ಹಾಸನ: ಕಳೆದ 8 ದಿನಗಳಿಂದ ನಡೆದ ಈ ವರ್ಷದ ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ವಿಧ್ಯುಕ್ತ ತೆರೆ ಬೀಳಲಿದೆ. ಪ್ರತಿವರ್ಷ ಅಶ್ವಿಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರ ಹಾಸನಾಂಬ ದೇವಾಲಯದ ಬಾಗಿಲು ತೆರೆದು ಬಲಿಪಾಡ್ಯಮಿಯ ಮರುದಿನ ಬಾಗಿಲು ಮುಚ್ಚುವ ಸಂಪ್ರದಾಯ ನಡೆದುಕೊಂಡು ಬರುತ್ತಿದ್ದು, ಈ ವರ್ಷ ನ.1ರಂದು ಬಾಗಿಲು ತೆರೆದು ಕಳೆದ 8 ದಿನಗಳ ಕಾಲ ಭಕ್ತರಿಗೆ ದರ್ಶನ ನೀಡಿದ ಹಾಸನಾಂಬೆಯ ಬಾಗಿಲು ನ.9ರಂದು ಮಧ್ಯಾಹ್ನ ಮುಚ್ಚಲಾಗುತ್ತದೆ.
ಗುರುವಾರ ರಾತ್ರಿ ಹಾಸನಾಂಬಾ ದೇಗುಲದ ಆವರಣದಿಂದ ಶ್ರೀಸಿದ್ದೇಶ್ವರ ದೇವರ ಉತ್ಸವ ಮೂರ್ತಿಯ ಮೆರವಣಿಗೆ
ಆರಂಭವಾಗಲಿದ್ದು, ಇಡೀ ರಾತ್ರಿ ಹಾಸನದ ಪ್ರಮುಖ ಬೀದಿಗಳಲ್ಲಿ ಉತ್ಸವದ ಮೆರವಣಿಗೆ ನಂತರ ಶುಕ್ರವಾರ ಮುಂಜಾನೆ ಹಾಸನಾಂಬಾ ದೇವಾಲಯದ ಆವರಣ ಸೇರುವರೆಗೂ ಹಾಸನಾಂಬೆಯ ದರ್ಶನಕ್ಕೆ ಅವಕಾಶವಿರುತ್ತದೆ. ಆನಂತರ ಹಾಸನಾಂಬೆಗೆ ಈ ವರ್ಷದ ಕೊನೆಯ ಪೂಜಾ ವಿಧಿವಿಧಾನಗಳು ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ದೇವಾಲಯದ ಬಾಗಿಲು ಮುಚ್ಚಿ
ಜಿಲ್ಲಾಡಳಿತವು ದೇವಾಲಯದ ಬಾಗಿಲ ಕೀಲಿಯನ್ನು ತನ್ನ ವಶಕ್ಕೆ ಪಡೆಯಲಿದೆ.
ವರ್ಷಕ್ಕೊಮ್ಮೆ ಮಾತ್ರ ದೇವಾಲಯದ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬೆಯ ದರ್ಶನಕ್ಕೆ ಕಳೆದ 8 ದಿನಗಳಲ್ಲಿ ರಾಜ್ಯದ ವಿವಿಧೆಡೆಯಿಂ ದ ಬಂದಿದ್ದ 2 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಕಳೆದ ವರ್ಷ 11 ದಿನ ಹಾಸನಾಂಬೆಯ ಜಾತ್ರಾ ಮಹೋತ್ಸವ ನಡೆದಿತ್ತು. ಆದರೆ ಈ ವರ್ಷ 9 ದಿನ ಮಾತ್ರ ಜಾತ್ರಾ ಮಹೋತ್ಸವ ನಡೆದಿದೆ.