Advertisement
ಪರಿಸರ ಸಂರಕ್ಷಣೆ, ಹಸುರೀಕರಣ ಮತ್ತು ಪ್ರದೇಶಾಭಿವೃದ್ಧಿಗಾಗಿ ಇಲಾ ಖೆಯು ನರೇಗಾ ಯೋಜನೆಯಡಿ ಜಲಸಂಜೀವಿನಿ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿರುವ “ಪಂಚ ಅಭಿ ಯಾನ’ಗಳಲ್ಲಿ ಹಸುರು ಸರೋವರ ಅಭಿಯಾನವೂ ಒಂದಾಗಿದೆ. ಇದು ಕೆರೆಗಳ ಅಭಿವೃದ್ಧಿಯನ್ನೂ ಹೆಚ್ಚು ಪರಿಸರ ಸ್ನೇಹಿಯಾಗಿಸಿದೆ. ಇಲಾಖೆಯು ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ನೂರು ಕೆರೆಗಳನ್ನು ಹಸುರು ಸರೋವರಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಂಡಿದೆ.
ಹಸುರು ಸರೋವರ ಯೋಜನೆಯ ಅನುಷ್ಠಾನವೇ ವಿಶೇಷವಾಗಿದೆ. ಕೆರೆಯ ಒಳಾಂಗಣದ ಅತಿಇಳಿಜಾರಿನಲ್ಲಿ ಮಣ್ಣನ್ನು ಹಿಡಿದಿಟ್ಟುಕೊಳ್ಳುವ, ಜೀವ ವೈವಿಧ್ಯಕ್ಕೆ ಆಶ್ರಯ ನೀಡುವ ವಿವಿಧ ಜಾತಿಯ ಹುಲ್ಲು, ಗರಿಕೆ ಬೆಳೆಸಲಾಗುತ್ತದೆ. ಜತೆಗೆ ಸ್ಥಳೀಯವಾಗಿ ಲಭ್ಯವಿರುವ ಸಸಿಗಳನ್ನು ನಾಟಿ ಮಾಡಲಾಗುತ್ತದೆ. ಕೆರೆಯ ತೂಬು ನೈಸರ್ಗಿಕವಾಗಿ ಸುಧಾರಿಸಲಾಗುತ್ತದೆ. ಕೆರೆಗೆ ನೀರು ಸರಾಗವಾಗಿ ಹರಿದುಬರಲು ಸುತ್ತ ಕಚ್ಚಾ ನಾಲೆಗಳನ್ನು ನಿರ್ಮಿಸಲಾಗುತ್ತದೆ. ಕೆರೆಯ ಸುತ್ತ ತಂತಿ ಬೇಲಿ ಬದಲಿಗೆ ಜೈವಿಕ ಬೇಲಿ ನಿರ್ಮಿಸಲಾಗುತ್ತದೆ. ಜೀವ ವೈವಿಧ್ಯಕ್ಕೆ ಹಾನಿಯಾಗದ ರೀತಿಯಲ್ಲಿ ವೈಜ್ಞಾನಿಕವಾಗಿ ಹೂಳು ಎತ್ತಲಾಗುತ್ತದೆ. ಕೋಟಿ ವೃಕ್ಷ ಅಭಿಯಾನದಡಿ ಹಸಿರು ಸರೋವರಗಳ ಸುತ್ತ ಆಲ, ಅರಳಿ, ಬೇವು ಮರಗಳನ್ನು ನೆಡಲಾಗುತ್ತದೆ. ಜಾನುವಾರುಗಳಿಗೆ ನೀರು ಕುಡಿಯಲು ನೈಸರ್ಗಿಕ ವಸ್ತುಗಳನ್ನೇ ಉಪಯೋಗಿಸಿ ರ್‍ಯಾಂಪ್ ನಿರ್ಮಿಸಲಾಗುತ್ತದೆ.
Related Articles
ಕೆರೆಗಳ ಅಭಿವೃದ್ಧಿಯಲ್ಲಿ ಸಿಮೆಂಟ್ ಕಾಂಕ್ರೀಟ್, ಪ್ಲಾಸ್ಟಿಕ್ ಬಳಸದೆ ಕೇವಲ ನೈಸರ್ಗಿಕವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಅಭಿವೃದ್ಧಿಪಡಿಸುವ ಕೆರೆಗಳೇ ಹಸುರು ಸರೋವರಗಳು.
Advertisement
ಉದ್ದೇಶವೇನು? ಹಸುರು ಸರೋವರಗಳ ಅಭಿವೃದ್ಧಿಯಿಂದ ಜೀವ ವೈವಿಧ್ಯದ ಸಂರಕ್ಷಣೆ, ಪರಿಸರ ರಕ್ಷಣೆ, ನೀರಿನ ಗುಣಮಟ್ಟ ಸುಧಾರಣೆ, ಅಂತರ್ಜಲ ಮಟ್ಟ ಹೆಚ್ಚಿಸುವುದು, ನಿಸರ್ಗ ಮಹತ್ವ ಮತ್ತು ಪಾರಂಪರಿಕ ಜೀವನದ ಉದ್ದೇಶ ಸಾರುವುದು, ಮಣ್ಣಿನ ಸವೆತ ನಿಯಂತ್ರಣ, ಹವಾಮಾನ ವೈಪರೀತ್ಯದ ಪರಿಣಾಮಗಳ ಪರಿಹಾರ, ಶೈಕ್ಷಣಿಕ ಪ್ರವಾಸ ಹಾಗೂ ಸಂಶೋಧನೆಗೆ ಸಹಕಾರಿಯಾಗುತ್ತದೆ ಎಂಬ ಮಹದುದ್ದೇಶದೊಂದಿಗೆ ಇಲಾಖೆ ಈ ಹಸಿರು ಸರೋವರ ಅಭಿಯಾನ ಹಮ್ಮಿಕೊಂಡಿದೆ. ಹಸುರು ಸರೋವರ ಅಭಿಯಾನದಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 100 ಕೆರೆಗಳನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಅದರಂತೆ ಜಿಲ್ಲೆಯ ಪ್ರತಿಯೊಂದು ತಾಲೂಕಿಗೆ ಒಂದರಂತೆ ಹಸುರು ಸರೋವರ ಅಭಿವೃದ್ಧಿಪಡಿಸಲಾಗುವುದು.
-ಸುರೇಶ್ ಇಟ್ನಾಳ್, ದಾವಣಗೆರೆ ಜಿ.ಪಂ. ಸಿಇಒ