Advertisement
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಹಾಸನ ಕ್ಷೇತ್ರದಿಂದ ಗೆದ್ದಿರುವ ಜೆಡಿಎಸ್‌ಯೇತರ ಏಕೈಕ ಶಾಸಕ ಬಿಜೆಪಿಯ ಪ್ರೀತಂಗೌಡ ಅವರು ಕಳೆದ ಮೂರು ವರ್ಷಗಳಿಂದ ಜೆಡಿಎಸ್‌ನೊಂದಿಗೆ ರಾಜಕೀಯ ಸೆಣಸಾಟ ನಡೆಸುತ್ತಲೇ ಬಂದಿದ್ದಾರೆ.
ತಿರುಗೇಟು ನೀಡುತ್ತಲೇ ಹಾಸನ ಕ್ಷೇತ್ರದಲ್ಲಿ ರಾಜಕೀಯ ನೆಲೆ ಭದ್ರಪಡಿಸಿ ಕೊಳ್ಳುತ್ತಾ ಬಂದಿದ್ದ ಪ್ರೀತಂಗೌಡ ಅವರಿಗೆ ಬದಲಾದ ರಾಜಕೀಯ ಪರಿಸ್ಥಿತಿಯಿಂದ ಈಗ ಅಭದ್ರತೆಕಾಡತೊಡಗಿದೆ. ಬೆಂಬಲ ಸಿಕ್ಕಿಲ್ಲ: ಬೊಮ್ಮಾಯಿ ಮತ್ತು ಗೌಡರ ಭೇಟಿಯ ಬಗ್ಗೆ ರಾಜ್ಯದಲ್ಲಿ ಮೊದಲು ಆಕ್ಷೇಪ ಎತ್ತಿದವರು ಹಾಸನದ ಶಾಸಕ ಪ್ರೀತಂಗೌಡ. ಆದರೆ, ಅವರ ಆಕ್ಷೇಪಕ್ಕೆ ರಾಜ್ಯ ಬಿಜೆಪಿ ವಲಯದಲ್ಲಿ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಹಿರಿಯ ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ ಸೇರಿದಂತೆ ಹಲವು ಬಿಜೆಪಿ ಮುಖಂಡರು ಪ್ರೀತಂಗೌಡ ಧೋರಣೆಯನ್ನೇ ಖಂಡಿಸುವ ಧಾಟಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
Related Articles
Advertisement
ಇದನ್ನೂ ಓದಿ: ಉಗ್ರರ ವಿರುದ್ಧ ಹೋರಾಡಲು ಹೊಸಪಡೆ ರಚನೆ: ತಾಲಿಬಾನ್ ಗೆ ಸಡ್ಡು ಹೊಡೆದ ಗವರ್ನರ್ ಸಲೀಮಾ!
ಆಪರೇಷನ್ ಕಮಲಕ್ಕೆ ಸಾಥ್:ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಉರುಳಿಸುವ ರಾಜಕೀಯ ಚಟುವಟಿಕೆಗಳು ಆರಂಭವಾದ ಸಂದರ್ಭದಲ್ಲಿ ರಾಜಕೀಯ ಮುನ್ನೆಲೆಗೆ
ಬರುವ ಭರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಪಾಳೆಯದಲ್ಲಿ ಗುರುತಿಸಿಕೊಳ್ಳಲಾರಂಭಿಸಿದ ಪ್ರೀತಂಗೌಡ, ಆಪರೇಷನ್ ಕಮಲ ಚಟುವಟಿಕೆಯಲ್ಲಿ ನೇರವಾಗಿ ಕಾಣಿಸಿಕೊಳ್ಳಲಾರಂಭಿಸಿದ್ದರು. ಒಮ್ಮೆ ಅವರು ದೇವೇಗೌಡರ ಬಗ್ಗೆ ಬಿಜೆಪಿ ಮುಖಂಡರೊಂದಿಗೆ ನಡೆಸಿದ್ದರೆನ್ನಲಾದ ಸಂವಾದದ ಆಡಿಯೋ ವೈರಲ್ ಆಗಿ ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ, ಪ್ರೀತಂಗೌಡ ಅವರ ಮನೆಯ ಮೇಲೆ
ಕಲ್ಲು ತೂರಾಟದ ಬೆಳವಣಿಗೆಗಳೂ ನಡೆದು ಹೋದವು. ಅದಾದ ಕೆಲವೇ ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಯಿತು. ವಿಜಯೇಂದ್ರ ಜೊತೆ ಒಡನಾಟ: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಪ್ರೀತಂಗೌಡ ಬಿಎಸ್‌ವೈ ಕುಟುಂಬದ ಸದಸ್ಯರೆನ್ನುವಷ್ಟರ ಮಟ್ಟಿಗೆ ಒಡನಾಟ, ವ್ಯವಹಾರ ನಡೆಯುತ್ತಾ ಉಪ ಚುನಾವಣೆಗಳಲ್ಲಿ ವಿಜಯೇಂದ್ರ ಜೊತೆಗೆ ಬಿಜೆಪಿ ಅಭ್ಯರ್ಥಿಗಳ ವಿಜಯದ ರೂವಾರಿ ಎಂದೂ ಬಿಂಬಿಸಕೊಳ್ಳತೊಡಗಿದರು. ರಾಜಕೀಯ ಪ್ರಭಾವ ವೃದ್ಧಿ: ಈ ಎಲ್ಲ ಬೆಳವಣಿಗೆಗಳಿಂದ ಹಾಸನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಚುರುಕು, ಕಾರ್ಯಕರ್ತರ ಪಡೆಯೂ
ಬೆಳೆಯುತ್ತಾ ಹೋಯಿತು. ಅವರ ರಾಜಕೀಯ ಬೆಳವಣಿಗೆಯ ವೇಗ ಹಾಸನ ನಗರಸಭೆಯಲ್ಲಿ ಬಿಜೆಪಿಗೆ ಬಹುಮತವಿಲ್ಲದಿದ್ದರೂ ಅಧಿಕಾರ
ಹಿಡಿಯುವ ನಿಟ್ಟಿನಲ್ಲಿ ಅಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಪಡಿಸಿಕೊಂಡು ಬರುವಷ್ಟರ ಮಟ್ಟಕ್ಕೆ ರಾಜಕೀಯ ಪ್ರಭಾವ ಬೆಳೆಸಿಕೊಂಡರು.
ಹಾಸನದಲ್ಲಿ ಎಚ್.ಡಿ.ರೇವಣ್ಣ ಅವರ ಕನಸಿನ ಅಭಿವೃದ್ಧಿ ಯೋಜನೆಗಳ ಪರಿಷ್ಕರಣೆ ಮತ್ತು ಕೆಲವು ಯೋಜನೆಗಳ ತಡೆಯುವ ಮಟ್ಟಕ್ಕೂ ಹೋದರು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗೋಪಾಲಯ್ಯ ಅವರೂ ಅಸಹಾಯಕರಾದರು. ಅಧಿಕಾರಿಗಳ ಮೇಲೂ ಹಿಡಿತ ಸಾಧಿಸುತ್ತಿದ್ದ ಪ್ರೀತಂಗೌಡ ಅವರ ಈ ಬೆಳವಣಿಗೆ ಜೆಡಿಎಸ್ ಮುಖಂಡರ ನಿದ್ದೆಗೆಡಿಸುವ ಮಟ್ಟಕ್ಕೆ ಹೋಯಿತು. ಹಾಸನ ಕ್ಷೇತ್ರದಲ್ಲಿ ಪ್ರೀತಂಗೌಡ ಅವರಿಗೆ ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಎದುರಾಳಿಗಳೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗತೊಡಗಿತ್ತು. ಯಡಿಯೂರಪ್ಪ ಅವರ ಸರ್ಕಾರ ಪತನದ ನಂತರ
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಹಾಸನ ಜಿಲ್ಲೆಯ ರಾಜಕಾರಣದ ಚಿತ್ರಣವೇ ಬದಲಾಗುವಂತಿದೆ. ಎಚ್.ಡಿ.ರೇವಣ್ಣ ಅವರ ಕೈ ಮೇಲಾಗುತ್ತಿದೆಯೇನೋ ಎಂಬ ಪರಿಸ್ಥಿತಿಗೋಚರಿಸುತ್ತಿದೆ. ಪ್ರೀತಂಗೌಡರ ನಿದ್ದೆಗೆಡಿಸಿದ ರೇವಣ್ಣ ಹಾಜರಿ
ವಿಶೇಷವಾಗಿ ಮುಖ್ಯಮಂತ್ರಿ ಬೊಮ್ಮಾಯಿ – ಜೆಡಿಎಸ್ ವರಿಷ್ಠ ದೇವೇಗೌಡ ಭೇಟಿ, ಅದರ ಬೆನ್ನಿಗೇ ದೆಹಲಿಯಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ಗಡ್ಕರಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಭೇಟಿ, ಈ ಎಲ್ಲ ಭೇಟಿಯ ಸಂದರ್ಭದಲ್ಲಿಯೂ ಎಚ್.ಡಿ. ರೇವಣ್ಣ ಅವರ ಹಾಜರಿಯು ಶಾಸಕ ಪ್ರೀತಂಗೌಡ ಅವರ ನಿದ್ದೆ ಕೆಡಿಸಿದಂತಿದೆ. ಬಸವರಾಜ ಬೊಮ್ಮಾಯಿ ಅವರು ದೇವೇಗೌಡರ ಭೇಟಿಗೆ ಹೋಗಿದ್ದು ಬಿಜೆಪಿ ಹೈಕಮಾಂಡ್ ಸೂಚನೆಯ ಮೇರೆಗೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿಯೇ ಹರಿದಾಡುತ್ತಿರುವುದು ಪ್ರೀತಂಗೌಡರನ್ನಷ್ಟೇ ಅಲ್ಲ, ಯಡಿಯೂರಪ್ಪ ಅವರ ಪಾಳಯದಲ್ಲಿಯೂ ರಾಜಕೀಯ ತಲ್ಲಣವನ್ನುಂಟು ಮಾಡಿದೆ. ಈ ಎಲ್ಲ ಬೆಳವಣಿಗೆಗಳಿಂದ ಪ್ರೀತಂಗೌಡರಿಗೆ ಎರಡು ವರ್ಷಗಳ ಹಿಂದಿದ್ದ ತಮ್ಮ ರಾಜಕೀಯ ಸ್ಥಿತಿಯನ್ನು ನೆನಪಿಸಿದಂತಿದೆ. ಹಾಗಾಗಿಯೇ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡೆಯನ್ನೇ ಪ್ರಶ್ನಿಸುವ ಹಂತದ ಹತಾಶೆ ಪ್ರದರ್ಶಿಸಿದಂತಿದೆ. ಹಾಸನದಲ್ಲಿ ರಾಜಕೀಯವಾಗಿ ಉಳಿಯ ಬೇಕಾದರೆ ಸೆಟೆದು ನಿಲ್ಲಲೇಬೇಕು ಎಂಬ ಹಂತಕ್ಕೆ ಪ್ರೀತಂಗೌಡ ಬಂದಂತಿದೆ. ಈಗಷ್ಟೇ ಹೋರಾಟ ಆರಂಭವಾದಂತಿದೆ. ಇದು ಯಾವ ಹಂತಕ್ಕೆ ಹೋಗುತ್ತದೆಯೋಕಾದು ನೋಡಬೇಕಾಗಿದೆ. ದನಿ ಎತ್ತುವುದು ಅನಿವಾರ್ಯ
ಬಿಜೆಪಿಯಲ್ಲಿನ ಈ ಬೆಳವಣಿಗೆಗಳು ಈಗ ಹಾಸನದ ರಾಜಕಾರಣದ ಚಕ್ರವ್ಯೂಹದಲ್ಲಿ ಈಗ ಪ್ರೀತಂಗೌಡ ಅವರಿಗೆ ಜೆಡಿಎಸ್ ವಿರುದ್ಧ ಏಕಾಂಗಿಯಾಗಿ ಹೋರಾಡುವ ಟಾಸ್ಕ್ ಎದುರಾದಂತಿದೆ. ಹಾಗಾಗಿಯೇ ಅವರು ನಾನು ಟಾಸ್ಕ್ ಮಾಸ್ಟರ್ ಎಂದು ಹೇಳಿಕೊಂಡಿದ್ದು, ಅವರಿಗೆ ಹಾಸನದಲ್ಲಿ ರಾಜಕೀಯ ಮಾಡಬೇಕಾದರೆ ಜೆಡಿಎಸ್ ಅಧಿಪತ್ಯದ ವಿರುದ್ಧ ದನಿ ಎತ್ತುವುದು ಅನಿವಾರ್ಯವೂ ಆಗಿದೆ. ಹಾಗಾಗಿಯೇ ಅವರು ಹೆಜ್ಜೆ, ಹೆಜ್ಜೆಗೂ ಜೆಡಿಎಸ್ ವಿರುದ್ಧ ವಿಶೇಷವಾಗಿ ಎಚ್.ಡಿ.ರೇವಣ್ಣ ವಿರುದ್ಧ ಸೆಣಸಾಟಕ್ಕೆ ಸೈ ಎನ್ನುವ ಸೂಚನೆ ನೀಡುತ್ತಲೇ ಬರುತ್ತಿದ್ದಾರೆ. -ಎನ್. ನಂಜುಂಡೇಗೌಡ