Advertisement

Hassan: ಅನಾಥ ‌ಸ್ಥಿತಿಯಲ್ಲಿದೆ 900 ವರ್ಷ ಪುರಾತನ ಕೊಂಡಜ್ಜಿ ದೇಗುಲ!

01:43 PM Dec 18, 2023 | Team Udayavani |

ಹಾಸನ: ಶಿಲ್ಪಕಲೆಯ ತವರೂರು ಹಾಸನ ಜಿಲ್ಲೆಯಲ್ಲಿ ಹೊಯ್ಸಳ ಅರಸರ ಕಾಲದ ದೇವಾಲಯಗಳು ಹಳ್ಳಿ ಹಳ್ಳಿಗಳಲ್ಲೂ ಇವೆ. ಹಾಸನ ತಾಲೂಕಿನ ಕೊಂಡಜ್ಜಿ ಗ್ರಾಮ ದಲ್ಲಿಯೂ ಅಪೂರ್ವ ಶಿಲ್ಪಕಲಾಕೃತಿಯ ಮೂರ್ತಿಯ ದೇವಾಲಯವೊಂದಿದೆ. ಸುಮಾರು 900 ವರ್ಷಗಳ ಹಳೆಯ ದೇಗುಲ ಈಗ ಅನಾಥ ಸ್ಥಿತಿಯಲ್ಲಿದ್ದು ಜೀರ್ಣೋದ್ಧಾರಕ್ಕಾಗಿ ಎದುರು ನೋಡುತ್ತಿದೆ.

Advertisement

ಬೇಲೂರು ದೇವಾಲಯದಲ್ಲಿರಬೇಕಾಗಿದ್ದ ಶ್ರೀ ವರದ ರಾಜಸ್ವಾಮಿಯ ಅದ್ಭುತ ಶಿಲ್ಪಕಲಾ ವೈಭವದ ಮೂರ್ತಿಯು ಕೊಂಡಜ್ಜಿ ದೇವಾಲಯದಲ್ಲಿದೆ. ಗರುಡ ವಾಹನ, ಪದ್ಮಾಸನದ ಮೇಲೆ ಶಂಕ, ಚಕ್ರ ಗದಾಧಾರಿ ಕೃಷ್ಣ ಶಿಲೆಯ 5 ಮೀಟರ್‌ ಎತ್ತರದ
ವರದರಾಜಸ್ವಾಮಿಯ ಮೂರ್ತಿಯ ಖ್ಯಾತಿಯೇ ಈ ದೇವಾಲಯದ ವೈಶಿಷ್ಟ್ಯ. ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದ ಪುನರ್‌ ನಿರ್ಮಾಣಕ್ಕೆ ಕೈ ಹಾಕಿದವರು ಅರ್ಧಕ್ಕೆ ಬಿಟ್ಟಿರುವುದರಿಂದ ದೇವಾಲಯ ಅನಾಥ ಸ್ಥಿತಿಯಲ್ಲಿದೆ.

ದೇಗುಲ ಎಲ್ಲಿದೆ?: ಹಾಸನ-ಹಳೆಬೀಡು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಹಾಸನ ನಗರದಿಂದ 15 ಕಿ.ಮೀ. ದೂರ ದಲ್ಲಿರುವ ಕೊಂಡಜ್ಜಿ ಗ್ರಾಮಕ್ಕೆ ರಾಜ್ಯ ಹೆದ್ದಾರಿಯಿಂದ ಸುಸಜ್ಜಿತ ರಸ್ತೆಯಿದೆ. ಹೆದ್ದಾರಿ ಬದಿಯಲ್ಲಿ ದೇವಸ್ಥಾನದ ಖ್ಯಾತಿಗೆ ಭೂಷಣವೆಂಬಂಥ ಸ್ವಾಗತ ಕಮಾನು ನಿರ್ಮಾಣವಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ಗ್ರಾಮದ ಶ್ರೀ ವರದರಾಜಸ್ವಾಮಿ ದೇವಾಲಯವನ್ನು ರಾಜ್ಯ ಪುರಾತತ್ವ ಇಲಾಖೆಯು ಸಂರಕ್ಷಿತ ಸ್ಮಾರಕವೆಂದೂ ಘೋಷಿಸಲ್ಪಟ್ಟಿದೆ. ಆದರೆ ಕೊಂಡಜ್ಜಿ ದೇವಾಲಯದ ವಿಷಯದಲ್ಲಿ ಪುರಾತತ್ವ ಸ್ಮಾರಕಗಳ ರಕ್ಷಣೆಗೆ ಕೈಗೊಳ್ಳಬೇಕಾದ ರಕ್ಷಣಾತ್ಮಕ ಕ್ರಮಗಳನ್ನು ಪ್ರಾಚ್ಯವಸ್ತು ಮತ್ತು ಸಂಗ್ರಹಗಳ ನಿರ್ದೇಶನಾಲಯ ಆಸಕ್ತಿ ತೋರಿಲ್ಲ.

ಪೌರಾಣಿಕ, ಐತಿಹಾಸಿಕ ಹಿನ್ನೆಲೆ: ಕೊಂಡಜ್ಜಿ ಗ್ರಾಮದ ಶ್ರೀ ವರದರಾಜ ಸ್ವಾಮಿ ದೇವಾಲಯದಲ್ಲಿರುವ ವಿಗ್ರಹ ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ಪ್ರತಿಷ್ಠಾಪಿಸಬೇಕಾಗಿದ್ದ ವಿಗ್ರಹ ಎಂಬ ದಂತಕತೆಯಿದೆ. ಹೊಯ್ಸಳ ಅರಸರು ಬೇಲೂರು ದೇಗುಲ ನಿರ್ಮಾಣ ಸಂದರ್ಭದಲ್ಲಿ ಸುಂದರ ವಿಗ್ರಹ ನಿರ್ಮಾಣಕ್ಕೆ ಶಿಲ್ಪಿಗಳಿಗೆ ಸೂಚಿಸಿದ್ದರಂತೆ. ಅದರಂತೆ ಶಿಲ್ಪಿಗಳು ಕೃಷ್ಣ ವರ್ಣದ 5 ಮೀ. ವಿಗ್ರಹವನ್ನು ಕೃಷ್ಣ ಶಿಲೆಯಿರುವ ಪ್ರದೇಶದಲ್ಲಿ ರೂಪಿಸಿ ಬೇಲೂರಿಗೆ ಸಾಗಿಸುತ್ತಿದ್ದರು.

ರಾತ್ರಿಯಾಗಿದ್ದರಿಂದ ಮಾರ್ಗ ಮಧ್ಯೆ ಕೊಂಡಜ್ಜಿ ಗ್ರಾಮದ ಬಳಿ ಅಡುಗೂಲಜ್ಜಿ ಮನೆಯಲ್ಲಿ ಊಟ ಮಾಡಿ ತಂಗಿದ್ದರು. ಶಿಲೆ ಸಾಗಿಸುತ್ತಿದ್ದವರಲ್ಲಿ ಕೆಲವರು ಬೇಲೂರಿಗೆ ಹೋಗಿ ಗರ್ಭ ಗುಡಿಯ ಅಳತೆ ಮಾಡಿಕೊಂಡು ಬಂದಾಗ ವಿಗ್ರಹವು ಬೇಲೂರು ದೇಗುಲದ ಗರ್ಭಗುಡಿಗೆ ಹೊಂದಿಕೊಳ್ಳುವುದಿಲ್ಲ ಎಂಬ ನಿರ್ಧಾರಕ್ಕೆ ಬಂದರು. ಹಾಗಾಗಿ ಶಿಲ್ಪಿಗಳು ಅಜ್ಜಿಯ ಮನೆ
ಯಲ್ಲಿ ತಾವು ವಾಸ್ತವ್ಯ ಹೂಡಿ ಊಟ ಮಾಡಿದ್ದಕ್ಕಾಗಿ ಆ ವಿಗ್ರಹವನ್ನು ಅಜ್ಜಿಗೇ ಕೊಟ್ಟು ಹೋದರೆನ್ನಲಾಗಿದೆ.

Advertisement

ಈ ವಿಗ್ರಹ ಪಡೆದುಕೊಂಡಿದ್ದ ಅಜ್ಜಿಯು ಗ್ರಾಮಸ್ಥರ ನೆರವಿನಿಂದ ಕಲ್ಲು ಕಂಬ, ಕಲ್ಲು ಚಪ್ಪಡಿಗಳ ದೇಗುಲ ನಿರ್ಮಿಸಿದ್ದರು. ಅಜ್ಜಿಯು ಶಿಲ್ಪಿಗಳಿಗೆ ಊಟ ಹಾಕಿ ಪಡೆದು ಕೊಂಡ (ಖರೀದಿಸಿ) ಮೂರ್ತಿಗಾಗಿ ದೇವಾಲಯ ನಿರ್ಮಿಸಿದ ಕಾರಣಕ್ಕೆ ಆ ಗ್ರಾಮಕ್ಕೆ ಕೊಂಡಜ್ಜಿ ಎಂಬ ಹೆಸರು ಬಂದಿದೆ ಎಂಬ ದಂತಕತೆಯೂ ಇದೆ.

ಕತೆ ಏನೇ ಇರಲಿ, ಆದರೆ ಅಪೂರ್ವ ಶಿಲ್ಪ ಕಲಾ ವೈಭವದ ಕಲಾಕೃತಿಗೆ ತಕ್ಕಂತಹ ದೇವಾಲಯ ಕೊಂಡಜ್ಜಿಯಲ್ಲಿಲ್ಲ. ಇದ್ದ ಹಳೆಯ ದೇವಾಲಯವನ್ನೂ 15 ವರ್ಷಗಳ ಹಿಂದೆ ಕೆಡವಿ ಪುನರ್‌ ನಿರ್ಮಾಣದ ಹೆಸರಲ್ಲಿ ದೇವಾಲಯದ ಪರಿಸರವನ್ನು ವಿರೂಪಗೊಳಿಸಲಾಗಿದೆ.

ಅರ್ಧಂಬರ್ಧ ಕಾಮಗಾರಿ: ನೂತನ ದೇವಾಲಯ ನಿರ್ಮಾಣ ಮಾಡುವುದಾಗಿ 2004 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷವೊಂದರ ಅಭ್ಯರ್ಥಿಯಾಗಿದ್ದವರು ದೇಗುಲದ ಚಪ್ಪಡಿಗಳನ್ನು ಕೆಡವಿ ಪುನರ್‌ ನಿರ್ಮಾಣಕ್ಕೆ ಕೈ ಹಾಕಿದ್ದರು. ಆದರೆ ಚುನಾವಣೆ ಮಗಿಯುವುದರೊಳಗೆ ಕಾಮಗಾರಿಯೂ ಪೂರ್ಣಗೊಳ್ಳಲಿಲ್ಲ. ಚುನಾವಣೆಯಲ್ಲಿ ಆ
ಅಭ್ಯರ್ಥಿಯೂ ಸೋತರು. ಹಾಗಾಗಿ ಕಾಮಗಾರಿ ಅಪೂರ್ಣವಾಗಿಯೇ ಉಳಿದಿತ್ತು.

ದೇವಾಲಯದ ಅವ್ಯವಸ್ಥೆಯ ಬಗ್ಗೆ ಕೆಲವರು ಜಿಲ್ಲಾ ಡಳಿತದ ಗಮನ ಸೆಳೆದಿದ್ದರಿಂದ 2008ರಲ್ಲಿ ಮುಜರಾಯಿ ಇಲಾಖೆ 25 ಲಕ್ಷ ರೂ. ಮಂಜೂರು ಮಾಡಿತ್ತು. ಆ ಮೊತ್ತದಲ್ಲಿ ಲೋಕೋಪಯೋಗಿ ಇಲಾಖೆ ದೇವಾಲಯದ ಪುನರ್‌ ನಿರ್ಮಾಣದ ಕಾಮಗಾರಿ ಆರಂಭಿಸಿತು. ಆದರೆ 25 ಲಕ್ಷ ರೂ. ಸಾಕಾಗಲಿಲ್ಲ ಎಂದು ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೇ ಬಿಟ್ಟು ಹೋದರು. ಮುಜರಾಯಿ ಇಲಾಖೆ ಅಥವಾ ಪ್ರಾಚ್ಯವಸ್ತು ಮತ್ತು ಸಂಗ್ರಹಗಳ ನಿರ್ದೇಶನಾಲಯ ದೇಗುಲದ ಕಾಮಗಾರಿ ಪೂರ್ಣಗೊಳಿಸಿದರೆ ಕೊಂಡಜ್ಜಿ ದೇವಾಲಯವೂ ಆಕರ್ಷಕ ಪ್ರವಾಸಿ ಹಾಗೂ ಧಾರ್ಮಿಕ ತಾಣವಾಗಬಹುದು.

*ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next