ಹಾವೇರಿ: ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ ಶೇ.50ರ ಪ್ರಮಾಣದಲ್ಲಿ ಕಾಯ್ದಿರಿಸಿದ ಬೆಡ್‌ಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಧಿಕಾರಿ ಸಂಜಯ ಶೆಟ್ಟೆಣ್ಣವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ಗುರುವಾರ ಕೋವಿಡ್ ಸ್ಥಿತಿಗತಿ ಕುರಿತಂತೆ ದೈನಂದಿನ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಖಾಸಗಿ ಆಸ್ಪತ್ರೆಯ ಕೋವಿಡ್ ಬೆಡ್‌ಗಳ ಪರಿಶೀಲನೆಗೆ ವೈದ್ಯಾ ಧಿಕಾರಿ, ಪರಿಸರ ಅಧಿ ಕಾರಿ ಹಾಗೂ ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರರನ್ನು ಒಳಗೊಂಡ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಇಂದಿನಿಂದಲೇ ತಪಾಸಣೆ ಆರಂಭಿಸಿ ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿರುವ 148 ಹಾಸಿಗೆ ಸಾಮರ್ಥ್ಯವನ್ನು 198 ಬೆಡ್‌ಗಳಿಗೆ ಹೆಚ್ಚಿಸುವ ಕೆಲಸವನ್ನು ಶುಕ್ರವಾರದೊಳಗೆ ಪೂರ್ಣಗೊಳಿಸಬೇಕು. ಗುತ್ತಲ, ಬಂಕಾಪುರ, ಅಕ್ಕಿಆಲೂರು, ಮಾಸೂರು, ರಟ್ಟಿಹಳ್ಳಿ ಆಸ್ಪತ್ರೆಗಳಲ್ಲಿ ಕಳೆದ ಸಾಲಿನಲ್ಲಿ ಕೋವಿಡ್ ಚಿಕಿತ್ಸೆಗಾಗಿ ಬೆಡ್‌ಗಳ ವ್ಯವಸ್ಥೆ ಹಾಗೂ ಆಕ್ಸಿಜನ್ ಸಂಪರ್ಕ ಕಲ್ಪಿಸಲು ಮ್ಯಾನಿಫೋಲ್ಡ್ ಹಾಗೂ ಪೈಪ್‌ಲೈನ್ ವ್ಯವಸ್ಥೆ ಸಹ ಮಾಡಲಾಗಿದೆ. ಅಗತ್ಯಕ್ಕನುಸಾರವಾಗಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಅಳಡಿಸಿ, ಈ ಬೆಡ್‌ಗಳ ಬಳಕೆ ಮಾಡಲು ಸಿದ್ಧವಾಗಿರಿಸಲು ಸೂಚನೆ ನೀಡಿದರು.
ಆಕ್ಸಿಜನ್ ಅತ್ಯಂತ ಮಹತ್ವದ್ದಾಗಿದ್ದು, ಅನಗತ್ಯವಾಗಿ ಪೋಲಾಗದಂತೆ ತಡೆಯಬೇಕು. ಆಕ್ಸಿಜನ್ ಪೂರೈಕೆ, ವಾಲ್‌ಗಳಲ್ಲಿ ಸೋರಿಕೆ, ಬೆಡ್‌ನಿಂದ ರೋಗಿಗಳು ನಿತ್ಯ ಕರ್ಮಗಳಿಗೆ ತೆರಳುವಾಗ ಆಕ್ಸಿಜನ್ ಆನ್ ಇರದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು. ದಿನವೊಂದಕ್ಕೆ ಜಿಲ್ಲೆಯಲ್ಲಿ ರೋಗಿಗಳಿಗಾಗಿ ಅಂದಾಜು 3.5 ಕೆಎಲ್ ಆಕ್ಸಿಜನ್ ಬಳಕೆ ಮಾಡಲಾಗುತ್ತಿದೆ. ಹೊಸದಾಗಿ 290 ಜಂಬೋ ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗಿದೆ. 390 ಹಳೆಯ ಸಿಲಿಂಡರ್ ಸೇರಿದಂತೆ 620 ಜಂಬೋ ಸಿಲಿಂಡರ್ ಜಿಲ್ಲೆಯಲ್ಲಿ ಬಳಕೆಗೆ ಲಭ್ಯವಿದೆ. ಆಕ್ಸಿಜನ್ ಸಿಲಿಂಡರ್ ಖಾಲಿಯಾದ ದಿನವೇ ಧಾರವಾಡಕ್ಕೆ ತೆರಳಿ ರಾತ್ರಿಯೊಳಗಾಗಿ ಭರ್ತಿ ಮಾಡಿ ಕಾಯ್ದಿರಿಸಿಕೊಳ್ಳಲು ತಾಲೂಕು ವೈದ್ಯಾ ಧಿಕಾರಿಗಳಿಗೆ ನಿರ್ದೇಶನ ನೀಡಲು ಸೂಚನೆ ನೀಡಿದರು.
ಜಿಲ್ಲಾ ಆಸ್ಪತ್ರೆಯಲ್ಲಿ 6 ಕೆಎಲ್ ಹಾಗೂ ಗ್ರಾಸೀಂ ಕೈಗಾರಿಕಾ ಘಟಕದಲ್ಲಿ 30 ಕೆಎಲ್ ಸಾಮರ್ಥ್ಯದ ಟ್ಯಾಂಕ್ ಬಳಕೆ ಮಾಡಿಕೊಳ್ಳವ ಜತೆಗೆ ಬಳ್ಳಾರಿ, ಹರಿಹರ, ಗದಗ ಹಾಗೂ ಧಾರವಾಡ ಏಜನ್ಸಿಗಳಿಂದಲೂ ಅಗತ್ಯ ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊಸದಾಗಿ ಒಂದು ಸಾವಿರ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕ ಮಂಜೂರಾಗಿದೆ. ಈ ಘಟಕವನ್ನು ತ್ವರಿತವಾಗಿ ಇನ್‌ಸ್ಟಾಲೇಷನ್‌ಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಜಿಪಂ ಸಿಇಒ ಮಹಮ್ಮದ ರೋಷನ್ ಮಾತನಾಡಿ, ಜಿಲ್ಲಾ ಆಸ್ಪತ್ರೆ, ರಾಣಿಬೆನ್ನೂರು ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯ ಆಕ್ಸಿಜನ್ ಬಳಕೆ ಕುರಿತಂತೆ ತಕ್ಷಣ ಮೌಲ್ಯಮಾಪನ ಆರಂಭಿಸಿ. ಸೋರಿಕೆ ತಡೆ, ತಾಂತ್ರಿಕ ಕಾರಣದಿಂದ ವ್ಯರ್ಥವಾಗಿ ಸೋರಿಕೆ ಆಗುವುದನ್ನು ಸರಿಪಡಿಸಲಾಗುವುದು. ಇದರೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್‌ಗಳ ಸಂಖ್ಯೆ ಹೆಚ್ಚು ಮಾಡಲಾಗುವುದು. ಎರಡು ಬೆಡ್‌ಗಳಿಗೆ ಒಂದು ಜಂಬೋ ಸಿಲಿಂಡರ್‌ನಿಂದ ಆಕ್ಸಿಜನ್ ಪೂರೈಕೆ ಮಾಡುವ ಕುರಿತಂತೆ ವಾಲ್ ಅಳವಡಿಸಿ ಪ್ರಸರ್ ನಿರ್ವಹಿಸುವ ಕುರಿತಂತೆ ತಾಂತ್ರಿಕ ತಜ್ಞರ ತಂಡದೊಂದಿಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಲಾಕ್‌ಡೌನ್ ಭೀತಿಯಿಂದ ಬೆಂಗಳೂರು ಹಾಗೂ ಮಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಈ ಕುರಿತು ಪ್ರತಿ ಗ್ರಾಪಂ ಮಟ್ಟದಲ್ಲಿ ಟಾಸ್ಕ್ಫೋರ್ಸ್ ಸಮಿತಿಯಿಂದ ವರದಿ ಪಡೆದುಕೊಳ್ಳಲಾಗುತ್ತಿದೆ. ಪ್ರತಿ ದಿನ ಎರಡು ಸಾವಿರ ಸ್ಯಾಂಪಲ್ ಪರೀಕ್ಷೆ ಮಾಡಲಾಗುತ್ತಿದೆ. ಮಾದರಿ ಸಂಗ್ರಹಿಸಿದ 24 ಗಂಟೆಯೊಳಗೆ ವರದಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾ ಧಿಕಾರಿ ವಿನೋದಕುಮಾರ ಹೆಗ್ಗಳಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್. ಹಾವನೂರ, ಪರಿಸರ ಅ ಧಿಕಾರಿ ಮಹೇಶ್ವರಪ್ಪ, ಸಹಾಯಕ ಔಷಧ ನಿಯಂತ್ರಕರಾದ ನೀಲಿಮಾ, ಕುಟುಂಬ ಕಲ್ಯಾಣಾಧಿಕಾರಿ ಡಾ.ದೇವರಾಜ್ ಇತರರು ಇದ್ದರು.