Advertisement

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

08:46 PM Nov 04, 2024 | Team Udayavani |

ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇವಿ ಸನ್ನಿಧಿಗೆ ರಾಜ್ಯ ಸೇರಿದಂತೆ ಹಲವು ಕಡೆಗಳಿಂದ ಆಗಮಿಸುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿರುವುದರಿಂದ ದೇಗುಲದ ಆದಾಯದಲ್ಲೂ ಗಣನೀಯವಾಗಿ ಏರಿಕೆಯಾಗಿದೆ. ಈ ಬಾರಿಯಂತೂ ಹಾಸನಾಂಬೆ ದೇಗುಲದ ಒಟ್ಟು ಆದಾಯ 12.64 ಕೋಟಿ ರೂ.ಗೆ ಏರಿಕೆಯಾಗಿ ಈ ಹಿಂದಿನ ದಾಖಲೆಗಳ ಮುರಿದು ಹೊಸ ದಾಖಲೆಯ ಸೃಷ್ಟಿಸಿದೆ.

Advertisement

ಕೊರೊನಾ ನಂತರದ ವರ್ಷಗಳಲ್ಲಿ ದೇವಿಯ ಹಿರಿಮೆ- ಗರಿಮೆ ಹೆಚ್ಚಳದ ಜತೆಗೆ ದೇವಿಯ ದರ್ಶನ ಮಾಡುವ ಭಕ್ತರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಹಾಗೆಯೇ ಭಕ್ತರ ಕಾಣಿಕೆಯ ಮೊತ್ತವೂ ಏರುತ್ತಿದ್ದು, ಹಾಸನಾಂಬೆ ಈಗ ದಶ ಕೋಟ್ಯಾಧೀಶ್ವರಿಯಾಗಿ ಹೊರ ಹೊಮ್ಮಿದ್ದಾಳೆ. ಕಳೆದ ವರ್ಷ 14 ಲಕ್ಷ ಭಕ್ತರ ಸಂಖ್ಯೆಯ ಮುರಿದು ಈ ವರ್ಷ 20.40 ಲಕ್ಷ ಭಕ್ತರು ದೇವಿ ಸನ್ನಿಧಿಗೆ ಬಂದಿದ್ದರೆ, ಜಿಲ್ಲೆ, ರಾಜ್ಯ, ದೇಶ-ವಿದೇಶಗಳ ಭಕ್ತರು ನೀಡಿದ ಕಾಣಿಕೆಯ ಮೊತ್ತವೂ ದಾಖಲೆ ಸೃಷ್ಟಿಸಿದೆ.

ಯಾವುದರಿಂದ ಎಷ್ಟು ಆದಾಯ?:
ದೇವಿ ವಿಶೇಷ ದರ್ಶನ 1000 ರೂ. ಟಿಕೆಟ್‌ ಮಾರಾಟದಿಂದ ಒಟ್ಟು 7.41 ಕೋಟಿ ರೂ. ಸಂಗ್ರಹವಾಗಿದೆ. ಅದರಲ್ಲಿ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ನಿಂದ 25.67 ಲಕ್ಷ ರೂ. ಸಂಗ್ರಹವಾಗಿದ್ದರೆ, ಟಿಕೆಟ್‌ಗಳನ್ನು ಕೌಂಟರ್‌ಗಳಲ್ಲಿ ನೇರ ಮಾರಾಟದಿಂದ 7.16 ಕೋಟಿ ರೂ. ಸಂಗ್ರಹವಾಗಿದೆ. ಹಾಸನಾಂಬೆ ದೇವಿ ದೇಗುಲದ ಹುಂಡಿ ಹಣ ಬಿಟ್ಟು ಕೇವಲ ಟಿಕೆಟ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ 9.69 ಕೋಟಿಯಷ್ಟು ಆದಾಯ ಸಂಗ್ರಹವಾಗಿದ್ದರೆ, ಹುಂಡಿ ಕಾಣಿಕೆಯನ್ನು ಸೇರಿಸಿದರೆ 12,63,83,808 ರೂ. ಆದಾಯ ಸಂಗ್ರಹವಾಗಿದೆ. ಇಷ್ಟೊಂದು ಪ್ರಮಾಣದ ಆದಾಯ ಹಾಸನಾಂಬೆ ದರ್ಶನದ ಇತಿಹಾಸದಲ್ಲೇ ದಾಖಲೆಯಾಗಿದೆ. ಹಾಸನಾಂಬೆ ದೇಗುಲಕ್ಕೆ 2022ರಲ್ಲಿ  3.36 ಕೋಟಿ ರೂ. ಆದಾಯಗಳಿಸಿದ್ದರೆ, 2023ರಲ್ಲಿ 8.72 ಕೋಟಿ ರೂ. ಸಂಗ್ರಹವಾಗಿತ್ತು.

500 ಮಂದಿಯಿಂದ ಹುಂಡಿ ಎಣಿಕೆ :
ಹಾಸನಾಂಬ ದೇಗುಲ ಸಮೀಪವಿರುವ ಶ್ರೀ ಚನ್ನಕೇಶವ ಸ್ವಾಮಿ ಕಲ್ಯಾಣ ಮಂಟಪದಲ್ಲಿ 10 ಗಂಟೆಗೆ ಆರಂಭವಾದ ಹುಂಡಿ ಎಣಿಕೆ ಕಾರ್ಯ ಬೆಳಗ್ಗೆಯಿಂದ ಸಂಜೆ 4 ಗಂಟೆವರೆಗೂ ಸತತ 7 ಗಂಟೆಗಳ ಕಾಲ ನಿರಂತರವಾಗಿ ನಡೆಯಿತು. ಎಣಿಕೆಗೆ ಹತ್ತಾರು ಯಂತ್ರಗಳ ಬಳಸಲಾಯಿತು. ಬ್ಯಾಂಕ್‌ ಸಿಬ್ಬಂದಿ, ಕಂದಾಯ ಇಲಾಖೆ ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಿಬ್ಬಂದಿ ಸೇರಿ ಸುಮಾರು 500 ಜನರು ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು. ಹಾಸನ ಉಪ ವಿಭಾಗಾಧಿಕಾರಿಯೂ ಆಗಿರುವ ದೇಗುಲ ಆಡಳಿತಾಧಿಕಾರಿಯೂ ಆಗಿರುವ ಹಾಸನ ಉಪವಿಭಾಗಾಧಿಕಾರಿ ಮಾರುತಿ ಹಾಗೂ ಹಾಸನ ತಹಶೀಲ್ದಾರ್‌ ಶ್ವೇತಾ  ಎಣಿಕೆ ಕಾರ್ಯ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next