Advertisement
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್‌ಗಾಗಿ ಭವಾನಿ ರೇವಣ್ಣ ಮತ್ತು ಎಚ್.ಪಿ.ಸ್ವರೂಪ್ ನಡುವೆ ನಡೆಯುತ್ತಿರುವ ಪೈಪೋಟಿ ಈಗ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ರಾಮ- ಲಕ್ಷ್ಮಣರಂತಿದ್ದ ಎಚ್.ಡಿ.ರೇವಣ್ಣ – ಎಚ್.ಡಿ.ಕುಮಾರಸ್ವಾಮಿ ಅವರ ಸಹೋದರ ಸಂಬಂಧಕ್ಕೆ ಧಕ್ಕೆ ತರುವ ಮಟ್ಟಕ್ಕೆ ಈ ಬಾರಿ ಟಿಕೆಟ್ ಪೈಪೋಟಿ ನಿರ್ಮಾಣವಾಗಿದೆ.
Related Articles
Advertisement
ಭವಾನಿ ರೇವಣ್ಣ ಅವರು ಹಾಸನ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಎಂಬ ಸುಳಿವು ಪಡೆದ ಅನಂತರ ಎಚ್.ಡಿ. ಕುಮಾರಸ್ವಾಮಿ ಅವರು ಸ್ವರೂಪ್ ಅವರಿಗೆ ಚುನಾವಣೆಗೆ ಸಜ್ಜಾಗುವ ಪರೋಕ್ಷ ಸೂಚನೆ ನೀಡಿದ್ದರೆಂದು ಸ್ವರೂಪ್ ಅವರೂ ತಮ್ಮ ಬೆಂಬಲಿಗರ ತಂಡ ಕಟ್ಟಿಕೊಂಡು ಕ್ಷೇತ್ರ ಸಂಚಾರ ಮಾಡತೊಡಗಿದರು. ಆಗಿನಿಂದಲೇ ರೇವಣ್ಣ ಮತ್ತು ಕುಟುಂಬದವರು ಸ್ವರೂಪ್ ಅವರನ್ನು ದೂರವಿರಿಸುತ್ತಾ ಬಂದರು.
6 ತಿಂಗಳ ಹಿಂದೆ ಹಾಸನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸ್ವರೂಪ್ ಬೆಂಬಲಿಗರು ಸೃಷ್ಟಿಸಿದ ರಂಪಾಟ, ರೇವಣ್ಣ, ಭವಾನಿ ಅವರಿದ್ದ ಫ್ಲೆಕ್ಸ್ ಹರಿದು ಘೋಷಣೆ ಕೂಗಿದ್ದನ್ನು ಕಂಡು ರೇವಣ್ಣ ಅವರು ಕೆರಳಿ ಕೆಂಡವಾಗಿದ್ದರು. ಅನಂತರ ಎಚ್. ಪ್ರಕಾಶ್ ಅವರ ಹುಟ್ಟುಹಬ್ಬದ ನೆಪದಲ್ಲಿ ನಡೆದ ಬೃಹತ್ ಸಭೆಗೆ ರೇವಣ್ಣ ಮತ್ತು ಕುಟುಂಬದವರು ಗೈರುಹಾಜರಾದರೂ ಎಚ್.ಡಿ.ಕುಮಾರಸ್ವಾಮಿ ಅವರು ಸಿ.ಎಂ.ಇಬ್ರಾಹಿಂ ಅವರೊಂದಿಗೆ ಬಂದು ಸ್ವರೂಪ್ ಅವರೇ ಮುಂದಿನ ಅಭ್ಯರ್ಥಿ ಎಂಬ ಸುಳಿವು ನೀಡಿ ಹೋದರು. ಆಂದಿನಿಂದ ಸ್ವರೂಪ್ ನಮ್ಮ ಹಿಡಿತಕ್ಕೆ ಸಿಗುವುದಿಲ್ಲ ಎಂದರಿತ ರೇವಣ್ಣ ಮತ್ತು ಕುಟುಂಬದವರು ಈಗಾಗಲೇ ಆ ಕುಟುಂಬಕ್ಕೆ 4 ಬಾರಿ ಶಾಸಕ ಸ್ಥಾನ, ಹಾಸನ ನಗರಸಭೆ ಅಧ್ಯಕ್ಷ ಸ್ಥಾನ, ಜಿ.ಪಂ. ಉಪಾಧ್ಯಕ್ಷ ಸ್ಥಾನ ಕೊಟ್ಟಾಗಿದೆ. ಇನ್ನು ಸ್ವರೂಪ್ ಮತ್ತು ಕುಟುಂಬಕ್ಕೆ ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ ಎಂಬ ಹಂತಕ್ಕೆ ಬಂದಿದ್ದಾರೆ. ಹಾಗಾಗಿ ಕಳೆದ ಮೂರು ತಿಂಗಳುಗಳಿಂದ ಸ್ವರೂಪ್ ಮತ್ತು ರೇವಣ್ಣ ಕುಟುಂಬದ ನಡುವೆ ಸಂಪರ್ಕವೇ ಕಡಿದು ಹೋಗಿದೆ.
ದೇವೇಗೌಡರ ಕುಟುಂಬದಲ್ಲಿನ ಆಂತರಿಕ ಬೆಳವಣಿಗೆಗಳ ಪರಿಣಾಮ ಎಚ್.ಡಿ.ಕುಮಾರಸ್ವಾಮಿ ಅವರು ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಲು ಸಿದ್ಧರಿಲ್ಲ. ಎಚ್.ಡಿ.ರೇವಣ್ಣ ಮತ್ತು ಕುಟುಂಬದವರೂ ಎಚ್.ಪಿ.ಸ್ವರೂಪ್ ಅವರಿಗೆ ಟಿಕೆಟ್ ನೀಡುವುದನ್ನು ಸಹಿಸಿಕೊಳ್ಳುವ ಸ್ಥಿತಿಯಿಲ್ಲ. ಸ್ವರೂಪ್ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ಕೊಟ್ಟರೂ ಸ್ವರೂಪ್‌ಗೆ ಟಿಕೆಟ್ ಕೊಡುವ ಅಥವಾ ಅವರ ಪರ ನಿಲ್ಲುವ ಪರಿಸ್ಥಿತಿಯಲ್ಲಿ ರೇವಣ್ಣ ಕುಟುಂಬದವರಿಲ್ಲ. ಇದೀಗ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಷಯ ದೇವೇಗೌಡರ ಕುಟುಂಬದಲ್ಲಿಯೇ ಒಡಕು ಮೂಡಿಸುವ ಹಂತಕ್ಕೆ ಹೋಗಿದೆ. ಇದೀಗ ದೇವೇಗೌಡರೇ ಮಧ್ಯ ಪ್ರವೇಶಿಸಿ ಎಚ್‌ಡಿಕೆ ಮತ್ತು ರೇವಣ್ಣನವರನ್ನು ಸಮಾಧಾನಪಡಿಸುವ ಅಥವಾ ಭವಾನಿ ಮತ್ತು ಸ್ವರೂಪ್ ಹೊರತಾದ ಅಭ್ಯರ್ಥಿ ಆಯ್ಕೆ ಮಾಡಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸುವ ಸೂತ್ರ ಹುಡುಕುವ ಅನಿವಾರ್ಯತೆ ಎದುರಾಗಿದೆ.
-ಎನ್.ನಂಜುಂಡೇಗೌಡ