ಹಾಸನ: ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದು ಪೊಲೀಸರು ಹೇಳುವುದನ್ನು ನಾವು ನೋಡಿದ್ದೇವೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಪೊಲೀಸರು ದಂಡವನ್ನೂ ಹಾಕುತ್ತಾರೆ. ಆದರೆ ಅದೇ ಪೊಲೀಸರು “ಮದ್ಯಪಾನ ಮಾಡಿ ಜೀವ ಉಳಿಸಿ’’ ಎಂದು ಜಾಹೀರಾತು ಬರೆದರೆ ಏನಾಗಬಹುದು? ಇಂತಹುದೇ ಅಚಾತುರ್ಯ ಹಾಸನ ಪೊಲೀಸ್ ಇಲಾಖೆಯಲ್ಲಿ ನಡೆದಿದೆ.
ಹಾಸನ ಸಂಚಾರಿ ಪೊಲೀಸರ ಬ್ಯಾರೀಕೇಡ್ ನಲ್ಲಿ ಈ ಆಚಾತುರ್ಯ ನಡೆದಿದ್ದು, ಈ ಫೋಟೋ ಈಗ ವೈರಲ್ ಆಗಿದೆ. ಪ್ರವಾಸಿ ಮಂದಿರದ ಎದುರು ಇರಿಸಲಾಗಿದ್ದ ಬ್ಯಾರೀಕೇಡ್ ನ ಫೋಟೋ ಈಗ ವ್ಯಾಟ್ಸಪ್ ಗಳಲ್ಲಿ ಹರಿದಾಡುತ್ತಿದೆ.
ಈ ಪ್ರಮಾದಕ್ಕೆ ಕಾರಣವಾಗಿರುವುದು ಒರ್ವ ಪೈಂಟರ್. ಆತನ ಬ್ಯಾರಿಕೇಡ್ ನಲ್ಲಿ ಬರೆಯುವ ವೇಳೆ ಮಾಡಿರುವ ಅಚಾತುರ್ಯವೇ ಇದಕ್ಕೆ ಕಾರಣ. ಆತನಿಗೆ ಬ್ಯಾರಿಕೇಡ್ ನ ಒಂದು ಬದಿಯಲ್ಲಿ ‘ಹೆಲ್ಮೆಟ್ ಧರಿಸಿ ಜೀವ ಉಳಿಸಿ’ ಎಂದು ಮತ್ತೊಂದು ಕಡೆಯಲ್ಲಿ ‘ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ’ ಎಂದು ಬರೆಯವಂತೆ ಪೈಂಟರ್ ಗೆ ಸೂಚಿಸಲಾಗಿತ್ತು. ಆದರೆ ಆತ ಎರಡೂ ವಾಕ್ಯಗಳನ್ನು ಸೇರಿಸಿ ‘ ಮದ್ಯಪಾನ ಮಾಡಿ ಜೀವ ಉಳಿಸಿ’ ಎಂದು ಬರೆದಿದ್ದಾನೆ.
ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ಅದನ್ನು ಬದಲಿಸಿದ್ದಾರೆ.