Advertisement

ಉಡುಗೊರೆಯಾಗಿ ನೀಡಿದ ಹಸುಗಳನ್ನುಹಿಂದಿರುಗಿಸಿದ ಹರಿಯಾಣ ಬಾಕ್ಸರ್‌ಗಳು!

06:30 AM Jan 07, 2018 | Team Udayavani |

ಹೊಸದಿಲ್ಲಿ: ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದ ಸಾಧನೆಗಾಗಿ ಹರಿಯಾಣ ಸರಕಾರ ನಾಲ್ವರು ಮಹಿಳಾ ಬಾಕ್ಸರ್‌ಗಳಿಗೆ ಹಸುಗಳನ್ನು ಉಡುಗೊರೆಯಾಗಿ ನೀಡಿದ್ದು ಸುದ್ದಿಯಾಗಿತ್ತು. ಇದಕ್ಕಿಂತ ಮಿಗಿಲಾದ ಸುದ್ದಿಯೆಂದರೆ, ಈ ಹಸುಗಳನ್ನೀಗ ಬಾಕ್ಸರ್‌ಗಳು ಮರಳಿ ಸರಕಾರಕ್ಕೆ ಹಿಂದಿರುಗಿಸಿದ್ದು!

Advertisement

ಕ್ರೀಡೆಯನ್ನು ಹೆಚ್ಚು ಪ್ರೋತ್ಸಾಹಿಸುವ ರಾಜ್ಯಗಳಲ್ಲಿ ಹರಿಯಾಣಕ್ಕೆ ಮೊದಲ ಸ್ಥಾನ. ಕಳೆದ ಬಾರಿ ಹರಿಯಾಣ ಸರಕಾರ ಕ್ರೀಡಾ ಸಾಧಕರಿಗೆ ಹಸುಗಳನ್ನು ಉಡುಗೊರೆ ನೀಡುವುದಾಗಿ ಘೋಷಿಸಿತ್ತು. ಅದರಂತೆ ನಾಲ್ಕು ಮಂದಿ ಮಹಿಳಾ ಬಾಕ್ಸರ್‌ಗಳಿಗೆ ಹಸುಗಳನ್ನು ನೀಡಿತ್ತು ಕೂಡ. ಆದರೆ ಅವರಲ್ಲಿ ಈಗಾಗಲೇ ಮೂವರು ಬಾಕ್ಸರ್‌ಗಳು ಕೊಡುಗೆಯಾಗಿ ನೀಡಲಾದ ಈ ಹಸುಗಳನ್ನು ಸರಕಾರಕ್ಕೇ ವಾಪಸ್‌ ಮಾಡಿದ್ದಾರೆ. ಇದಕ್ಕೆ ಕಾರಣ, ಇವೆಲ್ಲ ಹಾಲು ನೀಡದ ಗೊಡ್ಡು ಹಸುಗಳು! ಜತೆಗೆ, ಹಾಲು ಕರೆಯುವವರನ್ನು ಒದ್ದು ಗಾಯಗೊಳಿಸಿವೆ!

ಅಮೆಚೂರ್‌ ಇಂಟರ್‌ನ್ಯಾಶನಲ್‌ ಬಾಕ್ಸಿಂಗ್‌ ಅಸೋಸಿಯೇಶನ್‌ (ಎಐಬಿಎ) “ವುಮೆನ್ಸ್‌ ವರ್ಲ್ಡ್ ಯೂತ್‌ ಚಾಂಪಿಯನ್‌ಶಿಪ್‌’ನಲ್ಲಿ ಚಿನ್ನದ ಪದಕ ಗೆದ್ದಿದ್ದ ಹರಿಯಾಣದ ನೀತು, ಜ್ಯೋತಿ ಗುಲಿಯಾ, ಸಾಕ್ಷಿ ಚೌಧರಿ ಮತ್ತು ಸಾಕ್ಷಿ ಛೋಪ್ರಾ ಅವರಿಗೆ ಹಸುಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು.

ಸಚಿವರ ಯೋಜನೆ ವಿಫ‌ಲ!
ಇದೀಗ ಕೊಡುಗೆಯನ್ನು ಹಿಂದಿರುಗಿಸಿರುವ ಬಾಕ್ಸರ್‌ ರೋಹrಕ್‌ನ ಜ್ಯೋತಿ ಗುಲಿಯಾ ಈ ಬಗ್ಗೆ ಪ್ರತಿಕ್ರಿಯಿಸಿ, “ಐದು ದಿನಗಳ ಕಾಲ ನನ್ನ ತಾಯಿ ಹಸುಗಳನ್ನು ಚೆನ್ನಾಗಿಯೇ ನೋಡಿಕೊಂಡರು. ಬರಬರುತ್ತ ಹಸು ಹಾಲು ಕೊಡುವುದನ್ನೇ ನಿಲ್ಲಿಸಿತು. ಸಾಲದ್ದಕ್ಕೆ ಹಸು ತಾಯಿಗೆ ಒದ್ದು ಕಾಲಿಗೆ ಗಾಯ ಮಾಡಿದೆ. ನಾವು ಕೂಡಲೇ ಹಸುವನ್ನು ಹಿಂದಿರುಗಿಸಿದೆವು. ಇದಕ್ಕಿಂತ ನಾವು ನಮ್ಮ ಎಮ್ಮೆಗಳೊಂದಿಗೇ ಖುಷಿಯಾಗಿದ್ದೆವು’ ಎಂದಿದ್ದಾರೆ.
ಈ ಕುರಿತು ಅಭಿಪ್ರಾಯ ಸೂಚಿಸಿರುವ ಜ್ಯೋತಿಯ ತರಬೇತುದಾರ ವಿಜಯ್‌ ಹೂಡಾ, ಹಸುಗಳನ್ನು ಕೊಡುವುದಿದ್ದರೆ ಸ್ಥಳೀಯ ಹಸುಗಳನ್ನೇ ಕೊಡಬಹುದಿತ್ತು ಎಂದಿದ್ದಾರೆ.

ಕ್ರೀಡಾ ಸಾಧಕರಿಗೆ ಹಸುಗಳನ್ನು ಕೊಡುಗೆ ನೀಡುವ ಯೋಜನೆ ಹರಿಯಾಣದ ಪಶು ಸಂಗೋಪನ ಸಚಿವ ಓಂ ಪ್ರಕಾಶ ಧನ್ಕರ್‌ ಅವರದ್ದು. ಕ್ರೀಡಾಪಟುಗಳ ಶಕ್ತಿವರ್ಧನೆಗೆ ಹಾಲು ಎಷ್ಟು ಮಹತ್ವದ್ದು ಎಂಬುದನ್ನು ಕೂಡ ವಿವರಿಸಿದ್ದ ಸಚಿವರು, “ಶಕ್ತಿಗಾಗಿ ಎಮ್ಮೆಯ ಹಾಲು ಕುಡಿಯಬೇಕು. ಸೌಂದರ್ಯ ಮತ್ತು ಬುದ್ಧಿಶಕ್ತಿಗೆ ಹಸುವಿನ ಹಾಲು ಕುಡಿಯಬೇಕು. ಮಹಿಳಾ ಬಾಕ್ಸರ್‌ಗಳು ದೇಶಕ್ಕೆ ಹೆಮ್ಮೆ ತಂದಿರುವ ಕಾರಣ ಅವರು ಇನ್ನಷ್ಟು ಸಾಧಿಸಬೇಕಿದೆ’ ಎಂದಿದ್ದರು. ಈಗ ಅವರ ಯೋಜನೆ ವಿಫ‌ಲಗೊಳ್ಳುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next