ಶಿವಮೊಗ್ಗ: ಆಕ್ಷೇಪಾರ್ಹ ವಿಡಿಯೋಗಳ ಸಂಬಂಧ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಡಿಯೋ ಸಂಬಂಧಿತ ಸುದ್ದಿಗಳು ಹರಿದಾಡಿದ ಕಾರಣ ದೇವೇಗೌಡ ಅವರಿಗೆ ನಾನೇ ಮನವಿ ಮಾಡಿದ್ದೇನೆ. ಪ್ರಜ್ವಲ್ ಅವರನ್ನು ಅಮಾನತು ಮಾಡಲು ನಿರ್ಧರಿಸಿದ್ದೇವೆ ಎಂದರು.
ಯಾರು ಎಲ್ಲಿ ಹೋಗುತ್ತಾರೆಂದು ಕಾಯಲು ಆಗುತ್ತದೆಯೇ ಎಂದ ಅವರು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು, ಸಮಗ್ರ ತನಿಖೆಯಾಗಬೇಕು ಎಂದು ಹೇಳಿದರು.
ನರೇಂದ್ರ ಮೋದಿಗೂ ಇದಕ್ಕೂ ಸಂಬಧವಿಲ್ಲ, ಬಿಜೆಪಿಗೂ ಇದಕ್ಕೂ ಸಂಬಧವಿಲ್ಲ, ದೇವೇಗೌಡರಿಗೂ ಇದಕ್ಕೂ ಸಂಬಧವಿಲ್ಲ, ಕುಮಾರಸ್ವಾಮಿಗೂ ಇದಕ್ಕೂ ಸಂಬಧವಿಲ್ಲ. ನನ್ನ ಅಥವಾ ತಂದೆಯ ಬಗ್ಗೆಯಾಗಲಿ ಜನರಿಗೆ ಸಂಶಯ ಬೇಡ ಎಂದು ಕುಮಾರಸ್ವಾಮಿ ಹೇಳಿದರು.
ಘಟನೆಯಿಂದ ಪಕ್ಷವು ಮುಜುಗರಕ್ಕೆ ಒಳಗಾಗಿದ್ದು, ಪ್ರಜ್ವಲ್ ಅವರನ್ನು ಉಚ್ಛಾಟಿಸಬೇಕು ಎಂದು ಶರಣಗೌಡ ಕಂದಕೂರ ಸೇರಿ ಜೆಡಿಎಸ್ ಶಾಸಕರು ಒತ್ತಾಯಿಸಿದ್ದರು. ಕಂದಕೂರ ಅವರು ದೇವೇಗೌಡರಿಗೂ ಈ ಬಗ್ಗೆ ಪತ್ರ ಬರೆದಿದ್ದರು.