Advertisement

“ಟೊಪ್ಪಿ’ಲಹರಿ

12:30 AM Jan 30, 2019 | |

ಘಟನೆ-1
ಅನುಪಮಾ, ನಿನ್ನೆ ನಿಮ್ಮ ಮಗುವಿಗೆ ಟೊಪ್ಪಿ ಹಾಕಿದ್ರಲ್ಲಾ, ಆ ಟೊಪ್ಪಿ ಎಲ್ಲಿ ತಗೊಂಡ್ರಿ? ತುಂಬಾ ಚೆನ್ನಾಗಿತ್ತು. ನಾನಂತೂ ಇಂಥ ಟೋಪಿಯನ್ನು ಎಲ್ಲೂ ನೊಡೇ ಇಲ್ಲಾ. ನಿಮಗೆ ಹೇಗೆ ಸಿಕ್ತು? 

Advertisement

ಘಟನೆ-2
ಪುಸ್ತಕ ಖರೀದಿಗೆ ಹೋಗಿದ್ದಾಗ, ಆ ಅಂಗಡಿಯಲ್ಲಿದ್ದ ವಯಸ್ಸಾದವರೊಬ್ಬರು, “ಎಷ್ಟು ದಿನ ಆಯ್ತು ಇಂಥ ಕೊಂಚಿಗೆ ನೋಡಿ. ನನ್ನ ಬಾಲ್ಯದ ದಿನಗಳು ನೆನಪಾದವು. ನಾನು, ನನ್ನ ತಮ್ಮ ಇಂಥದ್ದೇ ಕೊಂಚಿಗೆ ಕಟ್ಟಿಕೊಂಡು ತೆಗೆಸಿಕೊಂಡ ಫೋಟೊ ಇದೆ. ಈಗ ಯಾರೂ ಇದನ್ನ ಮಕ್ಕಳಿಗೆ ಹಾಕೋದೇ ಇಲ್ಲ. ಈ ಮಗೂನ ನೋಡಿ ಖುಷಿಯಾಯ್ತು.

ಘಟನೆ-3
ಬೆಂಗಳೂರಿನಲ್ಲಿ ನಾವಿರೋ ಬಡಾವಣೆಯಲ್ಲಿ ಇರುವ ಅಸ್ಸಾಮ್‌ನ ಮಹಿಳೆಯೊಬ್ಬರು, “ಇವನು ನಿಮ್ಮ ಮಗನೇ? ನಾನು ದಿನಾ ಇವನನ್ನು ಕೆರೆ ಪಕ್ಕ ಇರುವ ಉದ್ಯಾನದಲ್ಲಿ, ಅಪ್ಪನ ಜೊತೆ ಆಡೋದನ್ನು ನೋಡಿದ್ದೇನೆ. ಅವನ ತಲೆ ಮೇಲೆ ವಿಶಿಷ್ಟ ರೀತಿಯ ಟೊಪ್ಪಿ ಇರುತ್ತಲ್ಲಾ? ಅದಕ್ಕೇನಂತಾರೆ? ದೊಡ್ಡವರೂ ಅದನ್ನು ಹಾಕಿಕೊಳ್ಳಬಹುದಲ್ವಾ? ಅದನ್ನು ಲೆಹೆಂಗಾ ಜೊತೆ ಹಾಕಿಕೊಳ್ಳಬಹುದೆ?’ ಎಂದು ಕೇಳಿದರು.

ಹೀಗೆ, ನನ್ನ ಮಗ ಪ್ರಣವ್‌ನ ಜೊತೆ ಎಲ್ಲಿಗೇ ಹೋದರೂ ಜನರು ಅವನನ್ನು ತಿರುತಿರುಗಿ ನೊಡುತ್ತಿರುತ್ತಾರೆ. ಇದಕ್ಕೆ ಕಾರಣ; ಅವನ ತಲೆಗೆ ಕಟ್ಟಿರುವ ಕೊಂಚಿಗೆ ಎಂಬ ಟೊಪ್ಪಿ. ಅದುವೇ ಎಲ್ಲರನ್ನೂ ಆಕರ್ಷಿಸುವುದು. ಈ ವರ್ಷ ಚಳಿ ಯಾರನ್ನು ಬಿಟ್ಟಿದೆ ಹೇಳಿ? ಇನ್ನು ಚಿಕ್ಕ ಮಕ್ಕಳ ಬಗ್ಗೆ ಹೇಳಬೇಕೆ? ಇಂಥ ಚಳಿಯಿಂದ ಮಕ್ಕಳನ್ನು ರಕ್ಷಿಸಲು ಅಮ್ಮಂದಿರು ಮಕ್ಕಳಿಗೆ ಸ್ವೆಟರ್‌, ಟೊಪ್ಪಿ ಹಾಕುತ್ತಾರೆ. ಇತ್ತೀಚೆಗಂತೂ ವಿವಿಧ ಬಗೆಯ ಟೊಪ್ಪಿಗಳು ಮಾರುಕಟ್ಟೆಯಲ್ಲಿ ಲಭ್ಯ. ಮಕ್ಕಳನ್ನು ಸೆಳೆಯಲು, ಕಾಟೂìನ್‌ ಕ್ಯಾರೆಕ್ಟರ್‌ಗಳ, ಪ್ರಾಣಿ-ಪಕ್ಷಿಗಳ ವಿನ್ಯಾಸದ ಟೊಪ್ಪಿಗಳು ಬಂದಿವೆ. ಟೊಪ್ಪಿ ನೋಡಲು ಎಷ್ಟೇ ಆಕರ್ಷಕವಿದ್ದರೂ, ಮೊದಲ ಆದ್ಯತೆ ಗುಣಮಟ್ಟ ಹಾಗೂ ಚಳಿ ತಡೆಯುವ ಸಾಮರ್ಥ್ಯದ್ದು. ಈ ಎರಡೂ ಗುಣಗಳನ್ನು ಹೊಂದಿರುವ ಟೊಪ್ಪಿಗಳಲ್ಲಿ ಕೊಂಚಿಗೆ/ ಕುಲಾವಿಗೆ ಮೊದಲ ಸ್ಥಾನ ಸಲ್ಲತಕ್ಕದ್ದು.

ಏನಿದು ಕೊಂಚಿಗೆ- ಕುಲಾವಿ? 
ಕೊಂಚಿಗೆ ಎಂಬುದು ಮಕ್ಕಳ ತಲೆಗೆ ಕಟ್ಟುವ ಟೊಪ್ಪಿ. ಇದನ್ನು ಕಾಟನ್‌ ಬಟ್ಟೆಯಿಂದ ಹೊಲಿದಿರುತ್ತಾರೆ. ನವಜಾತ ಶಿಶುವಿನಿಂದ ಹಿಡಿದು, ಐದು ವರ್ಷದ ಮಕ್ಕಳ ತನಕ ನಾನಾ ಗಾತ್ರದ ಕೊಂಚಿಗೆ ಹೊಲಿಯಬಹುದು. ಇದು ತಲೆ ಮತ್ತು ಕಿವಿಯನ್ನು ಬೆಚ್ಚಗಿಡುವುದಲ್ಲದೆ, ಒಂದು ಗೇಣು ಬೆನ್ನನ್ನು ಕೂಡ ಕವರ್‌ ಮಾಡುತ್ತದೆ. ಆದರೆ ಕುಲಾವು, ಕುತ್ತಿಗೆಯವರೆಗಷ್ಟೇ ಚಳಿಯಿಂದ ರಕ್ಷಿಸುತ್ತದೆ. ಇದೇ, ಕೊಂಚಿಗೆ ಮತ್ತು ಕುಲಾವಿನ ನಡುವಿರುವ ವ್ಯತ್ಯಾಸ. ಕೊಂಚಿಗೆ/ಕುಲಾವು ಎರಡಕ್ಕೂ; ಎರಡು ನಾಡಿಗಳಿರುತ್ತವೆ. ಇವು ತಲೆಯ ಗಾತ್ರಕ್ಕೆ ತಕ್ಕಂತೆ ಬಿಗಿ ಮತ್ತು ಸಡಿಲಗೊಳಿಸಲು ಇರುತ್ತವೆ. ಕೊಂಚಿಗೆಯನ್ನು ಕಟ್ಟಬೇಕಾದರೆ ಎಡ ನಾಡಿಯನ್ನು ಬಲಗಡೆಯಿಂದ ಹಾಗೂ ಬಲ ನಾಡಿಯನ್ನು ಎಡಗಡೆಯಿಂದ ಕುತ್ತಿಗೆಯ ಸುತ್ತು ಬಳಸಿ ಹಿಂಭಾಗಕ್ಕೆ ಕಟ್ಟಲಾಗುತ್ತದೆ. ಇದರಿಂದ ಗಂಟು ಭದ್ರವಾಗಿ ಇರುವುದಲ್ಲದೆ ಮಗುವಿನ ಚರ್ಮಕ್ಕೆ ಕಚಗುಳಿ ಮಾಡುವುದಿಲ್ಲ. ಕುಲಾವಿಯನ್ನು ಸಾಮಾನ್ಯ ಟೊಪ್ಪಿಯ ಹಾಗೆ ಕುತ್ತಿಗೆಯ ಮುಂದಿನ ಭಾಗಕ್ಕೆ ಕಟ್ಟಲಾಗುತ್ತದೆ.

Advertisement

ಕೊಂಚಿಗಿ ಕುಲಾವೀ ಗೊಂಚಲ ಬಿಳಿಮುತ್ತ…
ಶೃಂಗಾರ ಶ್ರೀಕೃಷ್ಣಗೆ ಚಂದಾಗಿ ತೊಡಿಸೀರಿ…
ಜೋ… ಜೋ…
ಹಿಂದಿನ ಕಾಲದಲ್ಲಿ ಕೊಂಚಿಗೆಗೆ, ಮುತ್ತು ರತ್ನ ಹಾಗೂ ಬಂಗಾರದ ಹೂವುಗಳಿಂದ ಕಸೂತಿ ಮಾಡುತ್ತಿದ್ದರು. ಈಗಲೂ ವಿಶೇಷ ಸಮಾರಂಭಗಳಿಗಾಗಿ ಕೊಂಚಿಗೆಗೆ ಮುತ್ತು ಪೋಣಿಸಿ, ಹೊಲಿಯುವ ವಾಡಿಕೆ ಇದೆ. ತಾಯಿ ಮತ್ತು ಮಗು ಮೊದಲನೇ ಸಲ ಗಂಡನ ಮನೆಗೆ ಬರುವಾಗ, ತವರು ಮನೆಯಿಂದ ತೊಟ್ಟಿಲು ಹಾಗೂ ಆ ತೊಟ್ಟಿಲಿನ ನಾಲ್ಕೂ ಮೂಲೆಗಳಿಗೆ ನಾಲ್ಕು ಕೊಂಚಿಗೆಗಳನ್ನು ಹಾಕಿ, ಒಂದು ಕೊಂಚಿಗೆಯನ್ನು ಮಧ್ಯದಲ್ಲಿ ಇರಿಸಿ, ತೊಟ್ಟಿಲನ್ನು ಮಗುವಿನ ಸೋದರಮಾವನ ಹೊತ್ತು ತರುವ ಸಂಪ್ರದಾಯವಿದೆ.
ಪ್ರಾಚೀನ ಸಂಸ್ಕೃತಿ ಹಾಗೂ ಭಾವನಾತ್ಮಕ ಸಂಬಂಧದ ಪ್ರತೀಕವಾಗಿರುವ ಕೊಂಚಿಗೆಯ ಮುಂದೆ, ನಿಟ್ಟೆಡ್‌ ಕ್ಯಾಪ್‌ನ ಥಳುಕು ನಿಲ್ಲಲು ಸಾಧ್ಯವೇ? 

ಕೊಂಚಿಗೆಯ ಲಾಭಗಳು
*ಕಾಟನ್‌ ಬಟ್ಟೆಯದ್ದಾದ ಕಾರಣ, ಮಗುವಿನ ಚರ್ಮಕ್ಕೆ ಉತ್ತಮ.
*ಉಣ್ಣೆ ಟೊಪ್ಪಿಯಂತೆ ದಾರದ ಎಳೆ, ಮಗುವಿನ ಕಿವಿಯೋಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುವುದಿಲ್ಲ.
*ಬೆನ್ನನ್ನೂ ಕವರ್‌ ಮಾಡುವುದರಿಂದ ಚಳಿಯಿಂದ ಸಂಪೂರ್ಣ ರಕ್ಷಣೆ ಸಿಗುತ್ತದೆ.
*ತೆಳ್ಳನೆಯ ಕಾಟನ್‌ ಬಟ್ಟೆಯಿಂದ ಮಾಡಲ್ಪಟ್ಟಿರುವ ಕೊಂಚಿಗೆಯನ್ನು ಬಿಸಿಲಿನಿಂದ ರಕ್ಷಣೆ ಪಡೆಯಲೂ ಬಳಸಬಹುದು.
*ಮಗು ಎಷ್ಟೇ ಕಿತ್ತೆಸೆಯಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ.
*ನೋಡಲು ಆಕರ್ಷಕವಾಗಿರುತ್ತದೆ (ತಲೆಯ ಮೇಲೆ ಗೋಪುರಾಕಾರದ ವಿನ್ಯಾಸ ಬರುವುದರಿಂದ) ಅಲ್ಲದೆ ನಮಗೆ ಇಷ್ಟವಾದ ಬಟ್ಟೆಯಲ್ಲಿ ಡಿಸೈನ್‌ ಮಾಡಿಸಬಹುದು.
*ಬೆಲೆಯೂ ಅಗ್ಗ. ರೇಷ್ಮೆ ಬಟ್ಟೆಯಲ್ಲಿ (ಕಾಟನ್‌ ಲೈನಿಂಗ್‌ ಬಳಸಿ) ಹೊಲಿಸಬಹುದು.

ಅನುಪಮಾ ಬೆಣಚಿನಮರ್ಡಿ

Advertisement

Udayavani is now on Telegram. Click here to join our channel and stay updated with the latest news.

Next