ಗುರುಮಠಕಲ್: ಭದ್ರ ಬುನಾದಿ ಮತ್ತು ಉತ್ತಮ ಕ್ಯೂರಿಂಗ್ ನಿರ್ವಹಣೆಯಿಂದ ಗಟ್ಟಿಮುಟ್ಟಾದ ಕಟ್ಟಡ ನಿರ್ಮಾಣವಾಗುತ್ತದೆ. ಆದರೆ ಇಲ್ಲಿ ಮಾತ್ರ ತರಾತುರಿಯಲ್ಲಿ ಕ್ಯೂರಿಂಗ್ ಇಲ್ಲದೇ ನಾಡಕಚೇರಿ ನಿರ್ಮಿಸಲಾಗಿದೆ ಎಂದು ದೂರಿದ್ದಾರೆ.
ಪಟ್ಟಣದ ಸರಕಾರಿ ಆಸ್ಪತ್ರೆ ರಸ್ತೆ ಮಾರ್ಗದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಅಂದಾಜು ವೆಚ್ಚ 18.84 ಲಕ್ಷ ರೂ.ಗಳಲ್ಲಿ ನಾಡಕಚೇರಿ ನಿರ್ಮಾಣವಾಗುತ್ತಿದೆ. ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅವರು ಮೂರು ತಿಂಗಳ ಹಿಂದೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಅಷ್ಟು ಬೇಗ ಕಟ್ಟಡ ನಿರ್ಮಾಣ ಮಾಡಿ ಸುಣ್ಣಬಣ್ಣ ಹಚ್ಚಿದ್ದು, ಉದ್ಘಾಟನೆಗೆ ತಯಾರಾಗಿದೆ. ಇದು ಕಾಟಾಚಾರಕ್ಕೆ ನಿರ್ಮಾಣ ಮಾಡಿದಂತೆ ಆಗಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರು ಲಭ್ಯವಿಲ್ಲದ ಕಾರಣ ಟ್ಯಾಂಕರ್ ಮೂಲಕ ನೀರು ತರಿಸಿ ಮೂರು ದಿನಕ್ಕೊಮ್ಮೆ ಕ್ಯೂರಿಂಗ್ ಮಾಡುತ್ತಿದ್ದು, ಸೂಪರ್ ಸ್ಪೀಡ್‌ನಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎನ್ನಲಾಗುತ್ತಿದೆ. ಜನರಿಗೆ ಉಪಯೋಗವಾಗಬೇಕಿದ್ದ ಕಟ್ಟಡ ಉತ್ತಮ ರೀತಿಯಲ್ಲಿ ನಿರ್ಮಾಣ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಜನರು ಪ್ರಶ್ನಿಸಿದ್ದಾರೆ.
ಕ್ಷೇತ್ರದ ಬಿಲ್‌ಪಾಸ್ ಮಾಡಿಕೊಳ್ಳಲು ಹಾಗೂ ಜನರಿಗೆ ಅನುಕೂಲ ಕಲ್ಪಿಸುತ್ತಿದ್ದೇವೆ ಎಂದು ನಂಬಿಸಲು ಈ ರೀತಿಯಲ್ಲಿ ಗುತ್ತಿಗೆದಾರರು ಕೆಲಸ ನಿರ್ವಹಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನು ಮುಂದೆಯಾದರೂ ಸಂಬಂಧಿಸಿದ ಅಧಿಕಾರಿಗಳು ಕಟ್ಟಡ ವೀಕ್ಷಣೆ ಮಾಡಿ ಉದ್ಘಾಟನೆಗೆ ಒಪ್ಪಿಗೆ ನೀಡಬೇಕು ಎಂಬುದು ಜನರ ಆಗ್ರಹ.
ಕಳಪೆ ವಸ್ತುಗಳ ಬಳಕೆ ಮತ್ತು ಕ್ಯೂರಿಂಗ್ ಇಲ್ಲದೇ ನಾಡಕಚೇರಿ ಕಟ್ಟಡ ಕೆಲವೇ ದಿನಗಳಲ್ಲಿ ನಿರ್ಮಾಣ ಮಾಡಲಾಗಿದೆ. ಅಧಿಕಾರಿಗಳ ವೀಕ್ಷಣೆಯಿಲ್ಲದೇ ತರಾತುರಿಯಲ್ಲಿ ನಿರ್ಮಾಣವಾಗಿದೆ. ಈ ಕುರಿತು ಸಂಬಂಧಿ ಸಿದ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
-ವಿನಾಯಕರಾವ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ
ಕ್ಯೂರಿಂಗ್ ಇಲ್ಲದೇ ಯಾರದರೂ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವೇ? ಇವೆಲ್ಲ ಸುಳ್ಳು ಆರೋಪ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಉತ್ತಮ ಕಟ್ಟಡ ನಿರ್ಮಾಣ ಮಾಡಲಾಗಿದೆ.
-ಅಬ್ದುಲ್ ನಬಿ, ಜೆಇ, ಗುರುಮಠಕಲ್
-ಚನ್ನಕೇಶವುಲು ಗೌಡ