Advertisement

ರೋಹಿಣಿ ವರ್ಗ ಬೆಂಡಾದ ಸರ್ಕಾರ

06:00 AM Jan 24, 2018 | Team Udayavani |

ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರ ಸೇರಿದಂತೆ ಮೂವರು ಡೀಸಿಗಳ ವರ್ಗಾವಣೆಗೆ ರಾಜ್ಯ ಸರ್ಕಾರ ತಡೆ ನೀಡಿದೆ.ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರು ಮುಖ್ಯ ಕಾರ್ಯದರ್ಶಿ ರತ್ನಪ್ರಭ ಅವರಿಗೆ ಖಾರವಾದ ಪತ್ರ ಬರೆದ ಬೆನ್ನಲ್ಲೇ, ರಾಜ್ಯ ಸರ್ಕಾರ ವರ್ಗಾವಣೆಗೆ ತಡೆ ನೀಡಿದೆ. ಈ ಮೂಲಕ ರೋಹಣಿ ಸಿಂಧೂರ ಅವರ ವರ್ಗಾವಣೆ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವಿರೋಧ, ಬಿಜೆಪಿ ಪ್ರತಿಭಟನೆಗಳಿಗೆ ಸರ್ಕಾರ ಮಣಿದಂತಾಗಿದೆ.

Advertisement

ಮತ್ತೂಂದೆಡೆ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಸಮ್ಮತಿ ನೀಡುವಂತೆ ಕೋರಿ ಮುಖ್ಯ ಚುನಾವಣಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ ಪತ್ರ ಬರೆದಿದ್ದಾರೆ. ವಿಶೇಷ ಪ್ರಕರಣಗಳಲ್ಲಿ ವರ್ಗಾವಣೆ ಮಾಡಬೇಕಾದರೆ ಆಯೋಗದ ಸಮ್ಮತಿ ಪಡೆಯಬೇಕು ಎಂದು ಚುನಾವಣಾಧಿಕಾರಿಗಳು ಪತ್ರದಲ್ಲಿ ತಿಳಿಸಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಚುನಾವಣಾ ಆಯೋಗ ಆಕ್ಷೇಪಣೆ ವ್ಯಕ್ತಪಡಿಸಿದ ಮಾತ್ರಕ್ಕೆ ರಾಜ್ಯ ಸರ್ಕಾರ ವರ್ಗಾವಣೆ ಆದೇಶ ಹಿಂತೆಗೆದುಕೊಳ್ಳಬೇಕು ಅಥವಾ ತಡೆಹಿಡಿಯಬೇಕು ಅಂತಿಲ್ಲ. ಇನ್ನೂ ಚುನಾವಣಾ ಅಧಿಸೂಚನೆ ಹೊರಬಿದ್ದಿಲ್ಲ. ಆದರೂ ಆಯೋಗದೊಂದಿಗೆ ಸಂಘರ್ಷಕ್ಕೆ ಇಳಿಯುವುದು ಬೇಡ ಎಂಬ ಕಾರಣಕ್ಕೆ  ನಿಯಮಾವಳಿ ಪ್ರಕಾರವೇ ಪತ್ರ ಬರೆದು ವರ್ಗಾವಣೆಗೆ ಅನುಮತಿ ಕೋರಲಾಗಿದೆ.

ಆಯೋಗದ ಖಾರ ಪತ್ರ
ಮಂಗಳವಾರ ಬೆಳಗ್ಗೆಯಷ್ಟೇ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರು ಸಿಎಸ್‌ ಕೆ. ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿಗಳನ್ನು ವರ್ಗಾವಣೆಗೊಳಿಸಿ ಜ.22ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ತಡೆ ಹಿಡಿಯಬೇಕು. ಚುನಾವಣಾ ಆಯೋಗದ ಸಮ್ಮತಿಯ ನಂತರವಷ್ಟೇ ಆದೇಶ ಕಾರ್ಯಗತಗೊಳಿಸಬೇಕು. ಜೊತೆಗೆ ಚುನಾವಣಾ ಆಯೋಗದ ಅಧೀಕೃತ ನಿರ್ದೇಶನ ಬರುವವರೆಗೆ ವರ್ಗಾವಣೆಗೊಂಡ ಜಿಲ್ಲಾಧಿಕಾರಿಗಳು ಜಿಲ್ಲಾ ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ ಮತ್ತು ಅಧಿಕಾರ ಹಸ್ತಾಂತರಿಸದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದರು.

ಜತೆಗೆ ಇದು ಚುನಾವಣಾ ವರ್ಷವಾಗಿದ್ದು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ನೇರ ಜವಾಬ್ದಾರಿ ಹೊಂದಿರುವ ಜಿಲ್ಲಾಧಿಕಾರಿ ಸೇರಿದಂತೆ ಇತರ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ಕೇಂದ್ರ ಚುನಾವಣಾ ಆಯೋಗದ ಸ್ಪಷ್ಟ ನಿರ್ದೇಶನ ಇದ್ದರೂ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

Advertisement

ಚುನಾವಣಾ ಅಧಿಸೂಚನೆ ಮತ್ತು ವೇಳಾಪಟ್ಟಿ ಪ್ರಕಟಗೊಂಡ ತಕ್ಷಣದಿಂದ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಅದು ಅಧಿಕಾರಿಗಳ ವರ್ಗಾವಣೆಗೂ ಅನ್ವಯವಾಗುತ್ತದೆ. ಈಗ ನೀತಿ ಸಂಹಿತೆ ಜಾರಿಯಲ್ಲಿ ಇಲ್ಲದಿರಬಹುದು. ಆದರೆ, ಚುನಾವಣಾ ವರ್ಷದಲ್ಲಿ ನಡೆಯುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ನೇರ ಜವಾಬ್ದಾರಿ ಹೊಂದಿರುವ ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ, ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳನ್ನು ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವ ಮೊದಲು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡುವಂತಿಲ್ಲ.

ಆಯೋಗಕ್ಕೆ ಗಮನಕ್ಕೆ ತರಲೇಬೇಕು
ಒಂದೊಮ್ಮೆ ವಿಶೇಷ ಕಾರಣಗಳಿದ್ದರೆ, ಚುನಾವಣಾ ಆಯೋಗದ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು 2018ರ ಜ.17ರಂದು ಕೇಂದ್ರ ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆಯ 7 (11)ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಆಯೋಗ ನಡೆಸಿದ ಸಭೆಯಲ್ಲಿ ತಿಳಿಸಲಾಗಿದೆ. ಮುಖ್ಯ ಕಾರ್ಯದರ್ಶಿಯವರ ಗಮನಕ್ಕೂ ಈ ವಿಷಯ ತರಲಾಗಿದೆ.

ಫೆ.22ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ. ಅಲ್ಲಿಯವರೆಗೆ ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ನೀತಿ ಸಂಹಿತೆ ಅನ್ವಯವಾಗುತ್ತದೆ. ಆದಾಗ್ಯೂ ವರ್ಗಾವಣೆ ನಡೆದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದರು.

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ರಾಮನಗರ ಜಿಲ್ಲಾಧಿಕಾರಿ ಡಾ. ಬಿ.ಆರ್‌. ಮಮತಾ, ಹಾವೇರಿ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್‌ ಸೇರಿದಂತೆ ಏಳು ಮಂದಿ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸೋಮವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಮಧ್ಯೆ ರಾಜಕೀಯ ಒತ್ತಡದ ಕಾರಣಕ್ಕೆ ರೋಹಿಣಿ ಸಿಂಧೂರಿಯವರನ್ನು ಎತ್ತಂಗಡಿ ಮಾಡಲಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಸರ್ಕಾರದ ವಿರುದ್ಧ ಆರೋಪ ಮಾಡಿವೆ.

ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತದಾರಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿರುವ ಈ ಹಂತದಲ್ಲಿ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡುವಂತಿಲ್ಲ. ಆದರೂ ಸರ್ಕಾರ ವರ್ಗಾವಣೆ ಮಾಡಿದೆ, ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
– ಸಂಜೀವ್‌ ಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ.

ರಾಷ್ಟ್ರಪತಿ ಮತ್ತು ಪ್ರಧಾನಿಗೂ ಪತ್ರ ಬರೆಯುತ್ತೇನೆ. ಇನ್ನು ಮುಂದೆ ಹಾಸನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಳ್ಳುವುದಿಲ್ಲ. ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೂ ಹೋಗಲ್ಲ.
– ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next