Advertisement

ನೋಲಾಸ್‌ ವಿಕ್ಟರಿ; ದ. ಆಫ್ರಿಕಾ ದಾಖಲೆ

07:00 AM Oct 17, 2017 | Team Udayavani |

ಕಿಂಬರ್ಲಿ: ಬಾಂಗ್ಲಾದೇಶ ವಿರುದ್ಧ ರವಿವಾರ ಕಿಂಬರ್ಲಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ನೂತನ ಚೇಸಿಂಗ್‌ ದಾಖಲೆ ಸ್ಥಾಪಿಸಿತು. ಬಾಂಗ್ಲಾ ನೀಡಿದ 279 ರನ್‌ ಗುರಿಯನ್ನು ವಿಕೆಟ್‌ ನಷ್ಟವಿಲ್ಲದೆ ತಲಪುವ ಮೂಲಕ ಈ ದಾಖಲೆ ಬರೆಯಿತು. ಇದು ಏಕದಿನ ಇತಿಹಾಸದಲ್ಲಿ ತಂಡವೊಂದರ ಅತ್ಯಧಿಕ ಮೊತ್ತದ ನೋಲಾಸ್‌ ವಿಕ್ಟರಿ ಆಗಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ 7 ವಿಕೆಟಿಗೆ 278 ರನ್‌ ಪೇರಿಸಿದರೆ, ದಕ್ಷಿಣ ಆಫ್ರಿಕಾ 42.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 282 ರನ್‌ ಪೇರಿಸಿ ಜಯಭೇರಿ ಮೊಳಗಿಸಿತು. ಕ್ವಿಂಟನ್‌ ಡಿ ಕಾಕ್‌ 168 ರನ್‌ ಹಾಗೂ ಹಾಶಿಮ್‌ ಆಮ್ಲ 110 ರನ್‌ ಹೊಡೆದು ಅಜೇಯರಾಗಿ ಉಳಿದರು. ಕಳೆದ ವರ್ಷ ಶ್ರೀಲಂಕಾ ವಿರುದ್ಧ ಬರ್ಮಿಂಗಂನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ 255 ರನ್‌ ಗುರಿಯನ್ನು ವಿಕೆಟ್‌ ಕಳೆದುಕೊಳ್ಳದೇ ತಲುಪಿದ ದಾಖಲೆ ಪತನಗೊಂಡಿತು.

ದಕ್ಷಿಣ ಆಫ್ರಿಕಾದ ಹಿಂದಿನ ನೋಲಾಸ್‌ ಗೆಲುವಿನ ದಾಖಲೆ ಭಾರತದೆದುರಿನ 2005ರ ಕೋಲ್ಕತಾ ಪಂದ್ಯದಲ್ಲಿ ಮೂಡಿಬಂಡಿತ್ತು. ಅಂದಿನ ಟಾರ್ಗೆಟ್‌ ಕೇವಲ 189 ರನ್‌.ದಕ್ಷಿಣ ಆಫ್ರಿಕಾದ ಆರಂಭಿಕರಿಬ್ಬರೂ ಒಂದೇ ಪಂದ್ಯದಲ್ಲಿ ಶತಕ ಹೊಡೆದ 6ನೇ ನಿದರ್ಶನ ಇದಾಗಿದೆ. ಆಮ್ಲ-ಡಿ ಕಾಕ್‌ ಇದೇ ವರ್ಷ ಶ್ರೀಲಂಕಾ ವಿರುದ್ಧ ಸೆಂಚುರಿಯನ್‌ನಲ್ಲೂ ಈ ಸಾಧನೆ ಮಾಡಿದ್ದರು.

3ನೇ ದೊಡ್ಡ ಜತೆಯಾಟ
ಡಿ ಕಾಕ್‌-ಆಮ್ಲ 282 ರನ್‌ ಪೇರಿಸಿದ್ದು ಮೊದಲ ವಿಕೆಟಿನ 3ನೇ ಅತೀ ದೊಡ್ಡ ಜತೆಯಾಟವಾಗಿದೆ. ಇಂಗ್ಲೆಂಡ್‌ ಎದುರಿನ 2006ರ ಹೇಡಿಂಗ್ಲೆ ಪಂದ್ಯದಲ್ಲಿ ಶ್ರೀಲಂಕಾದ ಸನತ್‌ ಜಯಸೂರ್ಯ-ಉಪುಲ್‌ ತರಂಗ 286 ರನ್‌ ಒಟ್ಟುಗೂಡಿಸಿದ್ದು ದಾಖಲೆ. ಇದೇ ವರ್ಷ ಪಾಕಿಸ್ಥಾನದೆದುರಿನ ಅಡಿಲೇಡ್‌ ಮುಖಾಮುಖೀಯಲ್ಲಿ ಆಸ್ಟ್ರೇಲಿಯದ ಡೇವಿಡ್‌ ವಾರ್ನರ್‌-ಟ್ರ್ಯಾವಿಸ್‌ ಹೆಡ್‌ 284 ರನ್‌ ಬಾರಿಸಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

ಕೊಹ್ಲಿ ದಾಖಲೆ ಪತನ
ಈ ಇನ್ನಿಂಗ್ಸ್‌ ವೇಳೆ ಹಾಶಿಮ್‌ ಆಮ್ಲ ಭಾರತದ ವಿರಾಟ್‌ ಕೊಹ್ಲಿ ಅವರ ಮತ್ತೂಂದು ದಾಖಲೆಯನ್ನು ಮುರಿದರು. ಅತೀ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 26 ಶತಕ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು (154 ಇನ್ನಿಂಗ್ಸ್‌). ಕೊಹ್ಲಿ ಇದಕ್ಕಾಗಿ 166 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು. ಇದಕ್ಕೂ ಮುನ್ನ ಕೊಹ್ಲಿ ಅವರ ಅತೀ ವೇಗದ 7 ಸಾವಿರ ರನ್‌ ಗಳಿಕೆಯ ದಾಖಲೆಯನ್ನೂ ಆಮ್ಲ ಮುರಿದಿದ್ದರು.

Advertisement

10 ವಿಕೆಟ್‌ ಸೋಲು
ಬಾಂಗ್ಲಾದೇಶ ಏಕದಿನ ಚರಿತ್ರೆಯಲ್ಲಿ ಅತೀ ಹೆಚ್ಚು 10 ವಿಕೆಟ್‌ ಅಂತರದ ಸೋಲನುಭವಿಸಿದ ತನ್ನ “ದಾಖಲೆ’ಯನ್ನು 11ಕ್ಕೆ ವಿಸ್ತರಿಸಿತು. ಜಿಂಬಾಬ್ವೆ ದ್ವಿತೀಯ ಸ್ಥಾನದಲ್ಲಿದೆ (7).

ಆಲ್‌ರೌಂಡ್‌ ಸಾಧನೆ
ಬಾಂಗ್ಲಾದೇಶದ ಶಕಿಬ್‌ ಅಲ್‌ ಹಸನ್‌ 5 ಸಾವಿರ ರನ್‌ ಮತ್ತು 200 ರನ್‌ ಪೂರೈಸಿದ ವಿಶ್ವದ 6ನೇ ಆಲ್‌ರೌಂಡರ್‌ ಎನಿಸಿದರು. ಉಳಿದವರೆಂದರೆ ಸನತ್‌ ಜಯಸೂರ್ಯ, ಶಾಹಿದ್‌ ಅಫ್ರಿದಿ, ಜಾಕ್‌ ಕ್ಯಾಲಿಸ್‌ ಮತ್ತು ಅಬ್ದುಲ್‌ ರಜಾಕ್‌.

Advertisement

Udayavani is now on Telegram. Click here to join our channel and stay updated with the latest news.

Next