ಪುಣೆ: ಬರೋಬ್ಬರಿ 136 ಪಂದ್ಯ ಹಾಗೂ ಎರಡೂವರೆ ತಿಂಗಳ ಬಳಿಕ 11ನೇ ಪ್ರೊ ಕಬಡ್ಡಿ ಲೀಗ್ ಫೈನಲ್‌ಗೆ ಕ್ಷಣಗಣನೆ ಮೊದಲ್ಗೊಂಡಿದೆ.
ರವಿವಾರದ ಪ್ರಶಸ್ತಿ ಕಾಳಗದಲ್ಲಿ ಹರಿಯಾಣ ಸ್ಟೀಲರ್ ಮತ್ತು ಪಾಟ್ನಾ ಪೈರೇಟ್ಸ್ ಮುಖಾಮುಖೀ ಆಗಲಿವೆ. ಪಾಟ್ನಾ 4ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ, ಹರಿಯಾಣ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.
ಪಾಟ್ನಾ ಪೈರೇಟ್ಸ್‌ಗೆ ಇದು 4ನೇ ಫೈನಲ್. ಇದಕ್ಕೂ ಮುನ್ನ 3, 4, 5ನೇ ಆವೃತ್ತಿಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸಿತ್ತು. 8ನೇ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿತ್ತು. ಹರಿಯಾಣ ಸತತ 2ನೇ ಬಾರಿಗೆ ಫೈನಲ್‌ಗೆ ಲಗ್ಗೆ ಇರಿಸಿದೆ. ಕಳೆದ ಆವೃತ್ತಿಯಲ್ಲಿ ಪುಣೇರಿಗೆ ಶರಣಾಗಿತ್ತು. ಈ ಬಾರಿ ಅದೃಷ್ಟ ಕೈ ಹಿಡಿದೀತೇ ಎಂಬುದೊಂದು ನಿರೀಕ್ಷೆ.
ಸೆಮಿಫೈನಲ್ ಪಂದ್ಯದಲ್ಲಿ ಹರಿಯಾಣ ತಂಡ ಯುಪಿ ಯೋಧಾಸ್ ವಿರುದ್ಧ 28-25 ಅಂತರದಿಂದ ಜಯಿಸಿತ್ತು. ಶಿವಂ ಪತಾರೆ, ವಿನಯ್ ಮತ್ತು ಮೊಹಮ್ಮದ್‌ರೆಜ ಶಾದ್ಲು ಉತ್ತಮ ಪ್ರದರ್ಶನ ನೀಡಿದ್ದರು. ಇನ್ನೊಂದೆಡೆ ಪಾಟ್ನಾ ತಂಡ ಜಿದ್ದಾಜಿದ್ದಿ ಸೆಣಸಾಟದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ 32-28 ಅಂತರದ ರೋಚಕ ಜಯ ಸಾಧಿಸಿತ್ತು.
ಪಿಕೆಎಲ್ ಈ ಆವೃತ್ತಿಯಲ್ಲಿ ಪಾಟ್ನಾ ವಿರುದ್ಧ ಹರಿಯಾಣ ಸೋಲನ್ನೇ ಕಾಣದೆ ಅಜೇಯ ತಂಡವಾಗಿ ಹೊರಹೊಮ್ಮಿದೆ. ಲೀಗ್ ಹಂತದ 22 ಪಂದ್ಯಗಳಲ್ಲಿ ಹದಿನಾರನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು. ಪಾಟ್ನಾ 22 ಪಂದ್ಯಗಳಲ್ಲಿ 13 ಪಂದ್ಯಗಳನ್ನು ಗೆದ್ದು 4ನೇ ಸ್ಥಾನಿಯಾಗಿತ್ತು.