Advertisement
ಹಿಂದಿನ ಎರಡು ವರ್ಷಗಳಲ್ಲಿ ಅಂದರೆ 2018-19 ಮತ್ತು 2019 -20 ನೇ ಸಾಲಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಜಿಲ್ಲೆಯ ಜನರ ನಿರೀಕ್ಷೆ ಮೀರಿದ ಭರಪೂರ ಅಭಿವೃದ್ಧಿ ಯೋಜನೆಗಳನ್ನು ಹಾಸನ ಜಿಲ್ಲೆಗೆ ಘೋಷಣೆ ಮಾಡಿತ್ತು. ಆ ಎರಡು ವರ್ಷಗಳ ಬಜೆಟ್‌ನಿಂದ ಹರ್ಷದ ಕಡಲಲ್ಲಿ ತೇಲಿದ್ದ ಜಿಲ್ಲೆಯ ಜನರಿಗೆ ಈ ಬಾರಿಯ ಬಜೆಟ್ ನೋಡಿ ನಿರೀಕ್ಷೆಯಂತೆಯೇ ನಿರಾಸೆ ಆವರಿಸಿದೆ.
Related Articles
Advertisement
ಆದರೆ ಯಾವೊಂದು ಏತ ನೀರಾವರಿ ಯೋಜನೆಯ ಬಗ್ಗೆಯೂ ಪ್ರಸ್ತಾಪವಾಗಿಲ್ಲ. ಆದರೆ ಬಜೆಟ್‌ನಲ್ಲಿ ರಾಜ್ಯದ ಏತನೀರಾವರಿ ಯೋಜನೆಗಳಿಗಾಗಿಯೇ 5ಸಾವಿರ ಕೋಟಿ ರೂ.ಗಳನ್ನು ಮುಂದಿನ ವರ್ಷ ಖರ್ಚು ಮಾಡುವುದಾಗಿ ಮುಖ್ಯಮಂತ್ರಿ ಪ್ರಸ್ತಾಪ ಮಾಡಿದ್ದಾರೆ. ಆಯಾ ಕ್ಷೇತ್ರದ ಶಾಸಕರು ಪ್ರಭಾವ ಬೀರಿ ಯೋಜನೆಗಳನ್ನು ಮಂಜೂರು ಮಾಡಿಸಿಕೊಳ್ಳಬಹುದೆನೋ ಎಂಬ ಸಣ್ಣ ಆಸೆಯೊಂದನ್ನು ಇಟ್ಟುಕೊಳ್ಳಬಹದು ಅಷ್ಟೇ.
ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿವೆ. ಆದರೆ ಆ ಬಗ್ಗೆಯೂ ಬಜೆಟ್‌ನಲ್ಲಿ$ ಪ್ರಸ್ತಾಪವಾಗಿಲ್ಲ. ಪ್ರವಾಸೋದ್ಯಮದಲ್ಲಿ ಮುಖ್ಯವಾಗಿ ಗೊರೂರು ಹೇಮಾವತಿ ಜಲಾಶಯದ ಮುಂಭಾಗ ಕೆಆರ್‌ಎಸ್ ಮಾದರಿಯ ಉದ್ಯಾನವನ ನಿರ್ಮಾಣದ ಯೋಜನೆ ಸಿದ್ಧವಾಗಿತ್ತು. ಜೈಪುರದ ಸಂಸ್ಥೆಯೊಂದು ಯೋಜನೆಯ ನೀಲ ನಕ್ಷೆಯನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಜೆಡಿಎಸ್ – ಕಾಂಗ್ರೆಸ್ ಸರ್ಕಾರದಲ್ಲಿ ಹಾಸನ ಜಿಲ್ಲೆಯ ಮಹತ್ವಾಕಾಂಕ್ಷೆಯ ಯೋಜನೆಯೂ ಅದಾಗಿತ್ತು. ಆದರೆ ಆ ಯೋಜನೆಯ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪದ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆಯೂ ಹುಸಿಯಾಗಿದೆ.
ಹಾಸನ ಅಭಿವೃದ್ಧಿಯ ಪ್ರಸ್ತಾಪವಿಲ್ಲ: ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಯೋಜನೆಯಂತೆ ಏತನೀರಾವರಿಗಳಿಂದ ಪ್ರಾಯೋಗಿಕವಾಗಿ ನೀರೆತ್ತುವ ಕಾರ್ಯವನ್ನು ಮುಂದಿನ ಮುಂಗಾರು ಮಳೆಯ ಸಂದರ್ಭದಲ್ಲಿ ಅನುಷ್ಠಾನಗೊಳಿಸುವುದು ಹಾಗೂ ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂ.ಗಳನ್ನು 2020 -21 ನೇ ಸಾಲಿನಲ್ಲಿ ತೆಗೆದಿರಿಸಿರುವುದು, ಹಾಸನ – ಮಂಗಳೂರು ರೈಲು ಮಾರ್ಗದ ಕಾರ್ಯಕ್ಷಮತೆಯನ್ನು ಹೆಚ್ಚುವ ವಿಷಯದಲ್ಲಿ ಹಾಸನ ಜಿಲ್ಲೆಯ ಹೆಸರು ಬಜೆಟ್‌ನಲ್ಲಿ ಪ್ರಸ್ತಾಪವಾಗಿದ್ದು
ಬಿಟ್ಟರೆ ಮುಖ್ಯಮಂತ್ರಿಯವರ ಬಜೆಟ್ ಭಾಷಣದಲ್ಲಿ ಹಾಸನ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಯಾವುದೇ ಪ್ರಸ್ತಾಪವೂ ಆಗದಿರುವುದು ಅನಿರೀಕ್ಷಿತವೇನೂ ಅಲ್ಲ. ಏಕೆಂದರೆ ಬಿಜೆಪಿ ಸರ್ಕಾರ ಅಧಿಕಾರ ಬಂದ ದಿನದಿಂದಲೇ ಹಾಸನ ಜಿಲ್ಲೆಗೆ ಕಳೆದೆರಡು ಬಜೆಟ್‌ನಲ್ಲಿ ಘೋಷಣೆಯಾದ ಹಾಗೂ ಸರ್ಕಾರದ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಅನುಷ್ಠಾನದ ಹಂತದಲ್ಲಿದ್ದ ಯೋಜನೆಗಳನ್ನೂ ಸರ್ಕಾರ ತಡೆ ಹಿಡಿದಿತ್ತು. ಈಗ ಬಜೆಟ್‌ನಲ್ಲಿ ಅದರ ಪ್ರತಿಫಲನ ಕಾಣಿಸಿದೆ.
ರಾಜಕೀಯ ದ್ವೇಷ ಸಾಧನೆ: ಎತ್ತಿನಹೊಳೆ ಹಾಗೂ ಹಾಸನ – ಮಂಗಳೂರು ರೈಲು ಮಾರ್ಗದ ಕಾರ್ಯಕ್ಷಮತೆ ಹೆಚ್ಚಳದ ಯೋಜನೆಗಳು ಹಾಸನ ಜಿಲ್ಲೆಯ ಜನರಿಗೆ ಹೆಚ್ಚು ಅನುಕೂಲವಾಗುವ ಯೋಜನೆಗಳೇನೂ ಅಲ್ಲ. ಎತ್ತಿನಹೊಳೆ ಯೋಜನೆಗೆ ಹಾಸನ ಜಿಲ್ಲೆಯ ಜನರು ಕಳೆದುಕೊಳ್ಳುವ ಭೂಮಿ, ಪರಿಸರಕ್ಕೆ ಹೋಲಿಸಿದರೆ ಅದರಿಂದ ಜಿಲ್ಲೆಗೆ ಸಿಗುವ ಅನುಕೂಲ ಏನೇನೂ ಇಲ್ಲ.
ಹಾಗೆಯೇ ಹಾಸನ – ಮಂಗಳೂರು ರೈಲು ಮಾರ್ಗದ ಕಾರ್ಯ ಕ್ಷಮತೆ ಹೆಚ್ಚಳದಿಂದ ಹಾಸನ ಜಿಲ್ಲೆಗಿಂತ ಕರಾವಳಿಯ ಜಿಲ್ಲೆಗಳಿಗಷ್ಟೇ ಅನುಕೂಲ. ಹಾಗಾಗಿ ಹಾಸನ ಜಿಲ್ಲೆಯ ಜನರಿಗೆ ಅಭಿವೃದ್ಧಿಯ ಗಾಳಿಯೂ ಸೋಕದಷ್ಟರ ಮಟ್ಟಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಾಸನ ಜಿಲ್ಲೆಯ ಮೇಲೆ ರಾಜಕೀಯ ದ್ವೇಷ ಸಾಧನೆ ಮಾಡಿದ್ದಾರೆ ಎಂಬುದು ಜಿಲ್ಲೆಯ ಬಹುಪಾಲು ಜನರ ಅಭಿಪ್ರಾಯ.
ಜೆಡಿಎಸ್ ಪ್ರಾಬಲ್ಯದ ಹಾಸನ ಜಿಲ್ಲೆಯ ಮೇಲೆ ಯಡಿಯೂರಪ್ಪ ಅವರ ಸರ್ಕಾರ ರಾಜಕೀಯ ಮತ್ಸರ ಸಾಮಾನ್ಯ. ಆದರೆ ಹಾಸನ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರು ಪ್ರತಿನಿಧಿಸುತ್ತಿದ್ದಾರೆ. ಅವರ ಪ್ರಯತ್ನದ ಫಲವಾಗಿಯಾದರೂ ಹಾಸನ ನಗರದ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳು ಬಜೆಟ್‌ನಲ್ಲಿ ಪ್ರಸ್ತಾಪವಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆಯೂ ಹುಸಿಯಾಗಿದೆ.
ಬಜೆಟ್ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಜಿಲ್ಲಾ ಯೋಜನಾ ಸಮಿತಿಯ ಸಭೆ ನಡೆಸಿ ಬಜೆಟ್‌ನಲ್ಲಿ ಇಲಾಖಾವಾರು ಅನುದಾನ ಕೋರಿಕೆಯ ಬಗ್ಗೆ, ಜಿಲ್ಲೆಯ ಅಭಿವೃದ್ಧಿ ಯೋಜನೆಯ ಬಗ್ಗೆ ಮಾಹಿತಿ ಪಡೆದಿದ್ದರು. ಆ ಸಂದರ್ಭದಲ್ಲಿ ಜಿಲ್ಲೆಯ ಅಧಿಕಾರಿಗಳು ಲಿಖೀತವಾಗಿಯೇ ಕೆಲವು ಯೋಜನೆಗಳ ಪ್ರಸ್ತಾವನೆಯನ್ನು ಸಚಿವರಿಗೆ ನೀಡಿದ್ದರು. ಆದರೆ ಪ್ರಸ್ತಾವನೆಗಳಲ್ಲಿ ಯಾವುದಾದರೊಂದರ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲೆಲ್ಲಾ ಹಾಸನ ಜಿಲ್ಲೆಯನ್ನು ಕಡೆಗಣಿಸುತ್ತಿವುದು ಸಾಮಾನ್ಯವಾಗಿದೆ. ಈ ಕಾರಣಕ್ಕಾಗಿ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜೆಡಿಎಸ್ ಶಾಸಕರು, ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿಯವರ ಬೆಂಗಳೂರು ನಿವಾಸದ ಬಳಿ ಧರಣಿ ನಡೆಸಿದ್ದೂ ಉಂಟು. ಇನ್ನು ಮುಂದಿನ ದಿನಳಲ್ಲಿ ಅಂತಹುದೇ ಪರಿಸ್ಥಿತಿ ಎದುರಾಗಬಹುದೇನೋ.
ಯಡಿಯೂರಪ್ಪ ಅವರು ಮಂಡಿಸಿರುವ ಬಜೆಟ್ ರೈತರ ಪರವೂ ಇಲ್ಲ, ಕಾರ್ಮಿಕರ ಪರವೂ ಇಲ್ಲ. ಪೆಟ್ರೋಲ್, ಡೀಸೆಲ್ ದರ ಏರಿಸಿ ಜನಸಾಮಾನ್ಯರ ಜೀವನದ ಮೇಲೆ ಬರೆ ಎಳೆದಿದ್ದಾರೆ. ಕೇಂದ್ರದಿಂದ ಅನುದಾನ ತರಲಾಗದ ಮುಖ್ಯಮಂತ್ರಿಯವರು ಬಜೆಟ್ ಮಂಡಿಸುವ ಶಾಸ್ತ್ರ ಮಾಡಿದ್ದಾರೆ ಅಷ್ಟೇ. ನಿರೀಕ್ಷೆಯಂತೆ ಹಾಸನ ಜಿಲ್ಲೆಗೆ ಮಲತಾಯಿ ಧೋರಣೆ ಮಾಡಿರುವುದು ಜಗಜ್ಜಾಹೀರಾಗಿದೆ.-ಜಾವಗಲ್ ಮಂಜುನಾಥ್, ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ಥಿಕ ಹಿಂಜರಿತ, ಕೇಂದ್ರದಿಂದ ಅನುದಾನ ಕಡಿತದ ನಡುವೆಯೂ ಯಾವುದೇ ಕ್ಷೇತ್ರವನ್ನೂ ಕಡೆಗಣಿಸದೇ ಮುಖ್ಯಮಂತ್ರಿ ಬಿಎಸ್‌ವೈ ಸಮತೋಲನದ ಬಜೆಟ್ ಮಂಡಿಸಿದ್ದಾರೆ. ನೀರಾವರಿ ಮತ್ತು ಕೃಷಿಗೆ ಆದ್ಯತೆ ನೀಡಿದ್ದಾರೆ. ಹಾಸನ ಜಿಲ್ಲೆಗೆ ಬಜೆಟ್‌ನಲ್ಲಿ ಹೆಚ್ಚು ಯೋಜನೆ ಘೋಷಣೆ ಮಾಡದಿದ್ದರೂ ಎತ್ತಿನಹೊಳೆ ಯೋಜನೆಯನ್ನು ಈ ವರ್ಷವೇ ಕಾರ್ಯಾರಂಭ ಮಾಡುವುದರಿಂದ ಜಿಲ್ಲೆಗೆ ಅನುಕೂಲವಾಗುತ್ತದೆ.
-ಎಚ್.ಕೆ.ಸುರೇಶ್, ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಸನ ಜಿಲ್ಲೆಯ ಸುವರ್ಣಯುಗ ಎಚ್.ಡಿ.ಕುಮಾರಸ್ವಾಮಿ ಅವರ ಕಾಲಕ್ಕೇ ಮುಗಿದು ಹೋಯಿತು. ನಿರೀಕ್ಷೆಯಂತೆಯೇ ಸಿಎಂ ಯಡಿಯೂರಪ್ಪ ಹಾಸನ ಜಿಲ್ಲೆಯ ಬಗ್ಗೆ ರಾಜಕೀಯ ಹಗೆತನ ಸಾಧಿಸುತ್ತಿದ್ದಾರೆ ಎಂಬುದಕ್ಕೆ ಬಜೆಟ್ ಸಾಕ್ಷಿಯಾಗಿದೆ. ಹಾಸನ ಜಿಲ್ಲೆಯೂ ರಾಜ್ಯದ ಭೂಪಟದಲ್ಲಿದೆ ಎಂಬುದನ್ನು ಬಿಜೆಪಿ ಸರ್ಕಾರಕ್ಕೆ ಹೋರಾಟದ ಮೂಲಕವೇ ಇನ್ನು ಮುಂದೆ ತೋರಿಸಬೇಕಾದ ಕಾಲ ಸನ್ನಿಹಿತ ವಾಗುತ್ತಿದೆ.
-ಎಚ್.ಎಸ್. ರಘು, ಹಾಸನ ಜಿಲ್ಲಾ ಜೆಡಿಎಸ್ ವಕ್ತಾರ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ತಡೆಗೆ ಶಾಶ್ವತ ಪರಿಹಾರ ನೀಡಿಲ್ಲ. ಈ ಬಾರಿಯೂ ಆನೆ ಕಾರಿಡಾರ್ ನಿರೀಕ್ಷೆ ಹುಸಿಯಾಗಿದೆ. ಹಾಸನ ಜಿಲ್ಲೆಗೆ ಹೊಸ ಯೋಜನೆಗಳನ್ನು ಘೋಷಣೆ ನೀಡಿಲ್ಲ. ಇದು ನಿರಾಶದಾಯಕ ಬಜೆಟ್ ಆಗಿದೆ. ಅಂತರ್ಜಲ ಹೆಚ್ಚಿಸುವ ಕಾರ್ಯಕ್ರಮಕ್ಕೆ ಆದ್ಯತೆ ನೀಡಿಲ್ಲ. ಪರಿಸರ ಉಳಿಸಲು ಅರಣ್ಯೀಕರಣಕ್ಕೆ ಒತ್ತು ನೀಡಿಲ್ಲ.
-ಎಚ್.ಎ. ಕಿಶೋರ್ ಕುಮಾರ್, ಪರಿಸರವಾದಿ ಜನರು ಬಜೆಟ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಎತ್ತಿನಹೊಳೆಗೆ 1,500 ಕೋಟಿ ಹಣ ಮೀಸಲಿಟ್ಟಿರುವುದು ಹಾಸನ ಜಿಲ್ಲೆಗೆ ಯಾವುದೇ ಪ್ರಯೋಜನವಿಲ್ಲ. ಹಾಸನ ವಿಮಾನ ನಿಲ್ದಾಣ ಸೇರಿದಂತೆ, ಈ ಹಿಂದೆ ಹಾಸನ ಜಿಲ್ಲೆಗೆ ಘೋಷಣೆಯಾಗಿದ್ದ ಯೋಜನೆಗಳಿಗೆ ಅನುದಾನದ ನಿರೀಕ್ಷೆ ಹುಸಿಯಾಗಿದೆ. ರಾಜ್ಯದ ದೃಷ್ಟಿಕೋನದಿಂದಲೂ ಬಜೆಟ್ ಆಶಾದಾಯಕವಾಗಿಲ್ಲ.
-ಚಂದ್ರಶೇಖರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳದ ಮಾಜಿ ಅಧ್ಯಕ್ಷ ಬಜೆಟ್ ಮಂಡಿಸಬೇಕು ಎಂಬ ಕಾರಣಕ್ಕೆ ಬಜೆಟ್ ಮಂಡಿಸಿದಂತಿದೆ. ರೈತರಿಗೆ ಯಾವುದೇ ಉಪಯೋಗವಿಲ್ಲ. ಮುಖ್ಯಮಂತ್ರಿಯಾದವರು ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳಲ್ಲಿ ಯಾವುದೇ ಪರಿಪೂರ್ಣತೆಯಿಲ್ಲ. ಕೃಷಿ ಆಯೋಗ ರಚನೆಯ ಪ್ರಸ್ತಾಪ ಮಾಡಿದ್ದಾರೆ. ಅದೊಂದು ಆಶಾದಾಯಕ. ಅದನ್ನು ಬಿಟ್ಟರೆ ಇದೊಂದು ಕಾಟಾಚಾರದ ಬಜೆಟ್.
-ಕೊಟ್ಟೂರು ಶ್ರೀನಿವಾಸ್, ರಾಜ್ಯ ರೈತ ಸಂಘದ ಹಾಸನ ಜಿಲ್ಲಾ ಅಧ್ಯಕ್ಷ