ಔರಂಗಾಬಾದ್: ”ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮರುನಾಮಕರಣ ಮಾಡಲಾಗುವುದು ಎಂಬ ತಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ ಅವರ ಭರವಸೆಯನ್ನು ನಾನು ಮರೆತಿಲ್ಲ” ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ಹೇಳಿದ್ದಾರೆ. ನಗರಕ್ಕೆ ಮರುನಾಮಕರಣ ಮಾಡುತ್ತೇನೆ ಎಂದು ಹೇಳಿದ್ದಾರೆ.
”ನಮ್ಮ ಪ್ರತಿ ಉಸಿರಲ್ಲೂ ಹಿಂದುತ್ವವಿದೆ.ಔರಂಗಾಬಾದ್‌ಗೆ ಸಂಭಾಜಿ ನಗರ ಎಂದು ಮರುನಾಮಕರಣ ಮಾಡುವುದಾಗಿ ನನ್ನ ತಂದೆ ಬಾಳಾ ಸಾಹೇಬ್ ಠಾಕ್ರೆ ಭರವಸೆ ನೀಡಿದ್ದನ್ನು ನಾನು ಎಂದಿಗೂ ಮರೆತಿಲ್ಲ”ಎಂದು ಹೇಳಿದ್ದಾರೆ.
ಬಾಳಾಸಾಹೇಬ್ ಠಾಕ್ರೆ ಅವರ ಭರವಸೆಯಂತೆ ಔರಂಗಾಬಾದ್ ಅನ್ನು ಮರುನಾಮಕರಣ ಮಾಡುವಂತೆ ಬಿಜೆಪಿ ಠಾಕ್ರೆ ಮೇಲೆ ಒತ್ತಡ ಹೇರುತ್ತಿದೆ. ಆದರೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಬೆಂಬಲದೊಂದಿಗೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುತ್ತಿರುವ ಶಿವಸೇನೆ ತನ್ನ ತೀವ್ರ ವಿರೋಧ ಎದುರಿಸುತ್ತಿದೆ.
”ಕಳೆದ ಕೆಲವು ದಿನಗಳಿಂದ ವಲಸೆ ಕಾರ್ಮಿಕರು ಮತ್ತು ಕಾಶ್ಮೀರಿ ಪಂಡಿತರ ಹತ್ಯೆಗಳು ನಡೆದಿವೆ.ನಿಮಗೆ ಧೈರ್ಯವಿದ್ದರೆ ಕಾಶ್ಮೀರದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಿ” ಎಂದು ಅವರು ಔರಂಗಾಬಾದ್‌ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ ಸವಾಲು ಹಾಕಿದ್ದಾರೆ.
”ಹಿಂದುತ್ವಕ್ಕಾಗಿ ಶಿವಸೇನೆ ಏನು ಮಾಡಿದೆ ಮತ್ತು ಬಿಜೆಪಿ ಏನು ಮಾಡಿದೆ ಎಂಬುದರ ಕುರಿತು ಮುಕ್ತ ಚರ್ಚೆಯಾಗಲಿ”, ನೂಪುರ್ ಶರ್ಮಾ ಅವರ ಪ್ರವಾದಿ ಕುರಿತಾಗಿನ ವಿವಾದಾತ್ಮಕ ಹೇಳಿಕೆ ಪ್ರಸ್ತಾವಿಸಿ, ”ಬಿಜೆಪಿ ವಕ್ತಾರರ ಹೇಳಿಕೆಯಿಂದಾಗಿ ರಾಷ್ಟ್ರವು ಅವಮಾನವನ್ನು ಅನುಭವಿಸಬೇಕಾಯಿತು” ಎಂದರು.