ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ ಕುರಿತು ಸಾಮಾಜಿಕ ಜಾಲತಾಣ, ಸ್ನೇಹಿತರು ಹೀಗೆ ಹಲವರಿಂದ ಕೇಲ್ಪಟ್ಟಿರುವುದರಿಂದ ಇಲ್ಲಿಗೆ ಒಮ್ಮೆ ಭೇಟಿ ನೀಡಬೇಕು ಎಂಬ ಇಂಗಿತವಿತ್ತು.
ಉಡುಪಿಯಿಂದ ಸುಮಾರು ಐದಾರು ಕಿ.ಮೀ. ದೂರದಲ್ಲಿರುವ ಈ ಸ್ಥಳಕ್ಕೆ ಊರನ್ನು ಸುತ್ತಾಡಿಕೊಂಡು 10-15 ಕಿ.ಮೀ. ಮಾಡಿಕೊಂಡು ತಲುಪಿದೆವು. ಪ್ರವೇಶ ದ್ವಾರದಲ್ಲೇ ಟಿಕೆಟ್ ಕೌಂಟರ್ ಇದ್ದು, ಟಿಕೆಟ್ ಪಡೆದು ಮುಂದೆ ಸಾಗಬೇಕು. ಸ್ಥಳದ ಕುರಿತು ಸ್ವಲ್ಪ ಮಾಹಿತಿಯನ್ನು ಟಿಕೆಟ್ ನೀಡುವವರೆ ನೀಡುತ್ತಾರೆ ಮತ್ತು ಇನ್ನಷ್ಟು ಮಾಹಿತಿ ಪಡೆಯಲು ಅಲ್ಲೆ ಇರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು ಹೇಳುತ್ತಾರೆ. ಸ್ಕ್ಯಾನ್ ಮಾಡಿದರೆ ಆ ಸ್ಥಳದಲ್ಲಿರುವ 24 ಕಟ್ಟಡಗಳ ಸಂಕ್ಷಿಪ್ತ ಮಾಹಿತಿ, ಅದರ ವಿಶೇಷತೆಗಳಿರುವ ಕೈಪಿಡಿ ನಮ್ಮ ಮೊಬೈಲ್‌ನಲ್ಲಿ ಲಭ್ಯವಾಗುತ್ತದೆ.
1997ರಲ್ಲಿ ಆರಂಭವಾದ ಈ ಮ್ಯೂಸಿಯಂನ ರೂವಾರಿ ದಿ| ವಿಜಯನಾಥ ಶೆಣೈ ಅವರು. ಹಸ್ತಶಿಲ್ಪ ಹೆರಿಟೇಜ್ ಹೌಸ್ ನಿರ್ಮಿಸಲು ಹೋಗಿ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ ಆಗಿದ್ದು ಈಗ ಇತಿಹಾಸ. ಹಳೆಯ, ಸಾಂಪ್ರದಾಯಿಕ, ಐತಿಹಾಸಿಕ ಕಟ್ಟಡಗಳು, ಅವಶೇಷಗಳು, ಕರಕುಶಲ ವಸ್ತುಗಳು, ವಿವಿಧ ಶೈಲಿಯ ಉಪಕರಣಗಳನ್ನು ಸಂಗ್ರಹಿಸಿ ಮುಂದಿನ ತಲೆಮಾರಿಗೆ ಪರಿಚಯಿಸುವ, ಪ್ರೇರೇಪಿಸುವ ದೃಷ್ಟಿಯಿಂದ ಎಲ್ಲ ವಸ್ತುಗಳನ್ನು ಜತನವಾಗಿರಿಸಿದ್ದಾರೆ. ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಸಂಗ್ರಹಿಸಿದ ಅನೇಕ ಕಟ್ಟಡಗಳನ್ನು, ಕಟ್ಟಡಗಳ ಭಾಗಗಳನ್ನು ತಂದು ಇಲ್ಲಿರುವ ಐದಾರು ಎಕರೆ ಜಾಗದಲ್ಲಿ ಪುನರ್ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಇದನ್ನು ಹಸ್ತ ಶಿಲ್ಪ ಟ್ರಸ್ಟ್ ಮುನ್ನಡೆಸಿಕೊಂಡು ಹೋಗುತ್ತಿದೆ.
ಪ್ರವೇಶ ದ್ವಾರದಿಂದ ಒಳ ಹೊಕ್ಕರೆ ಹೊಸದೊಂದು ಪ್ರದೇಶಕ್ಕೆ ಕಾಲಿಟ್ಟ ಅನುಭವ. ಹತ್ತಾರು ಗ್ರಾಮಗಳನ್ನು ಒಂದೇ ಕಡೆ ನೋಡುವ ಭಾಗ್ಯ. 1856ರ ಮಿಯಾರು ಮನೆ ಹಾಗೂ ಶೃಂಗೇರಿ ಮನೆ, 1816ರ ಮುಧೋಳ ಪ್ಯಾಲೇಸ್ ದರ್ಬಾರ್ ಹಾಲ್ ಹಾಗೂ ಕುಂಜೂರು ಚೌಕಿ ಮನೆ, 1341ರ ಕುಕನೂರಿನ ಕಮಲ್ ಮಹಲ್, 18ನೇ ಶತಮಾನದ ವಿಷ್ಣುಮಂದಿರ, 16ನೇ ಶತಮಾನದ ವೀರಶೈವ ಜಂಗಮ ಮಠ ಸೇರಿದಂತೆ ಒಟ್ಟು 24 ಕಟ್ಟಡಗಳು ಇಲ್ಲಿ ನೋಡಲು ಸಿಗುತ್ತದೆ. ಅದರಲ್ಲಿ ಬುಡಕಟ್ಟು ಜನಾಂಗದ ಕಲೆಗಾರಿಕೆ, ಜಾನಪದ ದೈವಗಳ ಗುಡಿಗಳು, ಗತಕಾಲದ ಬೀದಿಯ ಮರುಸೃಷ್ಟಿ, ಅಂಗಡಿ ಮುಂಗಟ್ಟುಗಳು, ಸಾಂಸ್ಕೃತಿಕ ಕಲಾಕೃತಿಗಳು… ಅಬ್ಬಬ್ಟಾ ಕಣ್ಣಿಗೆ, ಮನಸ್ಸಿಗೆ ಹಬ್ಬವೇ ಸರಿ. ಹಿಂದೆ ನೋಡಿದ್ದ ವಸ್ತುಗಳು ಕೆಲವಾದರೆ, ನೋಡಿರದ ವಸ್ತುಗಳು ಹಲವು. ಗೋಡೆಯ ಮೇಲೆ ತೂಗುಹಾಕಿದ ವಿವಿಧ ಬಗೆಯ ಚಿತ್ರಕಲೆಗಳು, ಗೋಡೆಯ ಮೇಲೆ ಚಿತ್ರಿಸಿದ ಚಿತ್ತಾರಗಳು ಇವುಗಳೆಲ್ಲಾ ಮನಸೂರೆಗೊಳಿಸುತ್ತವೆ. ಅಲ್ಲಿರುವ ಕೆತ್ತನೆಗಳು, ಶಿಲ್ಪಗಳು, ಕಂಬಗಳು ಆಕರ್ಷಣೀಯವಾಗಿದೆ. ಕಟ್ಟಡಗಳೊಳಗೆ ಹಾಕಿರುವ ಹಾಡುಗಳು ಅಲ್ಲೇ ಮೈಮರೆತು ತಲ್ಲೀನವಾಗುವಂತೆ ಮಾಡುತ್ತದೆ. ಒಮ್ಮೆ ಒಳಹೊಕ್ಕು ವೀಕ್ಷಿಸಿ ಹೊರಬರಲು 1ರಿಂದ 2 ಗಂಟೆಯಾದರೂ ಬೇಕಾಗುತ್ತದೆ. ಈ ಎಲ್ಲ ವಸ್ತುಗಳನ್ನು ಎಲ್ಲ ಕಾಲಕ್ಕೂ, ಹವಾಮಾನಕ್ಕೂ ಒಗ್ಗುವಂತೆ ರಕ್ಷಿಸುವುದು ನಿಜಕ್ಕೂ ಸವಾಲೇ ಸರಿ. ಇದರಲ್ಲಿ ಹಸ್ತ ಶಿಲ್ಪ ಟ್ರಸ್ಟ್ ನ ಕಾರ್ಯಮೆಚ್ಚುವಂಥದ್ದು.
ಇದು ಹಿಂದಿನ ಕಾಲದ ಜನರ ಜೀವನದ ಭಾಗವಾಗಿದ್ದ, ಇಂದು ಕಣ್ಮರೆಯಾಗಿರುವ, ಕಣ್ಮರೆಯಾಗುತ್ತಿರುವ ವಸ್ತುಗಳನ್ನು ಕಣ್ತುಂಬಿಕೊಳ್ಳಲು, ಇಂದಿನ ಮುಂದಿನ ಪೀಳಿಗೆಗೆ ಪರಿಚಯಿಸಲು ಭೇಟಿ ನೀಡಬಹುದಾದ ಜಾಗವೆಂದರೆ ತಪ್ಪಾಗಲಾರದು.
ವಿ.ಸೂ: ಪ್ರವೇಶ ದರ 300ರೂ. ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ 50% ರಿಯಾಯಿತಿ ಇದೆ.
-ಅರುಂಧತಿ ಮಧ್ಯಸ್ಥ
ಸಾಲಿಗ್ರಾಮ