Advertisement

ಪರಿಣಾಮಕಾರಿ ಬಸ್‌ ಪಥ ಜಾರಿಯಾಗಲಿ

12:44 AM Nov 26, 2019 | Team Udayavani |

ಬೆಂಗಳೂರು: ಬಸ್‌ ಆದ್ಯತಾ ಪಥದಿಂದ ಸರಾಸರಿ 15 ನಿಮಿಷ ಸಮಯ ಉಳಿತಾಯ, ಪಥದಲ್ಲೇ ವಾಹನಗಳ ನಿಲುಗಡೆ, ಕಾಣದ ಸಾರಥಿ ವಾಹನ ಮತ್ತು ಸಿಬ್ಬಂದಿ, ಮಾರ್ಗದುದ್ದಕ್ಕೂ ಬೇಕಿದೆ ಇನ್ನಷ್ಟು ಸೂಚನಾ ಫ‌ಲಕಗಳು. ಸೆಂಟ್ರಲ್‌ ಸಿಲ್ಕ್ಬೋರ್ಡ್‌ನಿಂದ ಕೆ.ಆರ್‌.ಪುರ ನಡುವಿನ ಮಹತ್ವಾಕಾಂಕ್ಷಿ ಬಸ್‌ ಆದ್ಯತಾ ಪಥದಲ್ಲಿ ಸಂಚರಿಸುವ ಪ್ರಯಾಣಿಕರಿಂದ ಆನ್‌ಲೈನ್‌ನಲ್ಲಿ ತೂರಿಬಂದ ಅಭಿಪ್ರಾಯಗಳಿವು. ಅ.20ರಿಂದ ಉದ್ದೇಶಿತ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಬಸ್‌ ಸಂಚಾರ ಆರಂಭವಾಗಿದೆ.

Advertisement

ಅಲ್ಲಿಂದ ಈವರೆಗಿನ ಸೇವೆ ಕುರಿತು ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಸ್ಥೆಯು ಸ್ವತಃ ಪ್ರಯಾಣಿಕರಿಂದ ಅಭಿಪ್ರಾಯ ಸಂಗ್ರಹಿಸಿದೆ. ನಗರದ ಸಂಚಾರದಟ್ಟಣೆ ತಗ್ಗಿಸಲು ಹಾಗೂ ಸಮೂಹ ಸಾರಿಗೆ ಉತ್ತೇಜಿಸಲು ಪರಿಚಯಿಸಿರುವ ಬಸ್‌ ಆದ್ಯತಾ ಪಥ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿಯಾಗಿಲ್ಲ. ಇದಕ್ಕೆ ಕಾರಣ ಆದ್ಯತಾ ಪಥದ ಅಲ್ಲಲ್ಲಿ ಸಾಕಷ್ಟು ಖಾಸಗಿ ವಾಹನಗಳು ನಿಲುಗಡೆ ಮಾಡಲಾಗುತ್ತಿದೆ.

ಅದಕ್ಕೆ ಕಡಿವಾಣ ಹಾಕಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದೂ ಬಿಎಂಟಿಸಿ ಮತ್ತು ಬಿಬಿಎಂಪಿ ಹೇಳುತ್ತಿದೆ. ಸ್ಥಳದಲ್ಲಿ ಮಾತ್ರ ಅವರು ಕಾಣಿಸುತ್ತಿಲ್ಲ ಎಂದು ಪ್ರಯಾಣಿಕರು ಸಮೀಕ್ಷೆ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಆದ್ಯತಾ ಪಥದಿಂದ 45 ನಿಮಿಷದಿಂದ ಒಂದು ತಾಸು ಉಳಿತಾಯ ಆಗಲಿದೆ ಎಂದು ಬಿಎಂಟಿಸಿ ಹೇಳಿತ್ತು. ಆದರೆ, ಪ್ರಯಾಣ ಸಮಯದಲ್ಲಿ 14ರಿಂದ 15 ನಿಮಿಷ ಉಳಿತಾಯವಂತೂ ಆಗುತ್ತಿರುವುದು ಸಮಾಧಾನಕರ ಬೆಳವಣಿಗೆ.

ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ, ಇನ್ನಷ್ಟು ಸಮಯ ಉಳಿತಾಯ ಮಾಡಬಹುದು ಎಂದು ಜನ ಅಭಿಪ್ರಾಯಪಟ್ಟಿದ್ದಾರೆ. ಬಸ್‌ ಆದ್ಯತೆ ಲೈನ್‌ ಹೊರ ವರ್ತುವಲ ರಸ್ತೆಯಲ್ಲಿ ಹೇಗೆ ಕಾರ್ಯ ನಿರ್ವಹಸುತ್ತಿದೆ ? ಬಸ್‌ ಲೈನ್‌ ನಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರ ಅನುಭವ ಮತ್ತು ಸಮಸಯೆಗಳೇನು ? ಪ್ರಯಾಣಿಕರು ಎದುರಿಸುತ್ತಿರುವ ನೈಜ್ಯ ಸಮಸ್ಯೆಗಳ ಬಗ್ಗೆ ಬಿಎಂಟಿಸಿ, ಬಿಬಿಎಂಪಿ, ಬಿಟಿಎಲ್‌ ಮತ್ತು ಡಲ್ಟ್ ಸಂಸ್ಥೆಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಸಮೀಕ್ಷೆ ನಡೆಸಲಾಗಿತ್ತು.

48ರಷ್ಟು ಪ್ರಶಂಸೆ; 44ರಷ್ಟು ನೀರಸ: ಆದ್ಯತೆ ಬಸ್‌ ಪಥ ಬಳಸುತ್ತಿರುವ ಪ್ರಯಾಣಿಕರ ಪೈಕಿ ಶೇ. 75ರಷ್ಟು ಜನ ಬೆಳಿಗ್ಗೆ ಹಾಗೂ ಶೇ 20.5ರಷ್ಟು ಸಂಜೆ ಮತ್ತು ಇನ್ನುಳಿದ ಶೇ.4.5ರಷ್ಟು ಪ್ರಯಾಣಿಕರು ಇತರ ಸಮಯದಲ್ಲಿ ಸಂಚರಿಸುತಿದ್ದಾರೆ. ಪ್ರತ್ಯೇಕ ಬಸ್‌ ಪಥ ಜಾರಿಯಾದ ಬಳಿಕ ಸಂಚಾರ ವ್ಯವಸ್ಥೆ ತುಸು ಉತ್ತಮ ಗೊಂಡಿದೆ ಎಂದು ಶೇ. 48.6ರಷ್ಟು ಜನ ಪ್ರಶಂಸೆ ವ್ಯಕ್ತಪಡಿಸಿದ್ದರೆ, ಇದರಿಂದ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ಶೇ. 44.1ರಷ್ಟು ಪ್ರಯಾಣಿಕರು ಹೇಳಿದ್ದಾರೆ.

Advertisement

ಇನ್ನು ಶೇ. 10ರಷ್ಟು ಜನ ಹಿಂದಿನ ವ್ಯವಸ್ಥೆಗಿಂತಲೂ ಕೆಟ್ಟದಾಗಿದೆ ಎಂದು ಹೇಳಿದ್ದಾರೆ! ಹೆಚ್ಚಿನ ಸೂಚನಾ ಫ‌ಲಕಗಳ ಅಗತ್ಯವಿದೆ, ಖುದ್ದು ಬಿಎಂಟಿಸಿ ಚಾಲಕರೇ ಪ್ರತ್ಯೇಕ ಬಸ್‌ ಮಾರ್ಗವನ್ನು ಬಳಸುತ್ತಿಲ್ಲ, ಪ್ರತ್ಯೇಕ ಬಸ್‌ ನಿರ್ವಹಣೆಗೆ ರಸ್ತೆಯಲ್ಲಿ ಸಾರಥಿ ವಾಹನ ಮತ್ತು ಸಿಬ್ಬಂದಿ, ಮಾರ್ಷಲ್‌ಗ‌ಳು ಹಾಗೂ ಯಾವುದೇ ಟ್ರಾಫಿಕ್‌ ಪೊಲೀಸ್‌ ಕಾಣುತಿಲ್ಲ ಎಂದು ಸಿಟಿಜನ್‌ ಪಾರ್‌ ಬೆಂಗಳೂರು ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಹೀಗಿದ್ದರೂ ಪ್ರಯಾಣಿಕರ ಸಂಚಾರ ಸಮಯದಲ್ಲಿ 10ನಿಮಿಷ ಉಳಿತಾಯವಾಗುತ್ತಿದೆ ಎಂದು ಖುದ್ದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಪ್ರಯಾಣಿಕರೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರತ್ಯೇಕ ಬಸ್‌ ಲೇನ್‌ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಬಿಎಂಟಿಸಿ, ಬಿಬಿಎಂಪಿ, ಬೆಂಗಳೂರು ಸಂಚಾರ ಪೊಲೀಸ್‌ ಮತ್ತು ಡಲ್ಟ್ ನಂತಹ ಸಂಸ್ಥೆಗಳ ಒಟ್ಟಾಗಿ ಕಾರ್ಯ ನಿರ್ವಹಿಸುವುದಾಗಿ ಹೇಳಲಾಗಿತ್ತು. ಖಾಸಗಿ ವಾಹನಗಳು ಪ್ರತ್ಯೇಕ ಬಸ್‌ ಲೇನ್‌ ಬಳಸದಂತೆ,

ಖಾಸಗಿ ವಾಹನಗಳು ಅಲ್ಲಿ ನಿಲುಗಡೆ ಮಾಡದಂತೆ ಮತ್ತು ಟ್ರಾಫಿಕ್‌ ನಿಯಂತ್ರಿಸಲು ಬಿಎಂಟಿಸಿಯಿಂದ ಸಾರಥಿ, ಬಿಬಿಎಂಪಿಯಿಂದ ಮಾರ್ಷಲ್‌ ಮತ್ತು ಬೆಂಗಳೂರು ಸಂಚಾರ ಪೊಲೀಸ್‌ ನಿಂದ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ, ಶೇ.80ರಷ್ಟು ಪ್ರಯಾಣಿಕರು ಪ್ರತ್ಯೇಕ ಬಸ್‌ ಲೇನ್‌ ನಿರ್ವಹಣೆಯಲ್ಲಿ ಈ ಮೇಲಿನ ಯಾರೂ ನಮಗೆ ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ನ. 19ರಿಂದ 24ರವರೆಗೆ ನಡೆಸಿದ ಆನ್‌ಲೈನ್‌ ಸಮೀಕ್ಷೆ ಇದಾಗಿದೆ. ಇದರಲ್ಲಿ 112 ಪ್ರಯಾಣಿಕರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಕಾಣದ ಕನ್ನಡ: ಬಸ್‌ ಆದ್ಯತಾ ಪಥದಲ್ಲಿ ಕನ್ನಡ ಸೂಚನಾ ಫ‌ಲಕಗಳು ವಿರಳವಾಗಿತ್ತು ಎಂದೂ ಜನ ಆನ್‌ಲೈನ್‌ ಸಮೀಕ್ಷೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ನ. 1ರಿಂದ ಪಾಲಿಕೆ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳ ನಾಮಫ‌ಲಕಗಳಲ್ಲಿ ಶೇ. 60:40ರ ಪ್ರಮಾಣದಲ್ಲಿ ಕನ್ನಡ ಕಡ್ಡಾಯವಾಗಿ ಇರಬೇಕು ಎಂದು ನಿಯಮ ರೂಪಿಸಿದೆ. ಆದರೆ, ಸ್ವತಃ ಪಾಲಿಕೆ ಸಹಯೋಗದಲ್ಲಿ ಜಾರಿಗೊಂಡ ಪಥದಲ್ಲಿ ಕನ್ನಡ ಸೂಚನಾ ಫ‌ಲಕಗಳು ಕಡಿಮೆ ಇರುವುದು ಕಂಡುಬಂದಿದೆ!

Advertisement

Udayavani is now on Telegram. Click here to join our channel and stay updated with the latest news.

Next