Advertisement
ಏನಿದು ಭಯೋತ್ಪಾದನ ನಿಗ್ರಹ ದಿನ?
Advertisement
ಪ್ರತಿಜ್ಞಾ ವಿಧಿ ಸ್ವೀಕಾರ
ಪ್ರತೀ ವರ್ಷವೂ ಎಲ್ಲ ಸರಕಾರಿ ಕಚೇರಿಗಳಲ್ಲಿ ಈ ಭಯೋತ್ಪಾದನ ನಿಗ್ರಹ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಅಲ್ಲದೆ ಈ ದಿನ ಎಲ್ಲರೂ ಒಂದು ಪ್ರತಿಜ್ಞೆಯನ್ನು ಸ್ವೀಕಾರ ಮಾಡುತ್ತಾರೆ. ಅದೆಂದರೆ “”ಭಾರತೀಯರಾದ ನಾವು, ನಮ್ಮ ದೇಶದ ಸಂಪ್ರದಾಯ ಮತ್ತು ನಂಬಿಕೆಯಾದ ಅಹಿಂಸೆ ಮತ್ತು ಸಹಿಷ್ಣುವನ್ನು ಆಚರಿಸಿಕೊಂಡು, ನಮ್ಮ ಸಾಮರ್ಥ್ಯದ ಆಧಾರದಲ್ಲಿ ಎಲ್ಲಾ ಪ್ರಕಾರದ ಭಯೋತ್ಪಾದನೆ ಮತ್ತು ಹಿಂಸೆಯನ್ನು ವಿರೋಧಿಸುತ್ತೇವೆ. ನಾವು ಶಾಂತಿ, ಸಾಮಾಜಿಕ ಸಹಭಾಗಿತ್ವ ಮತ್ತು ಮಾನವ ಜೀವ ಮತ್ತು ಮೌಲ್ಯಗಳಿಗೆ ಅಪಾಯ ತರಬಹುದಾದ ಎಂಥದ್ದೇ ಶಕ್ತಿಗಳನ್ನು ವಿರೋಧಿಸುತ್ತೇವೆ” ಎಂದು ಪ್ರತಿಜ್ಞೆ ಮಾಡುತ್ತೇವೆ.
ಪೆರಾರಿವೇಲನ್ ಬಿಡುಗಡೆ: ಕೈ ಆಕ್ರೋಶ
ಇತ್ತೀಚೆಗಷ್ಟೇ ರಾಜೀವ್ ಹಂತಕರಲ್ಲಿ ಒಬ್ಬನಾದ ಎ.ಜಿ.ಪೆರಾರಿವೇಲನ್ ಎಂಬವನನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ. 1991ರಲ್ಲಿ ನಡೆದ ಆತ್ಮಹತ್ಯಾ ಬಾಂಬ್ ಪಡೆಯಲ್ಲಿ ಈತ ಸದಸ್ಯನಾಗಿದ್ದ ಎಂಬ ಆರೋಪದ ಮೇಲೆ ಈತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈತನ ಒಬ್ಬನ ಮೇಲಷ್ಟೇ ಅಲ್ಲ, ಒಟ್ಟು 7 ಮಂದಿ ವಿರುದ್ಧ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ಮರಣದಂಡನೆ ಶಿಕ್ಷೆ ಜಾರಿ ಮಾಡುವಲ್ಲಿ ಸರಕಾರಗಳು ತಡ ಮಾಡಿದ್ದರಿಂದ ಇವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು. ಇದಾದ ಮೇಲೆ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಿಸಲು ಹಲವಾರು ಪ್ರಯತ್ನಗಳೂ ಆಗಿದ್ದವು. ರಾಜೀವ್ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ಅವರೂ ಹಂತಕರಿಗೆ ಕ್ಷಮೆ ನೀಡುವಂಥ ಮಾತನಾಡಿದ್ದರು. ವಿಚಿತ್ರವೆಂದರೆ ತಮಿಳುನಾಡಿನ ರಾಜಕೀಯವೂ ಈ ರಾಜೀವ್ ಹಂತಕರ ಸುತ್ತ ಸುತ್ತಿಕೊಂಡಿದೆ. ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ತನ್ನ ಪ್ರಣಾಳಿಕೆಯಲ್ಲೇ ಈ ಏಳು ಹಂತಕರನ್ನು ಬಿಡುಗಡೆ ಮಾಡಿಸುತ್ತೇವೆ ಎಂಬ ವಾಗ್ಧಾನ ಮಾಡಿತ್ತು. ಅಲ್ಲದೆ ಈಗ ಪೆರಾರಿವೇಲನ್ ಬಿಡುಗಡೆ ಬಳಿಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಸರಿಯಾದ ವಾದ ಮಾಡಿಲ್ಲ ಎಂದಿದೆ.
ಇನ್ನೂ ಆರು ಮಂದಿ ಕಾರಾಗೃಹದಲ್ಲಿ…
ಸದ್ಯ ಮುರುಗನ್ ಅಲಿಯಾಸ್ ಶ್ರೀಹರನ್, ಈತನ ಪತ್ನಿ ನಳಿನಿ, ಸಂಥನು, ರಾಬರ್ಟ್ ಪಿಯೋಸ್, ಜಯಕುಮಾರ್, ರವಿಚಂದ್ರನ್ ಇನ್ನೂ ಜೈಲಿನಲ್ಲಿಯೇ ಇದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇವರ ಬಿಡುಗಡೆಗೂ ತಮಿಳುನಾಡಿನ ಡಿಎಂಕೆ ಸರಕಾರ ಹಿಂದಿನಿಂದಲೂ ಪ್ರಯತ್ನಿಸುತ್ತಲೇ ಇದೆ. ಅತ್ತ ಎಐಎಡಿಎಂಕೆ ಕೂಡ ರಾಜೀವ್ ಹಂತಕರ ಬಿಡುಗಡೆಗೆ ತಕರಾರು ಮಾಡಿಲ್ಲ. ಇದಕ್ಕೆ ಕಾರಣ ಇವರೆಲ್ಲರೂ ಮೂಲತಃ ತಮಿಳಿಯನ್ನರು.
ರಾಜಕೀಯ ಪ್ರಭಾವ
ರಾಜೀವ್ ಗಾಂಧಿ ಹತ್ಯೆ ಸಂಬಂಧ ರಾಜಕೀಯ ಪ್ರಭಾವವೂ ಸಾಕಷ್ಟಿದೆ. ಅಲ್ಲದೆ ರಾಜೀವ್ ಗಾಂಧಿ ಹತ್ಯೆ ಸಂಬಂಧ ತನಿಖೆಗಾಗಿ ರಚಿಸಲಾಗಿದ್ದ ಜೈನ್ ಆಯೋಗ, ತನ್ನ ಮಧ್ಯಾಂತರ ವರದಿಯಲ್ಲಿ ಡಿಎಂಕೆಯ ಕರುಣಾನಿಧಿ ಅವರ ಪಾತ್ರದ ಬಗ್ಗೆ ಹೇಳಿತ್ತು. ಇದರಿಂದಾಗಿ ಐ.ಕೆ.ಗುಜ್ರಾಲ್ ನೇತೃತ್ವದ ಕೇಂದ್ರ ಸರಕಾರವೇ ಅಧಿಕಾರ ಕಳೆದುಕೊಂಡಿತ್ತು. ರಾಜೀವ್ ಹತ್ಯೆ ಅನಂತರ ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ವಿರಸ ಏರ್ಪಟ್ಟಿದ್ದರೂ, ಈಗ ಉತ್ತಮ ವಾಗಿಯೇ ಇವೆ. ಆದರೂ ಪೆರಾರಿವೇಲನ್ ಬಿಡುಗಡೆ ವಿಚಾರದಲ್ಲಿ ಡಿಎಂಕೆ ಸಂಭ್ರಮಿಸಿದ್ದರೂ ಕಾಂಗ್ರೆಸ್ ಆ ಪಕ್ಷವನ್ನು ಟೀಕಿಸಿಲ್ಲ. ಬದಲಾಗಿ ಕೇಂದ್ರದ ಕಡೆಗೆ ಬೆಟ್ಟು ಮಾಡಿದೆ.
31 ವರ್ಷಗಳ ಕಾನೂನು ಹೋರಾಟ
ಸದ್ಯ ಪೆರಾರಿವೇಲನ್ ಮಾತ್ರ ಮಾನವೀಯತೆಯ ಮೇಲೆ ಬಿಡುಗಡೆಯಾಗಿದ್ದಾನೆ. ಈತನ ತಾಯಿ 31 ವರ್ಷಗಳಿಂದ ಬಿಡುಗಡೆಗಾಗಿ ಕಾನೂನು ಹೋರಾಟ ನಡೆಸಿದ್ದಾರೆ. ಅಲ್ಲದೆ ರಾಜೀವ್ ಗಾಂಧಿ ಹತ್ಯೆಗೂ ಪೆರಾರಿವೇಲನ್‌ಗೂ ಯಾವುದೇ ಸಂಬಂಧವಿಲ್ಲ ಎಂಬುದು ಇವರ ವಾದ. ಅಂದರೆ ಘಟನೆ ನಡೆದಾಗ 19 ವರ್ಷದವನಾಗಿದ್ದ ಪೆರಾರಿವೇಲನ್, ಉಗ್ರರಿಗೆ ಬ್ಯಾಟರಿ ಸೆಲ್‌ಗಳನ್ನು ತಂದುಕೊಟ್ಟಿದ್ದ. ಈ ಸೆಲ್‌ಗಳನ್ನು ಬಳಸಿ ಬಾಂಬ್ ತಯಾರಿಸಿದ್ದ ಎಲ್‌ಟಿಟಿಇ ಉಗ್ರರು ರಾಜೀವ್ ಗಾಂಧಿ ಹತ್ಯೆಗಾಗಿ ಇವೇ ಬಾಂಬ್‌ಗಳನ್ನು ಬಳಕೆ ಮಾಡಿದ್ದರು. ಹೀಗಾಗಿ ಈತನನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಆದರೆ ಪೆರಾರಿವೇಲನ್ ಹೇಳುವ ಪ್ರಕಾರ, ನಾನು ಬ್ಯಾಟರಿ ತಂದುಕೊಡುವಂತೆ ಕೇಳಿದ್ದರು. ಹೀಗಾಗಿ ತಂದುಕೊಟ್ಟಿದ್ದೆ. ಇವುಗಳನ್ನು ರಾಜೀವ್ ಗಾಂಧಿ ಹತ್ಯೆಗಾಗಿ ಬಳಸುತ್ತಾರೆ ಎಂಬುದು ಗೊತ್ತಿರಲಿಲ್ಲ ಎಂದೇ ವಾದಿಸಿಕೊಂಡು ಬಂದಿದ್ದ.
ರಾಜೀವ್ ಹತ್ಯೆಗೆ ಕಾರಣವೇನು?
ಶ್ರೀಲಂಕಾ ಸರಕಾರ ಮತ್ತು ಎಲ್‌ಟಿಟಿಯ ಪ್ರಭಾಕರನ್ ನಡುವೆ ಆಂತರಿಕ ಯುದ್ಧವೇ ನಡೆಯುತ್ತಿತ್ತು. ಇದನ್ನು ಹತ್ತಿಕ್ಕಲು ಶ್ರೀಲಂಕಾ ಭಾರತದ ನೆರವು ಕೇಳಿತ್ತು. ಆಗ ರಾಜೀವ್ ಗಾಂಧಿಯವರು ಭಾರತದ ಶಾಂತಿಪಾಲನ ಪಡೆಯನ್ನು ಶ್ರೀಲಂಕಾಕ್ಕೆೆ ಕಳುಹಿಸಿದ್ದರು. ಇದು ಪ್ರಭಾಕರನ್ ಸಿಟ್ಟಿಗೆ ಕಾರಣವಾಗಿತ್ತು. ಹೀಗಾಗಿಯೇ ರಾಜೀವ್ ಗಾಂಧಿಯವರ ಹತ್ಯೆಗೆ ಸಂಚು ರೂಪಿಸಿದ್ದರು. ಅಷ್ಟೇ ಅಲ್ಲ, ಒಮ್ಮೆ ರಾಜೀವ್ ಗಾಂಧಿಯವರು ಲಂಕಾಗೆ ಭೇಟಿ ನೀಡಿದ್ದಾಗಲೇ ಸೈನಿಕನೊಬ್ಬ ಹತ್ಯೆಗೆ ಯತ್ನಿಸಿದ್ದ. ಅದು ವಿಫಲವಾಗಿತ್ತು.