ ಹಲವು ಪ್ರಥಮಗಳಿಗೆ 86ನೇ ಸಾಹಿತ್ಯ ಸಮ್ಮೇಳನ ಮುನ್ನಡಿ ಬರೆಯುತ್ತಿದೆ.
ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು ಜರಗುವ ವೇಳೆ ಸಮಯ ಪಾಲನೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಇದಕ್ಕಾಗಿಯೇ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ಅಥಿತಿಗಳ ಭಾಷಣಕ್ಕೆ ಸಮಯ ನಿಗದಿಗೊಳಿಸಿದ್ದು, ಅತಿಥಿಗಳ ಭಾಷಣದ ಸಮಯ ಮುಗಿಯುತ್ತಾ ಬರುತ್ತಿದ್ದಂತೆ ಮುನ್ಸೂಚನೆ ನೀಡಲು ಕೆಂಪು ದೀಪದ ಬರ್ಜರ್ ಅಳವಡಿಸಲಾಗುತ್ತಿದೆ. ಭಾಷಣದ ಅವಧಿ ಮುಗಿಯುತ್ತಿದ್ದಂತೆ ಧ್ವನಿವರ್ಧಕ ಸ್ವಯಂಚಾಲಿತವಾಗಿ ಬಂದ್ ಆಗುವ ವ್ಯವಸ್ಥೆ ಮಾಡಿದ್ದು, ಸಮಯ ಪಾಲನೆಗಾಗಿ ಈ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ. ಮೆರವಣಿಗೆಗೆ ವಿಶೇಷ ರಥ
ಈ ಬಾರಿ ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ ಎಲ್ಲರ ಗಮನ ಸೆಳೆಯಲಿದೆ. ಸಮ್ಮೇಳನಾಧ್ಯಕ್ಷರಾದ ಡಾ| ದೊಡ್ಡರಂಗೇಗೌಡ ಅವರ ಮೆರವಣಿಗೆಗಾಗಿ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ಅರಮನೆ ದರ್ಬಾರ್ ಮಾದರಿಯಲ್ಲಿ ಭವ್ಯ ರಥ ಸಿದ್ಧಪಡಿಸಲಾಗಿದೆ. ಕೆಂಪು, ಹಳದಿ ಹಾಗೂ ಬಂಗಾರದ ವರ್ಣಗಳಿಂದ ರಥವನ್ನು ಅಲಂಕರಿಸಲಾಗಿದ್ದು, ಭುವನೇಶ್ವರಿ, ಸಮ್ಮೇಳನದ ಲಾಂಛನ, ಕನ್ನಡ ಧ್ವಜಗಳಿಂದ ಈ ವಿಶೇಷ ರಥ ಕಂಗೊಳಿಸಲಿದೆ. ಜತೆಗೆ ರಾಜ್ಯದ 31 ಜಿಲ್ಲೆಗಳ ಕಸಾಪ ಅಧ್ಯಕ್ಷರಿಗಾಗಿ 11 ಸಾರೋಟುಗಳನ್ನು ವ್ಯವಸ್ಥೆ ಮಾಡಲಾಗಿದೆ.
Related Articles
ಸಮ್ಮೇಳನದಲ್ಲಿ 86 ಕೃತಿಗಳನ್ನು ಬಿಡುಗಡೆ ಮಾಡುತ್ತಿರುವುದು ಈ ಬಾರಿಯ ವಿಶೇಷ. ಹಾವೇರಿ ಜಿಲ್ಲೆಗೆ ಸಂಬಂಧಿ ಸಿದಂತೆ 37 ಕೃತಿಗಳನ್ನು ಹೊರತರಲಾಗುತ್ತಿದೆ. ಉಳಿದ 49 ಕೃತಿಗಳು ನಾಡು-ನುಡಿಗೆ ಸಂಬಂಧಿ ಸಿದ್ದು, ಅವುಗಳಲ್ಲಿ 15 ಹೊಸ ಮತ್ತು 34 ಮರು ಮುದ್ರಣಗೊಳ್ಳುತ್ತಿರುವ ಕೃತಿಗಳಾಗಿವೆ. ಜತೆಗೆ 86ನೇ ನುಡಿ ಜಾತ್ರೆಯ ಸವಿನೆನಪಿಗಾಗಿ 500 ಪುಟಗಳ ಏಲಕ್ಕಿ ಹಾರ ಶೀರ್ಷಿಕೆಯ ಸ್ಮರಣ ಸಂಚಿಕೆ ಹೊರತರಲಾಗುತ್ತಿದೆ.
Advertisement
ಮೈಸೂರು ಮಾದರಿ ದೀಪಾಲಂಕಾರನಗರವನ್ನು ಮಧುವಣಗಿತ್ತಿಯಂತೆ ಸಿಂಗಾರ ಮಾಡಲು ಪ್ರಮುಖ ವೃತ್ತ, ರಸ್ತೆ, ಸರಕಾರಿ ಕಚೇರಿಗಳಿಗೆ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಮೈಸೂರು ದಸರಾ ಮಾದರಿ ದೀಪಾಲಂಕಾರ ಮಾಡಲಾಗಿದ್ದು, ನಗರದ ಪ್ರಮುಖ ರಸ್ತೆ, ವೃತ್ತಗಳು ವಿದ್ಯುದ್ದೀಪಗಳಿಂದ ಕಂಗೊಳಿಸುವ ಮೂಲಕ ಎಲ್ಲರನ್ನು ಆಕರ್ಷಿಸುತ್ತಿವೆ. ಕ್ಯೂಆರ್ ಕೋಡ್ ವ್ಯವಸ್ಥೆ
ಸಮ್ಮೇಳನಕ್ಕೆ ನಾಡಿನ ವಿವಿಧ ಮೂಲೆಗಳಿಂದ ಬರುವವರು ಸಮ್ಮೇಳನದ ಸ್ಥಳ, ಪಾರ್ಕಿಂಗ್ ವ್ಯವಸ್ಥೆ, ಯಾವ ಮಾರ್ಗದಲ್ಲಿ ವೇದಿಕೆಯತ್ತ ಬರಬೇಕು ಎಂಬ ಗೊಂದಲ ನಿವಾರಣೆಗಾಗಿ ಕ್ಯೂಆರ್ ಕೋಡ್ ಬಳಕೆ ಮಾಡುತ್ತಿರುವುದು ವಿಶೇಷವಾಗಿದೆ.