ಬಾಲ್ಯ, ಯೌವನ, ಮುಪ್ಪು ಈ ಮೂರು ದಿನದ ಜೀವನದಲ್ಲಿ ಅಡಗಿದೆ ಮನುಷ್ಯನ ಬಾಳು. ವೈದ್ಯ ಲೋಕ ಹುಟ್ಟಿಗೆ ದಿನ ಸೂಚಿಸುವಷ್ಟು ಮುಂದುವರೆದಿದೆ. ಆದರೆ ಸಾವಿನ ದಿನ ನಿರ್ಧರಿತವಾಗದೇ ಮನುಷ್ಯ ತನ್ನ ಆಸ್ತಿತ್ವವನ್ನು ರೂಪಿಸಲು ಜೀವನದಲ್ಲಿ ನಾನಾ ತೆರನಾಗಿ ಪರಿತಪಿಸುತ್ತಾನೆ. ಬಾಲ್ಯದಲ್ಲಿ ದೊಡ್ಡವರನ್ನು ನೋಡಿ ನಾನು ಬೇಗ ಪ್ರೌಢಿಮೆ ಹೊಂದಿ, ಈ ಶಾಲೆ ಹೋಂವರ್ಕ್ ಇಲ್ಲದೇ ಆರಾಮವಾಗಿರಬಹುದೆಂಬ ಚಿಂತೆ. ಪ್ರೌಢಿಮೆಗೆ ಬಂದಾಗ ಛೇ ಬಾಲ್ಯವೇ ಒಳ್ಳೆದಿತ್ತು ಎಂಬ ಭಾವನೆ. ಇನ್ನೂ ವೃದ್ಧಾಪ್ಯದಲ್ಲಿ ಯಾರು ಆಸರೆಯಾಗುತ್ತಾರೆಂಬ ಆತಂಕ ಹೀಗೆ ಮನುಷ್ಯನ ನಿಲುವು ಗೊಂದಲದಲ್ಲೇ ಮುಂದುವರಿಯುತ್ತದೆ.
ಹೊಟ್ಟೆ ಹಸಿವೆಂಬುವುದಿಲ್ಲದಿದ್ದರೆ ಮನುಷ್ಯ ಯಾವುದೇ ಉನ್ನತ ಸ್ಥಾನಮಾನ, ಹುದ್ದೆ, ಆಸ್ತಿ ಸಂಪತ್ತುಗಳತ್ತ ಚಿತ್ತ ಹರಿಸುವ ಗೋಜಿಗೆ ಹೋಗುತ್ತಿರಲಿಲ್ಲವೇನೋ. ಆದರೆ ಈ ಮನುಷ್ಯನ ಹಸಿನಿಂದ ಒಂದೊಂದೇ ವಿಷಯಗಳು ಜೀವನ ಸರಪಳಿಯಲ್ಲಿ ಪೋಣಿಸುತ್ತ ಸಾಗುತ್ತವೆ. ಇಂದು ನಾವು ಸಮಾಜದಲ್ಲಿ ಕಾಣುತ್ತಿರುವುದು ಒಳಿತಿಗಿಂತ ಹೆಚ್ಚು ಕೆಡುಕಿನ ಸಂಗತಿಗಳು. ಅದು ಸಂಬಂಧಗಳ ನಡುವಿನ ಕಲಹ, ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿರುವ ಆತ್ಮಸ್ಥೈರ್ಯ, ಯುವಕರಲ್ಲಿ ತಲೆದೋರುವ ಮದ್ಯ ತಾಂಬಾಕು, ಮಾದಕ ದ್ರವ್ಯದಂತಹ ಪಿಡುಗು, ಅತ್ಯಾಚಾರ ಅನಾಚಾರ, ಭ್ರಷ್ಟಾಚಾರದಂತಹ ಸಮಸ್ಯೆಗೆ ಯಾರನ್ನು ಹೊಣೆ ಮಾಡುವುದು. ಒಂದೊಮ್ಮೆ ನಾವು ವಾಸಿಸುವ ಪರಿಸರಕ್ಕಿಂತ ಪ್ರಾಣಿ, ಪಕ್ಷಿಗಳು ವಾಸಿಸುವ ಸ್ಥಳಗಳು ಏಷ್ಟೋ ಯೋಗ್ಯವಾಗಿರುವುದು ಗಮನಿಸಬಹುದು.
ಇದಕ್ಕೆ ಕಾರಣ ಕಷ್ಟಪಡದೇ ಎಲ್ಲವೂ ದೊರಕಬೇಕು ಅನ್ನುವ ಮನೋಭಾವ. ಚೂರು ಕಷ್ಟ ಬಂದರೂ ಜೀವನದಲ್ಲಿ ಜಿಗುಪ್ಸೆಗೆ ಹೊಂದುತ್ತೇವೆ. ಹಾಗೇ ಆಧುನಿಕ ಜಗತ್ತಿನಲ್ಲಿ ಆಗುತ್ತಿರುವ ನಾನಾ ಆವಿಷ್ಕಾರಗಳು ಕೂಡ ಇದರ ಹೊಣೆಹೊತ್ತಿವೆ. ಇಂದು 4-5 ಇಂಚು ಮೊಬೈಲ್‌ನಲ್ಲಿ ನಮ್ಮ ದೈನಂದಿನ ಚಟುವಟಿಕೆಯ ಸ್ಟೇಟಸ್ ಹಾಕುವ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವಂಥ ಸಮಯ ಬಂದಿರುವುದೇ ಇದಕ್ಕೆ ಉತ್ತಮ ನಿದರ್ಶನ. ಜಗತ್ತು ಹೀಗೆಯೇ ಮುಂದುವರಿದರೆ ಭವಿಷ್ಯತ್ ಹೇಗಿರಬಹುದೋ ಎನ್ನುವ ಭಯ ಎಲ್ಲರನ್ನೂ ಕಾಡುವುದು ಸತ್ಯ.
ಜೀವನ ಸಮುದ್ರದಂತೆ. ಆಳ ಸಮುದ್ರದಲ್ಲಿ ಅಬ್ಬರದ ಅಲೆಗಳ ನಡುವೆ ಮೀನುಗಳು ಹೇಗೆ ವಾಸಿಸುತ್ತವೆಯೋ, ಹಾಗೆಯೇ ಬಂದದ್ದೆಲ್ಲಾ ಬರಲಿ ಎದುರಿಸುತ್ತೇನೆಂದುಕೊಂಡು ಮುಂದುವರೆಯುವುದನ್ನು ಕಲಿತರಷ್ಟೇ ಜೀವನ ಮತ್ತಷ್ಟು ಸುಂದರವಾಗಿ ರೂಪುಗೊಳ್ಳುತ್ತದೆ.
-ಕಾರ್ತಿಕ್ ಚಿತ್ರಾಪುರ