ಬೆಂಗಳೂರು: ಮತ್ತೀಕೆರೆಯ ಬಿಬಿಎಂಪಿ ಬಾಲಕಿಯರ ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜಿಗೆ ಮೇಯರ್ ಗಂಗಾಂಬಿಕೆ ಅವರು ಬುಧವಾರ ದಿಢೀರ್ ಭೇಟಿ ನೀಡಿದರು. ಈ ವೇಳೆ ಶಾಲೆಯ ಕಳಪೆ ನಿರ್ವಹಣೆಗೆ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಮೂರು ವರ್ಷ ಕಳೆದರೂ ಬಿಬಿಎಂಪಿ ಶಾಲೆಗೆ ನೀಡಿರುವ ಫುಟ್ ಬಾಲ್, ಶಟಲ್‌ಬಾಟ್‌ಗಳ ಪ್ಯಾಕೆಟ್ ಕೂಡಾ ತೆಗೆಯದೆ ಕಪಾಟಿನಲ್ಲಿ ಇಟ್ಟಿರುವುದನ್ನು ನೋಡಿದ ಮೇಯರ್ ಅರಶಿನ, ಕುಂಕುಮ ಹಚ್ಚಿ ಪೂಜೆ ಮಾಡಿ ಎಂದು ಶಾಲಾ ಪ್ರಾಂಶುಪಾಲರ ಮೇಲೆ ಗರಂ ಆದರು.
ಮತ್ತಿಕೆರೆಯ ಪಾಲಿಕೆ ಶಾಲೆಯಲ್ಲಿ ಆರುನೂರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ನೀರು ಶುದ್ಧೀಕರಣ ಘಟಕಕ್ಕೆ 64 ಲಕ್ಷರೂ. , ಫರ್ನಿರ್ಚಗೆ 1.85 ಕೋಟಿ ರೂ. ಹಾಗೂ ಕಂಪ್ಯೂಟರ್ ಟ್ಯಾಲಿ ತರಬೇತಿಗೆ ಎರಡು ಕೋಟಿ ರೂ. ಮಂಜೂರು ಮಾಡಲಾಗಿತ್ತು.
ಆದರೆ, ತರಗತಿಗಳು ನಡೆದಿರಲಿಲ್ಲ. ತರಗತಿ ತೆಗೆದುಕೊಳ್ಳದೆ ಬಿಲ್ ಪಾವತಿಗೆ ಸಹಿ ಮಾಡಿದ್ದಕ್ಕೆ ಶಿಕ್ಷಣ ಅಧಿಕಾರಿಗಳನ್ನು ಮೇಯರ್ ತರಾಟೆಗೆ ತೆಗೆದುಕೊಂಡರು. ಮಕ್ಕಳಿಗೆ ಕಳಪೆ ಗುಣಮಟ್ಟದ ಬ್ಯಾಗ್‌ಗಳನ್ನು ನೀಡಿರುವುದನ್ನು ಗಮನಿಸಿದ ಮೇಯರ್ ಕೂಡಲೇ ಗುಣಮಟ್ಟದ ಬ್ಯಾಗ್, ಸಮವಸ್ತ್ರ ಮತ್ತು ಪುಸ್ತಕ ನೀಡುವಂತೆ ಸೂಚಿಸಿದರು.
ಹದಿನೈದು ದಿನಕ್ಕೆ ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, 40 ಲಕ್ಷ ರೂ. ವೆಚ್ಚದಲ್ಲಿ ಎರಡು ಕ್ಲಾಸ್ ರೂಂ ನಿರ್ಮಾಣ, ಗ್ರಂಥಾಲಯ ನಿರ್ವಹಣೆ ಮತ್ತು ಶಾಲೆ ಅಭಿವೃದ್ಧಿಪಡಿಸುವಂತೆ ಆದೇಶ ನೀಡಿದರು.