Advertisement
ಈ ಹಿಂದೆ ಈ ಪ್ರಕರಣದಲ್ಲಿ ಹಣ ವರ್ಗಾವಣೆ ಮಾಡುತ್ತಿದ್ದ ಫೈಸಲ್, ಫಜಲ್, ಸಾಹಿಲ್ ಹಾಗೂ ಮುನಾಫ್ ಎಂಬ ನಾಲ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ದ್ದರು. ಆದರೆ, ಪ್ರಕರಣದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದು, ಆತನ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ.
Related Articles
Advertisement
ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಲ್ಲೂ ಈ ಗ್ಯಾಂಗ್ ಹವಾಲ ದಂಧೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಸುಮಾರು 2,886 ಬ್ಯಾಂಕ್ ಅಕೌಂಟ್‌ಗಳಿಗೆ ಆರೋಪಿ ಗಳು 25 ಬ್ಯಾಂಕ್ ಖಾತೆಗಳಿಂದ ಸಾವಿರಾರು ಕೋಟಿ ಹಣ ವರ್ಗಾವಣೆ ಮಾಡಿದ್ದಾರೆ. ಅದರಲ್ಲಿ ಅಧಿಕೃತವಾಗಿ 800 ಖಾತೆಗಳನ್ನು ಮಾತ್ರ ಪತ್ತೆಹಚ್ಚಲಾಗಿದೆ. ಉಳಿದ ಖಾತೆಗಳ ಬಗ್ಗೆ ವಿವರ ಪಡೆದುಕೊಳ್ಳಲಾಗುವುದು. ಈ ಎಲ್ಲಾ ಖಾತೆಗಳಿಗೂ ಸೌದಿ ಅರೆಬಿಯಾ, ದುಬೈ ಮೂಲದಿಂದ ಹಣ ಬಂದಿರಬಹುದು ಎಂಬ ಶಂಕೆ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಯಾರೊಬ್ಬರು ದೂರು ನೀಡಿಲ್ಲ: ಆರೋಪಿ ಗಳು ಇದುವರೆಗೂ ಸುಮಾರು 800 ಬ್ಯಾಂಕ್ ಖಾತೆಗಳಿಂದ 70 ಕೋಟಿಯಷ್ಟು ಹಣ ವರ್ಗಾ ವಣೆ ಮಾಡಿರುವುದು ಪ್ರಾಥಮಿಕ ತನಿಖೆಯ ವೇಳೆ ಪತ್ತೆಯಾಗಿದೆ. ಅಷ್ಟು ಖಾತೆಗಳಲ್ಲಿನ ವ್ಯವಹಾರವನ್ನು ತಡೆಹಿಡಿಯಲಾಗಿದೆ. ಆದರೆ, ತಡೆಹಿಡಿಯಲಾಗಿರುವ ಖಾತೆಗಳ ಪೈಕಿ ಓರ್ವ ಖಾತೆದಾರ ಮಾತ್ರ ತನ್ನ ಖಾತೆಯಿಂದ ಹಣ ತೆಗೆಯಲಾಗುತ್ತಿಲ್ಲ ಎಂದು ಪೊಲೀಸ್ ಠಾಣೆಗೆ ಬಂದಿದ್ದಾರೆ. ಉಳಿದವರು ಯಾರು ಇದುವರೆಗೂ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದರು.
ಐಟಿ-ಇಡಿಗೆ ಮಾಹಿತಿ
ಹವಾಲ ದಂಧೆ ಪ್ರಕರಣದಲ್ಲಿ ನೂರಾರು ಕೋಟಿ ರೂ. ವರ್ಗಾವಣೆಯಾಗಿರುವ ಬಗ್ಗೆ ಪೊಲೀಸರು ಈಗಾಗಲೇ ಆದಾಯ ತೆರಿಗೆ ಇಲಾಖ ಅಧಿಕಾರಿಗಳು ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳ ಅಧಿಕಾರಿಗಳು ತನಿಖೆ ಮುಂದುವರಿಸುವ ಸಾಧ್ಯತೆ ಇದೆ.
ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ವ್ಯವಹಾರ
ಆರೋಪಿಗಳು “ಸಿಕೆ, ಎಫ್ಎಂಎಫ್’ ಎಂಬ ಎರಡು ವಾಟ್ಸ್ ಆ್ಯಪ್ ಗ್ರೂಪ್ ಮಾಡಿಕೊಂಡಿದ್ದರು. ಅದರಲ್ಲಿ ರಿಯಾಜ್ ಪ್ರಮುಖವಾಗಿದ್ದ. ಯಾರು ಏನು ಮಾಡಬೇಕು ಎಂಬ ಸಂದೇಶಗಳನ್ನು ನೀಡುತ್ತಿದ್ದ. ಅಲ್ಲದೇ, ಹಣ ವರ್ಗಾವಣೆ ಚರ್ಚೆ, ಖಾತೆ ಸಂಖ್ಯೆ, ಯಾರಿಗೆ ವರ್ಗಾವಣೆ ಮಾಡಬೇಕು ಎಂಬುದು ಈ ಗ್ರೂಪ್ ಮೂಲಕ ನಡೆಯುತ್ತಿತ್ತು. ಆರೋಪಿಗಳು ಹಣ ಡೆಪಾಸಿಟ್ ಮಾಡಿದ ರಶೀದಿಗಳನ್ನೂ ಇದರಲ್ಲಿ ಹಾಕಬೇಕಿತ್ತು.
ಅಲ್ಲದೇ, ಪ್ರತಿಯೊಬ್ಬರು ನಿತ್ಯ 30 ರಿಂದ 35 ಲಕ್ಷ ಹಣ ಡೆಪಾಸಿಟ್ ಮಾಡುತ್ತಿದ್ದರು ಎಂಬ ಮಾಹಿತಿ ತನಿಖೆ ವೇಳೆ ಬಯಲಾಗಿದೆ. ರಿಯಾಜ್ ವಿಳಾಸದ ಜತೆಗೆ ಒಂದು ಕೋಡ್ ವರ್ಡ್ ಕೂಡ ಹೇಳುತ್ತಿದ್ದ. ಈ ಕೋಡ್ವರ್ಡ್ ಮೂಲಕ ವ್ಯವಹಾರ ನಡೆಸಲಾಗುತ್ತಿತ್ತು.
ಸೌದಿಗೆ ಹಾರಿದ ಕಿಂಗ್‌ಪಿನ್‌ಗಳು
ಈ ಹವಾಲಾ ದಂಧೆಯ ಕಿಂಗ್ ಪಿನ್ ಕೇರಳ ಮೂಲದ ರಿಯಾಜ್ ಮತ್ತು ಮನಸ್ ಸಹೋದರರಾಗಿದ್ದಾರೆ. ರಿಯಾಜ್ ಕೇರಳದಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾನೆ. ರಿಯಾಜ್ ಮತ್ತು ಮನಸ್ ಬೆಂಗಳೂರಲ್ಲಿದ್ದ ನಾಲ್ವರನ್ನ ಆಪರೇಟ್ ಮಾಡುತ್ತಿದ್ದರು. ವಾಟ್ಸ್ ಆ್ಯಪ್ನಲ್ಲಿ ಬ್ಯಾಂಕ್ ಅಕೌಂಟ್ ನಂಬರ್ ಕಳುಹಿಸಿ ಹಣ ಹಾಕಿಸುತ್ತಿದ್ದರು.
ಕೇರಳದಿಂದ ಬಾಕ್ಸ್ ಗಳಲ್ಲಿ ಬರುತ್ತಿದ್ದ ಹಣವನ್ನು ಆರೋಪಿಗಳು ಪಡೆದು ಅದನ್ನು ಕಿಂಗ್‌ಪಿನ್‌ಗಳು ಸೂಚಿಸಿದ ಖಾತೆಗೆ ಡೆಪಾಸಿಟ್ ಆನ್ ಲೈನ್ ಮೂಲಕ ವರ್ಗಾಯಿಸುತ್ತಿದ್ದರು. ಇದೀಗ ರಾಜ್ಯದಲ್ಲಿ ಹವಾಲ ದಂಧೆ ಪ್ರಕರಣ ದಾಖಲಾಗಿ ನಾಲ್ವರು ಆರೋಪಿಗಳು ಬಂಧನವಾಗುತ್ತಿದ್ದಂತೆ ಸಹೋದರರಿಬ್ಬರು ಸೌದಿ ಅರೆಬಿಯಾಕ್ಕೆ ಹೋಗಿದ್ದಾರೆ ಎನ್ನಲಾಗುತ್ತಿದೆ.