Advertisement

ವಯಸ್ಸು ಚಿಕ್ಕದು, ಸಾಧನೆ ದೊಡ್ಡದು

11:49 AM Apr 28, 2018 | |

15ರ ವಯಸ್ಸು ಅಂದರೆ, ಆದು ಆಟ ಆಡುತ್ತಾ, ಸ್ನೇಹಿತರ ಜತೆ ಸುತ್ತಾಡುತ್ತಾ, ಒಂದಷ್ಟು ತುಂಟತನ, ತರಲೆ ಮಾಡುತ್ತಾ ಕಾಲ ಕಳೆಯುವ ವಯಸ್ಸು. ಆದರೆ, ಹರ್ಯಾಣದ ಶೂಟರ್‌ ಅನೀಶ್‌ ಭನ್ವಾಲ್‌ ಎಂಬ ಬಾಲಕ ಈ ವಯಸ್ಸಿನಲ್ಲಿ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಇಡೀ ಭಾರತವೇ ಹೆಮ್ಮೆ ಪಡುವಂಥ ಸಾಧನೆ ಮಾಡಿದ್ದಾನೆ.

Advertisement

ಅನೀಶ್‌ ಇತ್ತೀಚೆಗೆ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನ 25 ಮೀ. ರ್ಯಾಪಿಡ್‌ ಫೈಯರ್‌ ಪಿಸ್ತೂಲ್‌ ವಿಭಾಗದಲ್ಲಿ ಜಗತ್ತಿನ ಘಟಾನುಘಟಿಗಳನ್ನು ಮಣಿಸಿ ಚಿನ್ನದ ಪದಕ ಗೆದ್ದಿದ್ದಾನೆ. ಆ ಮೂಲಕ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಅತೀ ಕಿರಿಯ ಕ್ರೀಡಾಪಟು ಎಂಬ ದಾಖಲೆ ನಿರ್ಮಿಸಿದ್ದಾನೆ. ಕೇವಲ 15ನೇ ವಯಸ್ಸಿನಲ್ಲಿಯೇ ಈ ಸಾಧನೆ ಮಾಡುವ ಮೂಲಕ ಮುಂದೆ ತಾನೊಬ್ಬ ವಿಶ್ವ ವಿಖ್ಯಾತ ಶೂಟರ್‌ ಆಗಿ ಹೊರಹೊಮ್ಮುವ ಸೂಚನೆ ನೀಡಿದ್ದಾನೆ.

ಕ್ರೀಡಾ ಕುಟುಂಬದ ಹಿನ್ನೆಲೆ
 ಕ್ರೀಡಾ ಕುಟುಂಬದಲ್ಲಿ ಜನಿಸಿದ ಅನೀಶ್‌ಗೆ  ಸಹಜವಾಗಿ ರಕ್ತದಲ್ಲಿಯೇ ಕ್ರೀಡೆಯ ಅಂಶ ಸೇರ್ಪಡೆಯಾಗಿದೆ. ಪ್ರಾಥಮಿಕ ಶಾಲೆಯಲ್ಲಿಯೇ ವಿವಿಧ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದ ಅನೀಶ್‌, ನಂತರದಲ್ಲಿ ಶೂಟಿಂಗ್‌ ಅಭ್ಯಾಸ ಆರಂಭಿಸಿದ ಆತನಿಗೆ ಕುಟುಂಬದ ಸಂಪೂರ್ಣ ಬೆಂಬಲವಿತ್ತು. ಹೀಗಾಗಿಯೇ 12ನೇ ವಯಸ್ಸಿನಿಂದಲೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಅನೀಶ್‌ ಯಶಸ್ವಿಯಾದ.

2017ರಲ್ಲಿ ವಿಶೇಷ ಸಾಧನೆ
ಅನೀಶ್‌ ಕ್ರೀಡಾ ಬದುಕಿನಲ್ಲಿ 2017 ವಿಶೇಷವಾದ ವರ್ಷವಾಗಿದೆ. ಜೂನಿಯರ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ, 2 ಬೆಳ್ಳಿ, 1 ಕಂಚಿನ ಪದಕ ಗೆದ್ದಿದ್ದಾರೆ. ಬ್ರಿಸ್ಬೇನ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಹೀಗೆ ಜೂನಿಯರ್‌ ವಿಭಾಗದಲ್ಲಿ ಮಾಡಿದ ಸಾಧನೆಯಿಂದಲೇ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಅವಕಾಶ ಸಿಕ್ಕಿತು. ಪದಾರ್ಪಣೆಯ ಗೇಮ್ಸ್‌ನಲ್ಲಿಯೇ ಚಿನ್ನವನ್ನು ಗೆಲ್ಲುವ ಮೂಲಕ ಈತ ದಾಖಲೆ ನಿರ್ಮಿಸಿದ್ದಾನೆ.

ಯುವ ಪ್ರತಿಭೆಗಳಿಗೆ ಸ್ಫೂರ್ತಿ
ವಯಸ್ಸು ಚಿಕ್ಕದಾದರೂ ಆಟದೆಡೆಗೆ ಪ್ರೀತಿ ಹಾಗೂ ಸಾಧಿಸುವೆನೆಂಬ ಛಲವಿದ್ದರೆ ದೊಡ್ಡ ಸಾಧನೆ ಮಾಡಲು ಸಾಧ್ಯ. ಸಾಧನೆಗೆ ವಯಸ್ಸು ನಿರ್ಣಾಯಕವಲ್ಲ. ಸಾಧಿಸುವ ಛಲ, ಗುರಿ, ಸತತ ಅಭ್ಯಾಸವಿದ್ದರೆ ಸಾಧನೆ ಸಾಧ್ಯ ಅನ್ನುವುದನ್ನು ಅನೀಶ್‌ ತೋರಿಸಿದ್ದಾರೆ. ಇದು ಸಹಜವಾಗಿ ಕ್ರೀಡಾ ಕ್ಷೇತ್ರದಲ್ಲಿರುವ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ.

Advertisement

    

Advertisement

Udayavani is now on Telegram. Click here to join our channel and stay updated with the latest news.

Next