Advertisement

ಹಾಸನ: ದೇವರ ಮೊರೆ ಹೋದ ಭವಾನಿ ರೇವಣ್ಣ

11:29 PM Jan 27, 2023 | Team Udayavani |

ಹಾಸನ: ಭವಾನಿ ರೇವಣ್ಣ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಅನಿವಾರ್ಯವಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದರೂ ಭವಾನಿ ಟಿಕೆಟ್‌ ಪಡೆಯುವ ಪ್ರಯತ್ನ ಬಿಟ್ಟಿಲ್ಲ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಮತದಾರರನ್ನು ಭೇಟಿ ಮಾಡುವ ಮೂಲಕ ಚುನಾವಣ ಸಿದ್ಧತೆ ಮುಂದುವರಿಸಿದ್ದಾರೆ.

Advertisement

ಹಾಸನದ ಹೊರ ವಲಯದ ಬುಸ್ತೇನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರವಾಗಿರುವ ಶ್ರೀ ಮಾಸ್ತಿಯಮ್ಮ ದೇವಾಲಯದ ಉದ್ಘಾಟನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಚನ್ನಮ್ಮ ದೇವೇಗೌಡ, ಎಚ್‌.ಡಿ.ರೇವಣ್ಣ, ಎಚ್‌.ಡಿ.ಕುಮಾರಸ್ವಾಮಿ, ಸೂರಜ್‌ ರೇವಣ್ಣ, ಪ್ರಜ್ವಲ್‌ ರೇವಣ್ಣ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.

ಮುಂದಿನ ಶಾಸಕಿ ಘೋಷಣೆ
ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಅನಂತರ ಭಕ್ತರಿಗೆ ಪ್ರಸಾದ ಹಂಚಲು ಮುಂದಾಗುತ್ತಿದ್ದ ಸಂದರ್ಭದಲ್ಲಿ “ಮುಂದಿನ ಶಾಸಕಿ ಭವಾನಿ ರೇವಣ್ಣ ಅವರಿಂದ ಪ್ರಸಾದ ಸ್ವೀಕರಿಸಿ’ ಎಂದು ಅಭಿಮಾನಿಗಳು ಧ್ವನಿವರ್ಧಕದಲ್ಲಿ ಕೂಗಿದರು. ಅದಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಭವಾನಿ ರೇವಣ್ಣ ಭಕ್ತರಿಗೆ ಪ್ರಸಾದ ವಿತರಿಸಿ ಮತದಾರರತ್ತ ಸಾಗಿ ನಗುತ್ತಲೇ ಮಾತನಾಡಿದರು.

ಪ್ರತಿಕ್ರಿಯೆಗೆ ಪ್ರಜ್ವಲ್‌ ನಕಾರ
ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ಬಳಿಕ ಭವಾನಿಯವರ ಸ್ಪರ್ಧೆಯ ಬಗ್ಗೆ ಎಚ್‌.ಡಿ.ರೇವಣ್ಣ ಕುಟುಂಬದವರು ಮೌನಕ್ಕೆ ಶರಣಾಗಿದ್ದಾರೆ. ಸಂಸದ ಪ್ರಜ್ವಲ್‌ ರೇವಣ್ಣ ಅವರು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ರೇವಣ್ಣ ಅವರು ಜತೆಗೆ ಗುರುವಾರ ಶೃಂಗೇರಿಗೆ ಭೇಟಿ ನೀಡಿ ಶ್ರೀ ಶಾರದಾಂಬೆಯ ದರ್ಶನ ಪಡೆದರು.

ಎಚ್‌ಡಿಡಿ ನಿರ್ಧಾರ
ಹಾಸನ ಕ್ಷೇತ್ರದ ಟಿಕೆಟ್‌ಗಾಗಿ ಭವಾನಿ ರೇವಣ್ಣ ಮತ್ತು ಎಚ್‌.ಪಿ. ಸ್ವರೂಪ್‌ ನಡುವಿನ ಪೈಪೋಟಿ ಯನ್ನು ಗಮನಿಸಿರುವ ದೇವೇಗೌಡರು, ಸಮಸ್ಯೆಯನ್ನು ನಾನೇ ಬಗೆಹರಿಸುತ್ತೇನೆ. ಗೊಂದಲ ಸೃಷ್ಟಿಸಬೇಡಿ, ಸುಮ್ಮನಿರಿ ಎಂದು ತಮ್ಮ ಕುಟುಂಬದವರಿಗೆ ತಾಕೀತು ಮಾಡಿದ್ದಾರೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

Advertisement

ಭವಾನಿ ರೇವಣ್ಣಗೆ ಬಿಜೆಪಿಗೆ ಬಂದರೆ ಸ್ವಾಗತ : ರವಿ
ಚಿಕ್ಕಮಗಳೂರು: ಭವಾನಿ ಅಕ್ಕನ ಹೇಳಿಕೆಯನ್ನು ಗಮನಿಸಿದ್ದೇನೆ. ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಯನ್ನೂ ಗಮನಿಸಿದ್ದೇನೆ. ಭವಾನಿ ಅಕ್ಕ ನಮ್ಮ ಪಕ್ಷದಿಂದ ಅಭ್ಯರ್ಥಿಯಾಗಬೇಕೆಂದು ಅನಿಸಿತ್ತು. ಆದರೆ ರೇವಣ್ಣ ಮತ್ತು ಭವಾನಿ ಅಕ್ಕನ ನಡುವೆ ಜಗಳ ಹಚ್ಚುವ ಕೆಲಸ ಮಾಡಲು ನನಗೆ ಇಷ್ಟವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪರೋಕ್ಷವಾಗಿ ಭವಾನಿ ರೇವಣ್ಣ ಅವರಿಗೆ ಬಿಜೆಪಿ ಟಿಕೆಟ್‌ ಆಫರ್‌ ನೀಡಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಇಬ್ಬರ ಹೇಳಿಕೆಯನ್ನೂ ಗಮನಿಸಿದ್ದು, ನಾನು ಮನೆಯಲ್ಲಿ ಗಲಾಟೆ ಹೆಚ್ಚಿಸೋಕೆ ಬಯಸುವುದಿಲ್ಲ. ಭವಾನಿ ಅಕ್ಕ ಹೊಳೆನರಸೀಪುರಕ್ಕೆ ನಮ್ಮ ಪಕ್ಷದ ಅಭ್ಯರ್ಥಿಯಾಗಲಿ. ಭವಾನಿಗಿಂತ ಉತ್ತಮ ಅಭ್ಯರ್ಥಿ ಹೊಳೆನರಸೀಪುರಕ್ಕೆ ಬೇರೊಬ್ಬರಿಲ್ಲ ಎನ್ನುವ ಮೂಲಕ ಬಿಜೆಪಿಗೆ ಆಹ್ವಾನಿಸಿದರು. ಪಕ್ಷದ ನೀತಿ ಒಪ್ಪಿಕೊಂಡು ಯಾರ್ಯಾರು ಬರುತ್ತಾರೆ ಬರಬಹುದು. ಸುಮಲತಾ ಅವರು ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಪಕ್ಷೇತರ ಅಭ್ಯರ್ಥಿಯಾಗಿ ಘಟಾನುಘಟಿಗಳ ಎದುರು ಗೆದ್ದು ಬಂದವರು. ಅವರ ಪಕ್ಷ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬರುತ್ತದೆ. ಯಾವಾಗ ಸೇರ್ಪಡೆಗೊಳ್ಳುತ್ತಾರೆಂಬ ಮಾಹಿತಿ ಇಲ್ಲ ಎಂದರು.

ಭವಾನಿ ರೇವಣ್ಣ ಅವರನ್ನು ಸಿ.ಟಿ. ರವಿ ಹೊಳೆನರಸೀಪುರಕ್ಕೆ ಆಹ್ವಾನಿಸಿದ್ದಾರೆ. ಬಿಜೆಪಿಯವರಿಗೆ ಮನೆ ಒಡೆದು ಅಭ್ಯಾಸ. ಆದರೆ ದೇವೇಗೌಡರ ಕುಟುಂಬವನ್ನು ಒಡೆಯಲು ಅವರಿಗೆ ಸಾಧ್ಯವಾಗದು.
-ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next