Advertisement

ಲಾಕ್‌ಡೌನ್‌ ಮಾಡದ ಸ್ವೀಡನ್‌ –ದೊಡ್ಡಣ್ಣನಿಗೆ ಸಡ್ಡು

02:37 PM Apr 11, 2020 | sudhir |

ಸ್ವೀಡನ್‌ : ಕೋವಿಡ್‌ 19 ಹರಡುವ ಭೀತಿಯಿಂದ ಬಹುತೇಕ ದೇಶಗಳು ಲಾಕ್‌ಡೌನ್‌ನಂಥ ಕಠಿನ ಕ್ರಮಗಳನ್ನು ಅನುಷ್ಠಾನಿಸಿದ್ದರೂ ಸ್ವೀಡನ್‌ ಮಾತ್ರ ಇಂಥ ಯಾವುದೇ ಕ್ರಮದ ಗೋಜಿಗೆ ಹೋಗಿಲ್ಲ.

Advertisement

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇರವಾಗಿಯೇ ಸ್ವೀಡನ್‌ ಜಗತ್ತನ್ನು ಆಪತ್ತಿಗೆ ದೂಡುತ್ತಿದೆ ಎಂದು ಎಚ್ಚರಿಸಿದ್ದರೂ ಈ ಪುಟ್ಟ ದೇಶ ಮಾತ್ರ ಕ್ಯಾರೇ ಎಂದಿಲ್ಲ.

ಸ್ವೀಡನ್‌ನಲ್ಲಿ ಈಗಲೂ ಹೊಟೇಲ್‌ಗಳು, ಬಾರ್‌ಗಳು, ಪಬ್‌ಗಳು ತೆರೆದಿವೆ. ಅಂತೆಯೇ ಶಾಲಾ-ಕಾಲೇಜುಗಳು, ಚರ್ಚ್‌ಗಳು ತೆರೆದಿವೆ. ಜನರು ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದಾರೆ. ಹಾಗೆಂದು ಸ್ವೀಡನ್‌ ಕೋವಿಡ್‌ ಹಾವಳಿಯಿಂದ ಮುಕ್ತವಾಗಿಲ್ಲ ಎಂದಲ್ಲ. ಆದರೆ ಈ ದೇಶ ವೈರಾಣುವಿನ ಹಾವಳಿಯನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಯೇ ಇಲ್ಲ.

ಈ ವರ್ತನೆಯನ್ನು ಕಟುವಾಗಿ ಟೀಕಿಸಿರುವ ಟ್ರಂಪ್‌, ಸ್ವೀಡನ್‌ “ಕುರಿಮಂದೆಯ ಗುಣ’ವನ್ನು ತೋರಿಸುತ್ತದೆ ಎಂದು ಹೀಯಾಳಿಸಿದ್ದಾರೆ. ಕೋವಿಡ್‌ಗೆ ಲಸಿಕೆ ಪತ್ತೆಯಾಗುವ ತನಕ ಯಾವ ದೇಶವೂ ಸಂಪೂರ್ಣವಾಗಿ ಲಾಕ್‌ಡೌನ್‌ ತೆರವುಗೊಳಿಸುವಂತಿಲ್ಲ. ಅದಾಗ್ಯೂ ಸ್ವೀಡನ್‌ನ ಬೇಜವಾಬ್ದಾರಿ ವರ್ತನೆ ಆತಂಕವನ್ನುಂಟು ಮಾಡುತ್ತಿದೆ ಎಂದು ಎಚ್ಚರಿಸಿದ್ದಾರೆ.

ಜನರ ಮೇಲೆ ನಂಬಿಕೆ ಸ್ವೀಡನ್‌ ಸರಕಾರ ತನ್ನ ಜನರೇ ಸ್ವಯಂ ಸಾಮಾಜಿಕ ಅಂತರ ಪಾಲಿಸಿ ಕೋವಿಡ್‌ ಹರಡುವುದನ್ನು ತಡೆಯುತ್ತಾರೆ ಎಂದು ಪ್ರತಿಪಾದಿಸುತ್ತಿದೆ. ನಮ್ಮದು ಬಲವಂತದ ಅಥವಾ ಕಾನೂನಿನ ಕ್ರಮವಲ್ಲ. ಜನರೇ ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ ಎಂಬ ಕಾರಣಕ್ಕೆ ನಾವು ಲಾಕ್‌ಡೌನ್‌ ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಾರೆ ಸ್ವೀಡನ್‌ನ ವಿದೇಶಾಂಗ ಸಚಿವೆ ಆ್ಯನ್‌ ಲಿಂಡೆ.

Advertisement

ತೀರಾ ಅಪಾಯದ ಸ್ಥಿತಿಯಲ್ಲಿರುವವರನ್ನು ಸರಕಾರ ರಕ್ಷಿಸುತ್ತದೆ. ಜನರಲ್ಲಿ ವೈರಾಣುವಿಗೆ ಪ್ರತಿರೋಧ ತನ್ನಿಂದ
ತಾನೇ ಬೆಳೆಯುತ್ತದೆ ಎಂಬ ವಿಚಿತ್ರ ತರ್ಕವನ್ನು ಸ್ವೀಡನ್‌ ಮುಂದಿಟ್ಟಿದೆ.

ದುರಂತವೆಂದರೆ ಸ್ವೀಡನ್‌ನ ವೈದ್ಯ ಸಮುದಾಯವೂ ಸರಕಾರದ ಈ ನೀತಿಯನ್ನು ಬೆಂಬಲಿಸುತ್ತಿದೆ. ವೈರಾಣು ತಜ್ಞ ಆ್ಯಂಡರ್ ಟೆಗ್ನೆಲ್‌ ಅವರೂ ಸರಕಾರದ ಕ್ರಮವನ್ನು ಸಮರ್ಥಿಸಿ, ಈಗ ಕೈಗೊಂಡಿರುವ ಕ್ರಮಗಳು ಗುಣಮಟ್ಟದ ಫ‌ಲಿತಾಂಶಗಳನ್ನು ನೀಡುತ್ತಿವೆ.

ಸ್ವೀಡಿಶ್‌ ಆರೋಗ್ಯ ವಲಯ ಈ ಪಿಡುಗನ್ನು ಪರಿಣಾಮಕಾರಿಯಾಗಿ ಎದುರಿಸುತ್ತಿದೆ ಎಂದಿದ್ದಾರೆ.
ಯುರೋಪ್‌ನ ಉಳಿದೆಲ್ಲ ದೇಶಗಳು ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಗೊಳಿಸಿದ್ದರೆ ಸ್ವೀಡನ್‌ ಸರಕಾರ ಮಾತ್ರ ಜನರಿಗೆ ಸಾಕಷ್ಟು ಸ್ವಾತಂತ್ರ್ಯವನ್ನು ನೀಡಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ.

ಮಾರ್ಚ್‌ 14ರಂದು ಸ್ಪೇನ್‌ ಲಾಕ್‌ಡೌನ್‌ ಜಾರಿಗೊಳಿಸಿದರೆ ಸ್ವೀಡನ್‌ನಲ್ಲಿ ಕೈತೊಳೆಯುವುದನ್ನು ಉತ್ತೇಜಿಸುವ ಘೋಷಣೆಗಳು ಹೊರಬಿತ್ತು. ಮಾರ್ಚ್‌ 24ರಂದು ಹೊಟೇಲುಗಳಲ್ಲಿ ಗುಂಪುಗೂಡಬಾರದು ಎಂದು ಹೇಳಿದರೂ ಜನರು ಅದನ್ನು ಕಿವಿಗೆ ಹಾಕಿ ಕೊಳ್ಳಲಿಲ್ಲ. ಶಾಲೆಗಳಲ್ಲಿ 50 ಮಂದಿ ಸೇರಲು ಈಗಲೂ ಅವಕಾಶವಿದೆ ಎಂದು ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next