ಚಾಮರಾಜನಗರ: ವಿದ್ಯಾರ್ಥಿಗಳು ಆರೋಗ್ಯದಿಂದ ಇರಬೇಕಾದರೆ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಹಯೋಗದಲ್ಲಿ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಮಾತ್ರೆ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು: ವಿದ್ಯಾರ್ಥಿಗಳು ಶಿಕ್ಷಕರ ಸಲಹೆ ಪಡೆದು ಶಾಲಾ ಹಂತದಲ್ಲಿಯೇ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತರಾಗಬೇಕು. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಹೊರಗಡೆ ರಸ್ತೆ ಬದಿಯಲ್ಲಿ ಮಾರುವ ತಿಂಡಿ-ತಿನಿಸುಗಳನ್ನು ತಿನ್ನಬಾರದು. ಆ ಪದಾರ್ಥಗಳಲ್ಲಿ ನೊಣ, ಸೊಳ್ಳೆ, ಕ್ರಿಮಿ-ಕೀಟಗಳು ಕೂರುವುದರಿಂದ ರೋಗ ಬರುವ ಸಂಭವ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜಾಗೃಕತೆಯಿಂದ ಇರುವಂತೆ ಸಲಹೆ ಮಾಡಿದರು.
ಜಂತುಹುಳು ಮಾತ್ರೆ ಸೇವಿಸಿ: ಜಂತುಹುಳು ಮಕ್ಕಳ ದೇಹದಲ್ಲಿ ಸೇರಿದಾಗ ಅಪೌಷ್ಟಿಕತೆ, ರಕ್ತಹೀನತೆ ಉಂಟಾಗುತ್ತದೆ. ದೈಹಿಕ ಬೆಳವಣಿಗೆಯ ಮೇಲೆ ಉಂಟಾಗಬಹುದಾದ ನಕಾರಾತ್ಮಕ ಪರಿಣಾಮ ತಡೆಗಟ್ಟುವುದು ರಾಷ್ಟ್ರೀಯ ಜಂತುಹುಳು ಕಾರ್ಯಕ್ರಮದ ಉದ್ದೇಶವಾಗಿದೆ. 1 ರಿಂದ 19 ವರ್ಷದ ಮಕ್ಕಳು ಇದರ ಉಪಯೋಗವನ್ನು ಪಡೆದುಕೊಳ್ಳುವರು. ಸಂತ ಜೋಸೆಫರ ಶಾಲೆಯಿಂದ ಪ್ರಾರಂಭವಾಗಿ ಹಾಡಿಯ ಮಕ್ಕಳವರೆಗೂ ತಲುಪಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ಮಾಡುತ್ತದೆ ಎಂದರು.
ಬೇಸಿಗೆ ಕಾಲವು ಹತ್ತಿರವಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಿಮ್ಮ ಮನೆಯ ಸುತ್ತ- ಮುತ್ತಲಿನ ಪರಿಸರದ ಶುಚ್ಚಿತ್ವದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಶೌಚಾಲಯ, ಮನೆಯ ಅಕ್ಕ-ಪಕ್ಕದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ಶಿವಮ್ಮ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್.ನಾರಾಯಣ್‌ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಜಿಲ್ಲಾ ಲಸಿಕಾ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ, ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.