ಯಾದಗಿರಿ: ಜಿಲ್ಲೆಯ ಹತ್ತಿಕುಣಿ ಜಲಾಶಯಕ್ಕೆ ಯಾವುದೇ ಒಳಹರಿವಿನ ಮೂಲಗಳಿಲ್ಲ. ನಿಸರ್ಗವೇ ನೀರು ಸಂಗ್ರಹಕ್ಕೆ ಆಧಾರ. ಹಾಗಿದ್ದರೂ ಹಿಂಗಾರು ಹಂಗಾಮಿನಲ್ಲಿ ಜಲಾಶಯ ರೈತರಿಗೆ ಆಸರೆಯಾಗಿದೆ. ಜಲಾಶಯದಿಂದ ಸುಮಾರು 5,300 ಎಕರೆ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಹಿಂಗಾರು ಹಂಗಾಮಿನಲ್ಲಿ ನೀರು ಹರಿಸಲಾಗುತ್ತಿದ್ದು, ಈ ಭಾಗದ ರೈತರ ಜೀವನಾಡಿಯಾಗಿದೆ.
ಜಿಲ್ಲಾದ್ಯಂತ ಭೀಕರ ಬರದಿಂದ ನದಿ, ಕೆರೆಗಳು ಬತ್ತಿ ಹೋಗಿದ್ದು, ಹತ್ತಿಕುಣಿ ಜಲಾಶಯದ ಅನುಪಯುಕ್ತ ನೀರಿನ ಸಂಗ್ರಹ ಮಟ್ಟವೂ ಇಳಿಕೆಯಾಗಿದೆ. 22.88 ಮೀಟರ್ ಎತ್ತರ, 923 ಮೀಟರ್ ಉದ್ದ ಇರುವ ಜಲಾಶಯಕ್ಕೆ 9 ಗೇಟ್‌ಗಳಿವೆ. 0.352 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಅನುಪಯುಕ್ತ ನೀರಿನ ಸಾಮರ್ಥ್ಯ 0.0719 ಟಿಎಂಸಿ ಇದ್ದು, ಇದರಲ್ಲಿಯೂ ಆವಿಯಾಗಿ ಪ್ರಸ್ತುತ ಕೇವಲ 0.0626 ಟಿಎಂಸಿ ನೀರು ಉಳಿದಿದೆ.
ಜಲಾಶಯದಿಂದ ಹತ್ತಿಕುಣಿ, ಯಡ್ಡಳ್ಳಿ, ಹೊನಗೇರಾ ಹಾಗೂ ಬಂದಳ್ಳಿ ಗ್ರಾಮಗಳ ರೈತರ ಜಮೀನುಗಳಿಗೆ ಕಾಲುವೆ ಮೂಲಕ ನೀರು ಹರಿಸಲಾಗುತ್ತದೆ. ಕಳೆದ ಬಾರಿ ಜಲಾಶಯದಲ್ಲಿ 15 ಅಡಿ ನೀರಿನ ಸಂಗ್ರಹ ಇತ್ತು. ಪ್ರಸಕ್ತ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ 14 ಅಡಿ ನೀರು ಸಂಗ್ರಹವಾಗಿತ್ತು. ಇದರಿಂದ ಅಂದಾಜು 2,800 ಎಕರೆ ಪ್ರದೇಶದಲ್ಲಿ ರೈತರ ಜಮೀನಿಗೆ ನೀರು ಹರಿಸಿದ್ದರಿಂದ ಜೋಳ ಬೆಳೆಯಲು ಸಹಕಾರಿಯಾಗಿತ್ತು. ರೈತರ ಜಮೀನುಗಳಿಗೆ ಹರಿಸಿದ ನೀರು, ಅಲ್ಲಲ್ಲಿ ತಗ್ಗು ಪ್ರದೇಶದಲ್ಲಿ ಉಳಿದುಕೊಳ್ಳುತ್ತಿದ್ದು, ಈ ನೀರು ಜಾನುವಾರುಗಳಿಗೆ ಕುಡಿಯಲು ಆಸರೆಯಾಗಿದೆ.
ಸತತ ಬರದಿಂದ ಇಲ್ಲಿನ ಪ್ರದೇಶ ತತ್ತರಿಸಿರುವುದರಿಂದ ಸುಮಾರು 10 ವರ್ಷಗಳಿಂದ ಕಾಲುವೆಗಳ ಮೂಲಕ ನಿಗದಿತ ಪ್ರದೇಶಗಳಿಗೆ ತಲುಪಬೇಕಿದ್ದ ನೀರು ತಲುಪುತ್ತಿಲ್ಲ ಎನ್ನುವುದು ರೈತರ ಅಳಲು. ಜಲಾಶಯದ ಹೂಳು ತೆಗೆದು ಹೆಚ್ಚಿನ ನೀರು ಸಂಗ್ರವಾಗುವಂತೆ ಕ್ರಮ ಕೈಗೊಳ್ಳಬೇಕು. ಕಾಲುವೆ ದುರಸ್ತಿಗೊಳಿಸಿ ಕೊನೆ ಭಾಗದ ರೈತರಿಗೆ ನೀರು ತಲುಪುವಂತೆ ಕ್ರಮ ವಹಿಸಬೇಕು ಎಂಬುದು ರೈತರ ಆಗ್ರಹ.
* ಅನೀಲ ಬಸೂದೆ