Advertisement

ದೇವಿ ಮಹಾತ್ಮೆ : ಸ್ತ್ರೀ ಶಕ್ತಿಗೆ ಶರಣು

04:08 PM Apr 08, 2020 | Suhan S |

ಇದ್ದುದರಲ್ಲಿಯೇ ಅಡುಗೆ ಮಾಡುತ್ತಾ, ಮಕ್ಕಳನ್ನು ಸಂಭಾಳಿಸುತ್ತಾ, ಹಿರಿಯರ ಆರೋಗ್ಯ ಕೆಡದಿರಲಿ ಅಂತ ಹೆಚ್ಚಿನ ಕಾಳಜಿ ಮಾಡುತ್ತಾ, ಮನೆಯಲ್ಲೇ ಕುಳಿತು ಕೆಲಸ ಮಾಡುವ ಗಂಡನಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾ… ಹೀಗೆ, ಯಾವ ಯೋಧರಿಗೂ ಕಡಿಮೆ ಇಲ್ಲದಂತೆ ದುಡಿಯುತ್ತಲೇ ಇರುವ ಮನೆಯೊಡತಿಗೊಂದು ಸಲಾಂ ಸಲ್ಲಲೇಬೇಕಪ್ಪಾ…

Advertisement

 

“ನಿಂಗೇನು? ಯಾವಾಗ್ಲೂ ಮನೆಯಲ್ಲೇ ಇರ್ತೀಯಾ. ಆಫೀಸು, ಡೆಡ್‌ಲೈನು, ಇಂಥವೆಲ್ಲ ಎಷ್ಟು ಕಷ್ಟ ಅಂತ ನಿಂಗೆ ಹೇಗೆ ಗೊತ್ತಾಗ್ಬೇಕು…’- ಈ ಮಾತನ್ನು ಹೆಂಡತಿಗೆ ಅದೆಷ್ಟು ಬಾರಿ ಹೇಳಿದ್ದೇನೋ ಲೆಕ್ಕವಿಲ್ಲ. ಪ್ರತಿದಿನ ಬೆಳಗ್ಗೆ 8 ಗಂಟೆಗೆ ಮನೆ ಬಿಟ್ಟು, ರಾತ್ರಿ 8 ಗಂಟೆ ಮೇಲೆಯೇ ಮನೆ ಸೇರುತ್ತಿದ್ದ ನನಗೆ, ಮನೆಯೊಳಗೇ ಆರಾಮಾಗಿ (ಹಾಗೆ ನಾನು ಅಂದುಕೊಂಡಿದ್ದೆ) ಇರುವ ಹೆಂಡತಿಯನ್ನು ಕಂಡರೆ ಹೊಟ್ಟೆಕಿಚ್ಚಾಗುತ್ತಿತ್ತು. ಆದರೆ, ಕಳೆದ ಹದಿನೈದು ದಿನದಿಂದ ಮನೆಯಲ್ಲಿಯೇ ಇದ್ದೀನಲ್ಲ, ಈಗ ಗೊತ್ತಾಗುತ್ತಿದೆ ಆಕೆ ಎಷ್ಟು ಕೆಲಸ ಮಾಡುತ್ತಾಳೆ ಅಂತ.

ಪ್ರತಿನಿತ್ಯ ಬೆಳಗ್ಗೆ ಏಳೂವರೆಯೊಳಗೆ ಮಗಳನ್ನು ಸ್ಕೂಲ್‌ ವ್ಯಾನ್‌ ಹತ್ತಿಸಿ, ಎಂಟು ಗಂಟೆಯೊಳಗೆ ನನಗೂ ತಿಂಡಿ, ಲಂಚ್‌ ಬಾಕ್ಸ್ ಕೊಟ್ಟು ಆಫೀಸ್‌ಗೆ ಕಳಿಸಿ, ಮಗನನ್ನು ಎಬ್ಬಿಸಿ, ಅವನನ್ನು ಒಂಬತ್ತು ಗಂಟೆಗೆ ಪ್ರಿ ಸ್ಕೂಲ್‌ ಗೇಟ್‌ನ ತನಕ ಬಿಟ್ಟು, ಅಷ್ಟರೊಳಗೆ ಸ್ನಾನ-ಪೂಜೆ ಮುಗಿಸಿರುವ ಮಾವನಿಗೆ ತಿಂಡಿ ಕೊಟ್ಟ ಮೇಲೆಯೇ, ಆಕೆಗೆ ತಿಂಡಿ ತಿನ್ನಲು ಸಮಯ ಸಿಗುವುದು. ಆಮೇಲೆ ಮಧ್ಯಾಹ್ನದ ಅಡುಗೆ, ಮನೆ ಕ್ಲೀನಿಂಗ್‌, ಮಗನನ್ನು ಸ್ಕೂಲ್‌ನಿಂದ ಕರೆ ತರುವುದು, ಮಗಳಿಗೆ ಸಂಜೆಯ ಸ್ನ್ಯಾಕ್ಸ್‌ ತಯಾರಿ, ಅವಳ ಹೋಂ ವರ್ಕ್‌, ಮಾವನಿಗೆ ಕಾಫಿ, ರಾತ್ರಿ ಅಡುಗೆ… ಹೀಗೆ, ಅವಳಿಗೆ ಅವಳೇ ಡೆಡ್‌ ಲೈನ್‌ ಹಾಕಿಕೊಂಡು ಕೆಲಸ ಮಾಡುತ್ತಾಳೆ.

ಕಳೆದ ಕೆಲವು ದಿನಗಳಿಂದ ಮಕ್ಕಳಿಗೆ ಶಾಲೆ ಇಲ್ಲ, ನನಗೆ, ವರ್ಕ್‌ ಫ್ರಮ್‌ ಹೋಂ ಸಿಕ್ಕಿದೆ. ಆದರೆ, ಅವಳ ಕೆಲಸದಲ್ಲಿ ಮಾತ್ರ ಒಂಚೂರೂ ಬದಲಾಗಿಲ್ಲ. ನಿಜ ಹೇಳಬೇಕೆಂದರೆ, ಅವಳ ವರ್ಕ್‌ ಲೋಡ್‌ ಹೆಚ್ಚೇ ಆಗಿದೆ. ಸ್ವಲ್ಪ ಲೇಟಾಗಿ ಎದ್ದು, ಆಫೀಸ್‌ ಕೆಲಸ ಅಂತ ನಾನು ಲ್ಯಾಪ್‌ಟಾಪ್‌ ಮುಂದೆ ಕುಳಿತುಬಿಡುತ್ತೇನೆ. ಸ್ಕೆçಪ್‌ನಲ್ಲಿ ಮೀಟಿಂಗ್‌ ಇದ್ದರಂತೂ, “ತಿಂಡಿಯನ್ನು ಇಲ್ಲಿಗೇ ತಂದು ಕೊಡು’ ಅಂತ ಸನ್ನೆ ಮಾಡಿ ತಿಳಿಸುತ್ತೇನೆ. ಅಷ್ಟೊತ್ತಿಗೆ ಮಕ್ಕಳೇನಾದರೂ ಗಲಾಟೆ ಮಾಡತೊಡಗಿದರೆ, ನನ್ನ ಕೆಲಸಕ್ಕೆ ತೊಂದರೆ ಆಗದಂತೆ ಅವರನ್ನು ಸುಮ್ಮನಾಗಿಸುವುದೂ ಅವಳದ್ದೇ ಕೆಲಸ. ಶಾಲೆಗೆ ಹೋಗುವ ಗಡಿಬಿಡಿ ಇಲ್ಲದೆ, ಮಕ್ಕಳನ್ನು ಹಿಡಿಯುವವರಿಲ್ಲ. ಈ ತಿಂಡಿ ಬೇಡ, ಆ ತರಕಾರಿ ನಂಗೆ ಸೇರಲ್ಲ ಅಂತೆಲ್ಲ ಕ್ಯಾತೆ ತೆಗೆಯುತ್ತಾರೆ. ಅವರನ್ನು ಹ್ಯಾಂಡಲ್‌ ಮಾಡಲು ಅಪ್ಪಂದಿರಿಗೆ ಸಾಧ್ಯವಿಲ್ಲ ಬಿಡಿ.

Advertisement

ಅಗತ್ಯ ವಸ್ತುಗಳಿಗೇ ತತ್ವಾರ ಆಗಿರುವ ಈ ಸಮಯದಲ್ಲಿ, ಅದು ಹೇಗೆ ಕಡಿಮೆ ಸಾಮಗ್ರಿಗಳಲೇ ರುಚಿಕಟ್ಟಾಗಿ ಅಡುಗೆ ಮಾಡುತ್ತಿದ್ದಾಳ್ಳೋ ನಾ ಕಣೆ. ತಿಂಡಿ ತಿಂದು ಅರ್ಧ ಗಂಟೆ ಆಗುವಷ್ಟರಲ್ಲಿ ಟೀ ಬೇಕು ಅನ್ನಿಸುತ್ತದೆ. ಆಫೀಸ್‌ನಲ್ಲಿ ಆಗಾಗ ಟೀ ಬ್ರೇಕ್‌ ತಗೊಂಡು ಅಭ್ಯಾಸ ನೋಡಿ. ಪಾಪ, ನಾನಿದ್ದಲ್ಲಿಗೇ ಟೀ ತಂದು ಕೊಡುತ್ತಾಳೆ. ಹೀಗೆ ದಿನದಲ್ಲಿ ನಾಲಗಕೈದು ಬಾರಿ ಟೀ ಮಾಡುವ ಎಕ್ಸಾಟ್ರಾ ಕೆಲಸ ಅವಳ ಪಾಲಿಗೆ ಬಂದಿದೆ. ಮನೆಯಲ್ಲಿ ಒಬ್ಬಳೇ ಇರುವಾಗ, ತನ್ನ ಪಾಡಿಗೆ ತಾನು ಹಾಡುತ್ತಾ, ಹಾಡು ಕೇಳುತ್ತಾ ಕೆಲಸ ಮಾಡುವುದು ಅವಳಿಗೆ ರೂಢಿ.  ಆದರೀಗ, ನನ್ನ ಆಫೀಸ್‌ ಕಾಲ್‌ಗೆ ಡಿಸ್ಟರ್ಬ್ ಆಗಬಾರದು ಅಂತ ಅವೆಲ್ಲಾ ಬಂದ್‌ ಆಗಿವೆ. ಜೋರಾಗಿ ಮಾತನಾಡಿದರೆ, ಕುಕ್ಕರ್‌ ವಿಷಲ್‌ ಕೇಳಿದರೆ, ಪಾತ್ರೆಯ ಸದ್ದಾದರೆ, ಮಕ್ಕಳ ಗಲಾಟೆ ಜೋರಾದರೆ, “ಮಂಗಳಾ, ನಿಧಾನ…’ ಅಂತ ಗದರಿಸಿಬಿಡುತ್ತೇನೆ. ಟೀಮ್‌ ಲೀಡರ್‌ನ ಕಡೆಯಿಂದಲೇ ಕುಕ್ಕರ್‌ ಸದ್ದು, ಪಾತ್ರೆ ಬಿದ್ದ ಸೌಂಡು ಕೇಳಿದರೆ ಏನು ಚೆನ್ನ ಹೇಳಿ!

ಮಗನಿಗೆ ಇನ್ನೂ ನಾಲ್ಕು ವರ್ಷ. ಅವನು ದಿನಕ್ಕೊಮ್ಮೆ ತನ್ನೆಲ್ಲ ಆಟಿಕೆಗಳನ್ನು ಹೊರಕ್ಕೆ ತೆಗೆದು, ಗೊಂಬೆಗಳ ರುಂಡ-ಮುಂಡ ಚೆಂಡಾಡಿ, ಕಾರು- ಬಸ್ಸುಗಳಿಗೆ ಆಕ್ಸಿಡೆಂಟ್‌ ಮಾಡಿಸಿ, ಆಟ ಬೋರಾಯ್ತು ಎಂದು ಎದ್ದುಬಿಡುತ್ತಾನೆ. ಮಗಳಿಗೋ, ಲಾಕ್‌ ಡೌನ್‌ ಸಮಯದಲ್ಲಿ ಏನೇನೆಲ್ಲ ಕಲಿಯುವ ಆಸಕ್ತಿ. ಒಂದು ದಿನ ಹಳೆಯ ನ್ಯೂಸ್‌ ಪೇಪರ್‌ ಬಂಡಲನ್ನು ಎಳೆದು ಹಾಕಿದರೆ, ಇನ್ನೊಂದು ದಿನ ಪೇಪರ್‌ ಕ್ರಾಫ್ಟ್ ಅಂತ ಅದನ್ನೆಲ್ಲ ಸಣ್ಣದಾಗಿ ಕತ್ತರಿಸಿ, ಮನೆ ತುಂಬಾ ಹರಡುತ್ತಾಳೆ.

ಮಕ್ಕಳಾಟದಿಂದ ರಣರಂಗವಾಗಿರೋ ಮನೆಯನ್ನು ಅವಳು ಕ್ಲೀನ್‌ ಮಾಡುವಾಗ, ನಾನು ಮಾತ್ರ ಕಿವಿಗೆ ಇಯರ್‌ ಫೋನ್‌ ಚುಚ್ಚಿಕೊಂಡು, ಲ್ಯಾಪ್‌ಟಾಪ್‌ ಮೇಲೆ ಕಣ್ಣು ನೆಟ್ಟು ಮೀಟಿಂಗ್‌ನಲ್ಲಿ ಬ್ಯುಸಿಯಾಗಿರುತ್ತೇನೆ. ಕೋವಿಡ್ 19 ದಿಂದ ಇಡೀ ಜಗತ್ತು ಸ್ತಬ್ದವಾಗಿದೆ ಅನ್ನುತ್ತಿದ್ದೇವೆ. ಆದರೆ, ಕೆಲವರಿಗೆ ಮಾತ್ರ ಕೆಲಸದ ಒತ್ತಡ ಹೆಚ್ಚಿದೆ. ಅವರಲ್ಲಿ ಗೃಹಿಣಿಯರೂ ಸೇರಿದ್ದಾರೆ. ಹೇಗೆ ವೈದ್ಯ- ದಾದಿಯರು, ಪೊಲೀಸರು ಸಮಾಜದ ಸುರಕ್ಷೆಗಾಗಿ ನಿಂತಿರುತ್ತಾರೋ, ಹಾಗೆಯೇ ಗೃಹಿಣಿಯರು ಮನೆ ಮಂದಿಗಾಗಿ ಹೆಚ್ಚುವರಿ ದುಡಿಯುತ್ತಿದ್ದಾರೆ. ಇದ್ದುದರಲ್ಲಿಯೇ ಅಡುಗೆ ಮಾಡುತ್ತಾ, ಹೊರಗೆ ಹೋಗಲಾಗದೆ ಚಡಪಡಿಸುವ ಮಕ್ಕಳನ್ನು ಸಂಭಾಳಿಸುತ್ತಾ, ಮನೆಯ ಹಿರಿಯರ ಆರೋಗ್ಯ ಕೆಡದಿರಲಿ ಅಂತ ಹೆಚ್ಚಿನ ಕಾಳಜಿ ಮಾಡುತ್ತಾ, ಮನೆಯಲ್ಲೇ ಕುಳಿತು ಆಫೀಸ್‌ ಕೆಲಸ ಮಾಡುವ ಗಂಡನಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾ… ಅಬ್ಬಬ್ಟಾ, ಯಾವ ಯೋಧರಿಗೂ ಕಡಿಮೆ ಇಲ್ಲದಂತೆ ದುಡಿಯುತ್ತಲೇ ಇರುವ ಅವರಿಗೊಂದು ಸಲಾಂ ಸಲ್ಲಲೇಬೇಕಪ್ಪಾ…

 

-ವಿಶ್ವನಾಥ್‌ ಬಿ.ಎಂ

 

Advertisement

Udayavani is now on Telegram. Click here to join our channel and stay updated with the latest news.

Next