Advertisement

ಕಂದನಿಗೆ ದೃಷ್ಟಿ ಬಿತ್ತೇ?

12:30 AM Feb 13, 2019 | |

ಹೊರಗಡೆ ಸುತ್ತಾಡಿ, ಎಲ್ಲರಿಂದ ಮುದ್ದು ಮಾಡಿಸಿಕೊಂಡು ಮನೆಗೆ ಬಂದ ಮಗು ಒಂದೇ ಸಮನೆ ಅಳಲು ಶುರು ಮಾಡಿ, ಜ್ವರಕ್ಕೆ ತುತ್ತಾಗಿ, ಚಟುವಟಿಕೆಗಳನ್ನು ಏಕಾಏಕಿ ನಿಲ್ಲಿಸಿ ಮಂಕಾಗಿ, ಅಮ್ಮಂದಿರನ್ನು ಗಾಬರಿಗೊಳಿಸುತ್ತವೆ. ಅಂಥ ಸಂದರ್ಭದಲ್ಲಿ ಮನೆಯ ಹಿರಿಯರು, “ಮಗುವಿಗೆ ದೃಷ್ಟಿಯಾಗಿದೆ, ದೃಷ್ಟಿ ತೆಗೆದರೆ ಎಲ್ಲ ಸರಿ ಹೋಗುತ್ತೆ’ ಎಂದು ಹೇಳುತ್ತಾರೆ…

Advertisement

ಸುದೀಕ್ಷಾ ಮೊದಲ ಬಾರಿಗೆ ತಾಯಿ ಆಗಿದ್ದಾಳೆ. ತಂದೆಯಾದ ಸಂತೋಷದಲ್ಲಿ ತೇಲುತ್ತಿದ್ದಾನೆ, ಸುರೇಶ್‌. ಮಗುವಿನ ನಗು, ಅಳು, ಆಟದಲ್ಲಿ ಒಂದಾಗಿ ಪೇರೆಂಟ್‌ಹುಡ್‌ ಅನ್ನು ಸಂಭ್ರಮಿಸುವ ಅಮೂಲ್ಯ ಕ್ಷಣ ಅದು. ವಿದೇಶದಲ್ಲಿ ವಾಸವಾಗಿರುವ ಈ ದಂಪತಿ, ಬಹಳ ತಿಂಗಳುಗಳ ನಂತರ ತಮ್ಮೂರಿಗೆ ಬಂದಿದ್ದಾರೆ. ಅಪರೂಪಕ್ಕೆ ಬಂದವರು ನೆಂಟರಿಷ್ಟರ ಮನೆ, ಫ‌ಂಕ್ಷನ್‌ ಅಂತ ಸುತ್ತಾಡಿದ್ದೇ ಸುತ್ತಾಡಿದ್ದು… ಅಲ್ಲಿಯವರೆಗೆ ಏನೂ ರಗಳೆ ಮಾಡದೆ ಹಾಯಾಗಿ ಆಡಿಕೊಂಡಿರುತ್ತಿದ ಮಗು ಒಂದೇ ಸಮನೆ ಅಳಲು ಪ್ರಾರಂಭಿಸಿದೆ. ಅಳುವ ಮಗುವನ್ನು ನೋಡಿ ದಂಪತಿ ತಬ್ಬಿಬ್ಬು…

ಆಗ ಸುರೇಶ್‌ನ ಅಜ್ಜಿ ಕೈಯಲ್ಲಿ ಏನೋ ಹಿಡಿದುಕೊಂಡು ಬಂದು ಮಗುವಿನ ತಲೆಯ ಸುತ್ತ ಸುಳಿದು, ಹಣೆಗೊಂದು ಕರಿ ನಾಮ ಹಾಕಿ, “ಹೊರಗಡೆ ಹೋಗಿ ಬಂದವರು ಮಗುವಿನ ದೃಷ್ಟಿ ತೆಗೀಬೇಕಮ್ಮಾ… ಇದು ಇನ್ನೂ ಹಸುಗೂಸು. ಏನಾದರೂ ಹೆಚ್ಚು ಕಡಿಮೆ ಆದರೆ?’ ಎಂದಾಗಲೇ ಸುದೀಕ್ಷಾಳಿಗೆ ದೃಷ್ಟಿ ತೆಗೆಯುವುದರ ಮಹತ್ವ ಅರಿವಾದದ್ದು… 

ಏನಿದು ಕೆಟ್ಟ ದೃಷ್ಟಿ?
ಪುಟ್ಟ ಮಕ್ಕಳನ್ನು ನೋಡುವುದೇ ಒಂದು ಆನಂದ. ಮುದ್ದಾದ ಹಾಲ್ಗೆನ್ನೆ, ಬಟ್ಟಲು ಕಂಗಳು, ನಗುವಾಗ ಅರಳುವ ಮುಖ, ಪುಟು³ಟ್ಟ ಕೈಗಳು, ಏಳುತ್ತಾ ಬೀಳುತ್ತಾ ಇಡುವ ಹೆಜ್ಜೆಗಳು, ತೊದಲು ಮಾತು, ನಗು, ಅಳು, ಆಟ ಎಲ್ಲವೂ ತುಂಬಾ ಮುದ್ದು. ಯಾರೇ ಆಗಲಿ, ಪುಟಾಣಿ ಮಕ್ಕಳನ್ನು ಕಂಡರೆ ಒಮ್ಮೆಯಾದರೂ ಎತ್ತಿ, ಮುದ್ದಾಡದೆ ಇರರು. ಹೀಗೆ ಮಕ್ಕಳು ಎಲ್ಲರ ಕಣ್ಮನ ಸೆಳೆಯುವ ಕೇಂದ್ರಬಿಂದುಗಳು. ಹೊರಗಡೆ ಸುತ್ತಾಡಿ, ಎಲ್ಲರಿಂದ ಮುದ್ದು ಮಾಡಿಸಿಕೊಂಡು ಮನೆಗೆ ಬಂದ ಮಗು ಒಂದೇ ಸಮನೆ ಅಳಲು ಶುರು ಮಾಡಿ, ಜ್ವರಕ್ಕೆ ತುತ್ತಾಗಿ, ಚಟುವಟಿಕೆಗಳನ್ನು ಏಕಾಏಕಿ ನಿಲ್ಲಿಸಿ ಮಂಕಾಗಿ, ಅಮ್ಮಂದಿರನ್ನು ಗಾಬರಿಗೊಳಿಸುತ್ತವೆ. ಅಂಥ ಸಂದರ್ಭದಲ್ಲಿ ಮನೆಯ ಹಿರಿಯರು, “ಮಗುವಿಗೆ ದೃಷ್ಟಿಯಾಗಿದೆ, ದೃಷ್ಟಿ ತೆಗೆದರೆ ಎಲ್ಲ ಸರಿ ಹೋಗುತ್ತೆ’ ಎಂದು ಹೇಳುತ್ತಾರೆ.

ದೃಷ್ಟಿ ತೆಗೆಯೋದು ಹೇಗೆ? 
ಮಗುವನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸಲು ಹಿಂದಿನವರು ಹಲವಾರು ವಿಧಾನಗಳನ್ನು ಪಾಲಿಸುತ್ತಿದ್ದರು. ಮಗುವಿನ ಹಣೆಗೆ ಕಪ್ಪು ಬೊಟ್ಟು ಇಡುವುದೂ ದೃಷ್ಟಿ ತಡೆಯುವ ತಂತ್ರಗಳಲ್ಲೊಂದು. ಕಪ್ಪು ಬಣ್ಣವು ಮಗುವಿನ ಅಂದವನ್ನು ಮರೆ ಮಾಚಿ, ನೋಡುವವರ ದೃಷ್ಟಿಯನ್ನು ಅದರತ್ತ ಸೆಳೆದುಕೊಳ್ಳುತ್ತದೆ. ಇದರಿಂದ ಮಗುವಿನ ಮೇಲೆ ಯಾರ ದೃಷ್ಟಿಯೂ ತಾಕದು ಎನ್ನುವುದು ಹಿರಿಯರ ನಂಬಿಕೆ. ಮಗುವಿಗೆ ತುಪ್ಪ/ ಎಣ್ಣೆ ಮಸಾಜ್‌ ಮಾಡಿ, ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ, ಕೈ ಮುಷ್ಟಿಯಲ್ಲಿ ಕಲ್ಲುಪ್ಪು, ಬೆಳ್ಳುಳ್ಳಿ ಸಿಪ್ಪೆ, ಸಾಸಿವೆ ಹಿಡಿದುಕೊಂಡು, ಅದನ್ನು ಮಗುವಿನ ತಲೆಗೆ ಮೂರು ಸುತ್ತು ಸುಳಿದು, “ನೋಡಿದವರ, ಆಡಿದವರ ಕೆಟ್ಟ ದೃಷ್ಟಿ ಬೀಳದಿರಲಿ’ ಎಂದು ಕೆಂಡ ಇರುವ ಒಲೆಗೆ ಕೈಲಿದ್ದ ವಸ್ತುಗಳನ್ನು ಹಾಕಲಾಗುತ್ತದೆ. ಆಗ ಚಿಟಿಚಿಟಿ ಶಬ್ದವಾದರೆ,  ಮಗುವಿಗೆ ತಾಕಿದ್ದ ಎಲ್ಲ ದೃಷ್ಟಿ ದೂರವಾಯಿತು ಎನ್ನುತ್ತಾರೆ. ಹಿಂದೆಲ್ಲಾ ಒಲೆಯ ಬದಿಯ ಮಸಿಯನ್ನು ಮಗುವಿನ ಹಣೆಗೆ ಹಚ್ಚುವ ಪದ್ಧತಿಯೂ ರೂಢಿಯಲ್ಲಿತ್ತು.

Advertisement

ಬದಲಾದ ಪದ್ಧತಿಗಳು…
ಆದರೆ, ಈಗ ಕಾಲ ಬದಲಾಗಿದೆ. ಹಳ್ಳಿಗಳಲ್ಲೂ ಕಟ್ಟಿಗೆಯ ಒಲೆಗಳಿಲ್ಲ. ಹಾಗಾಗಿ, ಸಂಪ್ರದಾಯಗಳಲ್ಲಿಯೂ ಕೊಂಚ ಬದಲಾವಣೆಗಳಾಗಿವೆ. ಕಲ್ಲುಪ್ಪು, ಬೆಳ್ಳುಳ್ಳಿ ಸಿಪ್ಪೆ, ಸಾಸಿವೆಯನ್ನು ಒಲೆಗೆ ಹಾಕುವ ಬದಲು, ಸ್ಟೌ ಮೇಲೆ ಬಾಣಲೆ ಇಟ್ಟು ಬಿಸಿ ಮಾಡಿ, ಅದಕ್ಕೆ ಹಾಕಿ, ಚಿಟಿಚಿಟಿ ಎನಿಸುತ್ತಾರೆ. ಮಸಿಯ ಬದಲು ಕಾಡಿಗೆಯನ್ನು ಹಣೆಗೆ, ಕೆನ್ನೆಗೆ, ಅಂಗಾಲಿಗೆ ಹಚ್ಚುತ್ತಾರೆ. 

ಆಭರಣದ ಹಿಂದಿನ “ದೃಷ್ಟಿ’
ಮಗುವಿನ ಕೈಗೆ ಹಾಕುವ ಕರಿಮಣಿ ಬಳೆ ಕೂಡಾ ದೃಷ್ಟಿಯಾಗದಂತೆ ತಡೆಯುವ ಸಾಧನ. ಕಡಿಮೆ ದರದ ಕಪ್ಪು ಮಣಿಗಳ ಬಳೆಗಳಿಂದ ಹಿಡಿದು, ಚಿನ್ನ, ಬೆಳ್ಳಿ, ಪಂಚಲೋಹದ ಬಳೆಗಳನ್ನು ಮಕ್ಕಳಿಗೆ ತೊಡಿಸುವುದು ಕೂಡ ಇದೇ ಉದ್ದೇಶದಿಂದ. ನಾಮಕರಣದ ಸಮಯದಲ್ಲಿ ಮಗುವಿನ ಸೊಂಟಕ್ಕೆ ಕಟ್ಟುವ ಚಿನ್ನದ ಉರುಕನ್ನು (ತುಂಡು) ಒಳಗೊಂಡಿರುವ ಕೆಂಪು ಪಟ್ಟೆ ನೂಲು ಕೂಡಾ, ಕೆಟ್ಟ ದೃಷ್ಟಿಯಿಂದ ಮಗುವನ್ನು ರಕ್ಷಿಸುತ್ತದೆ. ಬೆಳ್ಳಿಯು ನಕಾರಾತ್ಮಕ ಅಂಶಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇರುವುದರಿಂದ, ಮಗು ಸ್ವಲ್ಪ ದೊಡ್ಡದಾದ ನಂತರ ಸೊಂಟಕ್ಕೆ ಬೆಳ್ಳಿಯ ಉಡಿದಾರ ಕಟ್ಟುತ್ತಾರೆ. ಕೆಲವರು ಮಕ್ಕಳ ಕೊರಳಿಗೆ ಕಪ್ಪು ನೂಲು ಕಟ್ಟುವುದೂ ಉಂಟು. ಗಂಡಾಗಲಿ, ಹೆಣ್ಣಾಗಲಿ, ಸಣ್ಣ ಮಕ್ಕಳ ಕಾಲಿಗೆ ಬೆಳ್ಳಿ ಗೆಜ್ಜೆ ತೊಡಿಸುವುದರ ಹಿಂದಿರುವ ನಂಬಿಕೆಯೂ ದೃಷ್ಟಿಯದ್ದೇ.

ಅವರವರ ಭಾವಕ್ಕೆ…
ವೈಜ್ಞಾನಿಕವಾಗಿ ಮುಂದುವರಿದಿರುವ ಇಂದಿನ ದಿನಮಾನದಲ್ಲಿ, ಕೆಟ್ಟ ದೃಷ್ಟಿಯನ್ನು ನಂಬದವರೂ ಇದ್ದಾರೆ. ಯಾರೋ ಮಗುವನ್ನು ನೋಡಿ, ಮಾತಾಡಿಸಿದ ಮಾತ್ರಕ್ಕೆ ಮಗುವಿನ ಆರೋಗ್ಯ ಕೆಡುತ್ತದೆ ಎನ್ನುವುದೆಲ್ಲ ಸುಳ್ಳು ಎಂಬುದು ಅವರ ವಾದ. ದೃಷ್ಟಿ ನಿವಾರಣೆಗಾಗಿ ಅಲ್ಲದಿದ್ದರೂ, ಮಕ್ಕಳು ಚಂದ ಕಾಣಿಸಲಿ ಎಂದು ಕಪ್ಪು ಬೊಟ್ಟು, ಕಪ್ಪು ಬಳೆ, ಗೆಜ್ಜೆ, ದೃಷ್ಟಿ ಸರ ಇತ್ಯಾದಿಗಳನ್ನು ಮಗುವಿಗೆ ಹಾಕಿ ಸಂತಸ ಪಡುವವರ ಸಂಖ್ಯೆಯೂ ಬಹಳಷ್ಟಿದೆ. ಮಾಡರ್ನ್ ಯುವತಿಯರೂ ದೃಷ್ಟಿಯಾಗದಿರಲೆಂದು ತಮ್ಮ ಕಾಲಿಗೆ ಕಪ್ಪು ನೂಲು ಧರಿಸುತ್ತಾರೆ. 

ವಂದನಾ ಕೇವಳ

Advertisement

Udayavani is now on Telegram. Click here to join our channel and stay updated with the latest news.

Next