ಬೆಂಗಳೂರು: ಪ್ರಧಾನಿ ಮೋದಿಯವರ ಪರ ಪ್ರಚಾರ ಮಾಡಿದವರನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು, ಪೋಸ್ಟ್ ಕಾರ್ಡ್ ಜಾಲತಾಣ ಮುಖ್ಯಸ್ಥ ಹಾಗೂ ಮೋದಿ ಪರ ಪ್ರಚಾರ ಮಾಡುತ್ತಿದ್ದ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ.
ಮೋದಿ ವಿರುದ್ಧ ಸಚಿವ ಜಮೀರ್ ಅಹ್ಮದ್, ಬೇಳೂರು ಗೋಪಾಲಕೃಷ್ಣ ಅವಹೇಳನಕಾರಿಯಾಗಿ ಮಾತನಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಪೋಸ್ಟ್ ಕಾರ್ಡ್ ಜಾಲತಾಣದ ಮಹೇಶ್ ಹೆಗ್ಡೆ, ಮಂಡ್ಯದಲ್ಲಿ ಸುಮಲತಾ ಪರ ಕೆಲಸ ಮಾಡಿದವರಿಗೆ ಸರ್ಕಾರ ಕಿರುಕುಳ ನೀಡುತ್ತಿದೆ. ಸರ್ಕಾರದ ನಡೆ ಪ್ರಶ್ನಿಸಿದ್ದಕ್ಕೆ ಹುಬ್ಬಳ್ಳಿಯಲ್ಲಿ ಯುವತಿಯನ್ನು ಬಂಧಿಸಲಾಗಿದೆ.
ಈ ಸರ್ಕಾರದ ಆಯಸ್ಸು ತುಂಬಾ ಕಡಿಮೆ. ಅಲ್ಲಿಯವರೆಗೆ ಇಂತಹ ಅನೇಕ ಪ್ರಕರಣ ನಡೆಯಲಿವೆ. ಇದನ್ನೆಲ್ಲ ಬಿಟ್ಟು, ಸರ್ಕಾರ ಬರ ನಿರ್ವಹಣೆ ಕಡೆಗೆ ಗಮನ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಸಹ ವಕ್ತಾರರಾದ ಎ.ಎಚ್. ಆನಂದ್, ಎಸ್. ಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.
ಕೇಂದ್ರ ಚುನಾವಣಾ ಆಯೋಗಕ್ಕೆ ದೂರು: ಮತದಾರರ ಪಟ್ಟಿಯಿಂದ ಅನುಮಾನಾಸ್ಪದವಾಗಿ ಅನೇಕ ಹೆಸರುಗಳು ಡಿಲೀಟ್ ಆಗಿದ್ದರ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತದೆ. ಅಭ್ಯರ್ಥಿಗಳು ಹಾಗೂ ಪಕ್ಷಕ್ಕೆ ಚುನಾವಣೆಗೂ ಮುನ್ನ ನೀಡುವ ಮತದಾರರ ಪಟ್ಟಿಗೂ ಚುನಾವಣಾಧಿಕಾರಿ ಬಳಿ ಇರುವ ಪಟ್ಟಿಗೂ ವ್ಯತ್ಯಾಸವಾಗಿದೆ.
ಇದ್ದ ಹೆಸರುಗಳ ಮೇಲೆ ಯಾವುದೇ ಕಾರಣವಿಲ್ಲದೆ ಡಿಲೀಟ್ ಠಸ್ಸೆ ಒತ್ತಲಾಗಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದೇವೆ. ಎರಡು ಹಂತಗಳಲ್ಲಿ ಚುನಾವಣೆ ಉತ್ತಮವಾಗಿ ನಡೆದಿದ್ದು, ಬಿಜೆಪಿ ಹಾಗೂ ಮೋದಿ ಪರ ಅಲೆ ಪ್ರಬಲವಾಗಿದೆ. 20-22 ಸ್ಥಾನಗಳನ್ನು ಜಯಿಸುವ ವಿಶ್ವಾಸವಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು.