Advertisement

ಶಾಸಕರಿಂದ ದ್ವೇಷದ ರಾಜಕಾರಣ: ಜೀವರಾಜ್‌

07:35 AM Feb 26, 2019 | |

ಶೃಂಗೇರಿ: ದ್ವೇಷ, ಅಸೂಯೆ, ಸ್ವಜನ ಪಕ್ಷಪಾತ ಬಿಟ್ಟು ತಾನು ಕ್ಷೇತ್ರಕ್ಕೆ ಜನಪ್ರತಿನಿಧಿ ಎಂದು ಶಾಸಕರು ಅರಿತು, ಗೌರವದಿಂದ ರಾಜಕಾರಣ ಮಾಡಬೇಕು ಎಂದು ಮಾಜಿ ಸಚಿವ ಡಿ.ಎನ್‌. ಜೀವರಾಜ್‌ ಹೇಳಿದರು.

Advertisement

ಅವರು ಪಟ್ಟಣದ ಸಂತೆ ಮಾರುಕಟ್ಟೆ ಬಳಿ ನಡೆದ ರಾಜ್ಯ ಸರಕಾರದ ವೈಫಲ್ಯ ವಿರೋಧಿಸಿ ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಅಭಿವೃದ್ಧಿ ಕಾಮಗಾರಿಗೆ ತಾಲೂಕಿನಲ್ಲಿ ಸ್ಥಳೀಯ ಶಾಸಕರು ಚುನಾಯಿತ ಪ್ರತಿನಿಧಿಗಳನ್ನು ನಿರ್ಲಕ್ಷಿಸಿ, ಶಂಕುಸ್ಥಾಪನೆ ನೆರವೇರಿಸಿರುವುದು ಚುನಾಯಿತ ಪ್ರತಿನಿಧಿಗಳಿಗೆ ಮಾಡಿದ ಅವಮಾನ. ಶ್ರೀಮಠದ ಭಕ್ತರಾಗಿರುವ ದೇವೇಗೌಡ ಮತ್ತು ರೇವಣ್ಣರವರ ಕಾಳಜಿಯಿಂದಾಗಿ ವಿಶೇಷ ಅನುದಾನ ಇಲ್ಲಿಗೆ ಲಭಿಸಿದೆ. ಜೆಡಿಎಸ್‌ ಮುಖಂಡರನ್ನು ಸಹ ಕಡೆಗಣಿಸಿ, ಏಕಪಕ್ಷೀಯವಾಗಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿರುವುದು ಅಕ್ಷಮ್ಯವಾಗಿದೆ. ಅಕ್ರಮ ಸಕ್ರಮ ಸಮಿತಿ ರಚನೆಗೆ ಮುಂದಾಗದ ಶಾಸಕರು, ಈ ಹಿಂದೆ ಸ್ಥಿರಿಕರಣಗೊಂಡ ಅರ್ಜಿಗೂ ಕೂಡ ಹಕ್ಕು ಪತ್ರ ನೀಡಿಲ್ಲ. ಹಕ್ಕು ಪತ್ರ ಪಡೆದಿರುವ ರೈತರಿಗೆ ಪಹಣಿ ನೀಡಿಲ್ಲ. ತಾವು ಶಾಸಕರಾಗುವ ಮೊದಲು ಈ ಬಗ್ಗೆ ತೀವ್ರ ವಾಗ್ಧಾಳಿ ಮಾಡುತ್ತಿದ್ದ ಅವರೇ ಈಗ ಹಕ್ಕು ಪತ್ರ ನೀಡಲಾಗುತ್ತಿಲ್ಲ. ಇದಕ್ಕೆ ಶಾಸಕರು ಉತ್ತರಿಸಬೇಕು ಎಂದರು.

ಜಿಪಂ ಸದಸ್ಯ ಬಿ.ಶಿವಶಂಕರ್‌ ಮಾತನಾಡಿ, ಕಳೆದ ಒಂಬತ್ತು ತಿಂಗಳಿಂದ ಅಧಿಕಾರ ನಡೆಸುತ್ತಿರುವ ಸಮ್ಮಿಶ್ರ ಸರಕಾರ ಆಂತರಿಕ ಭಿನ್ನಾಭಿಪ್ರಾಯದಿಂದ ಜನರ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ರಾಜ್ಯದಲ್ಲಿ ಸರಕಾರವೇ ಅಸ್ತಿತ್ವದಲ್ಲಿ ಇಲ್ಲದಂತಾಗಿದೆ ಎಂದರು. ಬಿಜೆಪಿ ಅಧ್ಯಕ್ಷ ಎಚ್‌.ಎಸ್‌.ನಟೇಶ್‌ ಮಾತನಾಡಿದರು.

ಪ್ರತಿಭಟನಾ ಸಭೆಗೂ ಮುನ್ನ ಬಿಜೆಪಿ ಕಾರ್ಯಕರ್ತರು ಬಸ್‌ ನಿಲ್ದಾಣದಿಂದ ಮೆರವಣಿಗೆ ನಡೆಸಿದರು. ಕಂದಾಯ ಇಲಾಖೆಯ ಉಪ ತಹಶೀಲ್ದಾರ್‌ ಚಂದ್ರಶೇಖರ್‌ ಮತ್ತು ಮೆಸ್ಕಾಂ ಎಇ ಯೋಗೀಶ್‌ ಹಾಗೂ ಪ್ರಶಾಂತ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಮುಖಂಡರಾದ ಹೊಸೂರು ದಿನೇಶ್‌, ರೈತ ಮೋರ್ಚಾದ ಅಧ್ಯಕ್ಷ ಹೆಬ್ಬಿಗೆ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷೆ ಜಯಶೀಲ, ರಾಮಕೃಷ್ಣರಾವ್‌, ಎಚ್‌.ಆರ್‌.ಕೃಷ್ಣಮೂರ್ತಿ ಹೆಗ್ಡೆ, ಪಪಂ ಅಧ್ಯಕ್ಷೆ ಶಾರದಾ, ಮೆ.ನಾ.ರಮೇಶ್‌ ಮತ್ತಿತರರು ಹಾಜರಿದ್ದರು. 

ವಿದ್ಯುತ್‌ ಸಮಸ್ಯೆ ತೀವ್ರವಾಗಿದ್ದು, ಸಾಮಾನ್ಯ ಜನರು ಕತ್ತಲೆಯಲ್ಲಿ ಇರುವಂತಾಗಿದೆ. ತೋಟಗಳು ನೀರಿಲ್ಲದೇ ಒಣಗುತ್ತಿದೆ. ತಾಲೂಕಿನಲ್ಲಿ ಮರಳಿನ ಸಮಸ್ಯೆ ತೀವ್ರವಾಗಿದ್ದು, ಸಾಮಾನ್ಯ ಜನರು ಮನೆ ಕಟ್ಟಿಕೊಳ್ಳುವುದು ಕಷ್ಟವಾಗಿದೆ. ಸರಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಲಂಚವಿಲ್ಲದೇ ಯಾವ ಕೆಲಸವೂ ಆಗುತ್ತಿಲ್ಲ. ದ್ವೇಷದ ರಾಜಕಾರಣ ಮಾಡುತ್ತಿರುವ ಶಾಸಕರು, ಬ್ಲಾಕ್‌ ಮೇಲ್‌ ಪೊಲಿಟಿಕ್ಸ್‌ ಮಾಡುತ್ತಿದ್ದಾರೆ. ತಮ್ಮ ಕಾರ್ಯಕರ್ತರಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ. ಲೋಕಸಭಾ ಚುನಾವಣೆ ನಂತರ ಸಮ್ಮಿ ಶ್ರ ಸರಕಾರ ಪತನವಾಗುವುದು ಖಚಿತ ಎಂದು ಜೀವರಾಜ್‌ ಭವಿಷ್ಯ ನುಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next