ಹೊಸದಿಲ್ಲಿ: ಒಲಿಂಪಿಕ್ಸ್ ಮುಂದೂಡಿಕೆಯಾಗಿದೆ, ಮನೆಯಿಂದ ಎಲ್ಲೂ ಹೊರಗೆ ಹೋಗುವಂತಿಲ್ಲ, ಅಭ್ಯಾಸಕ್ಕೂ ಸಂಪೂರ್ಣ ಬ್ರೇಕ್ ಬಿದ್ದಿದೆ. ನಾಲ್ಕು ಕೋಣೆಯೊಳಗೆ ಬಂಧಿಯಾಗುವುದು ಬಿಟ್ಟರೆ ಬೇರೆ ದಾರಿ ಇಲ್ಲ. ಇಂತಹ ಅನಿವಾರ್ಯ ಸ್ಥಿತಿಯಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಏನು ಮಾಡುತ್ತಿದ್ದಾರೆ?
ಇಂತಹ ಕುತೂಹಲಕ್ಕೆ ಸಂದರ್ಶನವೊಂದರಲ್ಲಿ ಸ್ವತಃ ಸಿಂಧು ಉತ್ತರ ಕೊಟ್ಟಿದ್ದಾರೆ. ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಕೂಟದಲ್ಲಿ ಪಾಲ್ಗೊಂಡ ಬಳಿಕ ಸ್ವಯಂ ಪ್ರತ್ಯೇಕತೆಗೆ ಒಳಗಾಗಿದ್ದ ಸಿಂಧು ಮನೆಯ ನಾಲ್ಕು ಕೋಣೆಯೊಳಗೆ ಇದ್ದಾರೆ. ನಿಗಾದಲ್ಲಿದ್ದ ಅವರ ಅವಧಿ ಇದೀಗ ಅಂತ್ಯಗೊಂಡಿದೆ.
ಈಗ ಅವರು ನೋಡಿರುವ ಸಿನೆಮಾ ಎಷ್ಟು, ಹೆಸರೇನು ಎನ್ನುವುದರ ಲೆಕ್ಕ ಸ್ವತಃ ಸಿಂಧು ಬಳಿಯಲ್ಲೇ ಇಲ್ಲವಂತೆ. ಇದನ್ನು ಅವರು ವಿವರಿಸಿದ್ದು ಹೀಗೆ, “ಯುಕೆಯಿಂದ ಕೂಟ ಮುಗಿಸಿ ಬಂದ ಮೇಲೆ ಪ್ರತ್ಯೇಕತೆಗೆ ಒಳಗಾಗಿದ್ದೆ, ಅವಧಿ ಮುಗಿದಿದ್ದರೂ ಈಗಲೂ ಎಚ್ಚರಿಕೆಯಿಂದ ಇದ್ದೇನೆ, ಯಾರಿಗೂ ಹ್ಯಾಂಡ್‌ಶೇಕ್ ಮಾಡಲ್ಲ, ಮಾಸ್ಕ್ ಧರಿಸುತ್ತೇನೆ, ಸ್ಯಾನಿಟೈಸರ್ ಬಳಕೆ ಮಾಡುತ್ತಿದ್ದೇನೆ, ಮನೆಯಲ್ಲಿ ಒಬ್ಬಳೆ ಇದ್ದೇನೆ, ಬೆಳಗ್ಗೆ ತಡವಾಗಿ ಏಳುವುದು, ಸ್ವಲ್ಪ ವ್ಯಾಯಾಮ ಮಾಡುವುದು, ಟಿವಿ ನೋಡುವುದು, ಸ್ವಲ್ಪ ವಿಶ್ರಾಂತಿ, ಸಹೋದರಿಯ ಮಗನ ಜತೆಗೆ ಫೋನ್‌ನಲ್ಲಿ ಮಾತನಾಡುವುದು, ಬಳಿಕ ಮತ್ತೆ ಟಿವಿ ನೋಡುವುದು ಇಷ್ಟು ಬಿಟ್ಟರೆ ಬೇರೆ ಕೆಲಸ ಇಲ್ಲ. ತೆಲುಗು, ಇಂಗ್ಲಿಷ್ ಹಾಗೂ ಹಿಂದಿಯ ಹಲವು ಸಿನೆಮಾ ನೋಡಿದ್ದೇನೆ. ನಿಮಗೆ ಆಶ್ಚರ್ಯವಾಗಬಹುದು, ಸಿನೆಮಾಗಳ ಹೆಸರು ಕೂಡ ಈಗ ನೆನಪಿಲ್ಲ, ಅಷ್ಟು ಸಿನೆಮಾಗಳ ವೀಕ್ಷಣೆ ಮಾಡಿದ್ದೇನೆ’ ಎಂದು ಸಿಂಧು ತಿಳಿಸಿದ್ದಾರೆ.