ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಜುಲಾನಾ ಕ್ಷೇತ್ರ ನೈಜ ರಾಜಕೀಯ ದಂಗಲ್ ಆಗುವ ಮೂಲಕ ರಾಷ್ಟ್ರ ಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ನಿಂದ ಕಣಕ್ಕಿಳಿದಿರುವ ಕುಸ್ತಿಪಟು, ಕಾಂಗ್ರೆಸ್ ನಾಯಕಿ ವಿನೇಶ್ ಫೋಗಾಟ್ ಅವರ ಎದುರು ಆಮ್ ಆದ್ಮಿ ಪಕ್ಷದಿಂದಲೂ ಕುಸ್ತಿ ಪಟು ಕವಿತಾ ದಲಾಲ್ ಅವರನ್ನು ಕಣಕ್ಕಿಳಿಸಲಾಗಿದೆ.
ಕಾಂಗ್ರೆಸ್ ನಿಂದ ಮೈತ್ರಿ ಮುರಿದುಕೊಂಡಿರುವ ಆಪ್ ಪ್ರತ್ಯೇಕ ಸ್ಪರ್ಧೆ ಮಾಡುತ್ತಿದ್ದು, 37 ರ ಹರೆಯದ WWE ವೃತ್ತಿಪರ ಕುಸ್ತಿಪಟು ಕವಿತಾ ದಲಾಲ್ ಅವರನ್ನು ಕಣಕ್ಕಿಳಿಸಿದೆ. ಕವಿತಾ 2017 ರಿಂದ 2021 ರ ನಡುವೆ NXTಯಲ್ಲಿ ಕವಿತಾ ದೇವಿ ಎಂಬ ರಿಂಗ್ ಹೆಸರಿನಲ್ಲಿ WWE ಆಡಿದ್ದರು. WWE ನಲ್ಲಿ ಕುಸ್ತಿಯಾಡಿದ ಮೊದಲ ಭಾರತೀಯ ಮಹಿಳಾ ವೃತ್ತಿಪರ ಕುಸ್ತಿಪಟು ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ಬಿಜೆಪಿಯಿಂದಲೂ ಪ್ರಬಲ ಅಭ್ಯರ್ಥಿ
ಬಿಜೆಪಿ ಕ್ಯಾಪ್ಟನ್ ಯೋಗೀಶ್ ಬೈರಾಗಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ, 35 ರ ಹರೆಯದ ಮಾಜಿ ಸೇನಾ ಅಧಿಕಾರಿ ಮತ್ತು ಮಾಜಿ ವಾಣಿಜ್ಯ ಪೈಲಟ್ ಬೈರಾಗಿ ಸಫಿಡಾನ್ ನಿವಾಸಿಯಾಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಏಳು ವರ್ಷಗಳ ಹಿಂದೆ ರಾಜಕೀಯಕ್ಕೆ ಪ್ರವೇಶಿಸಿ ಪಕ್ಷದಲ್ಲಿ ದುಡಿದ ಅನುಭವ ಹೊಂದಿದ್ದಾರೆ.
ಬೈರಾಗಿ ಅವರು ಚೆನ್ನೈ ಪ್ರವಾಹದ ಸಮಯದಲ್ಲಿ ಪರಿಹಾರ ಮತ್ತು ರಕ್ಷಣ ವಿಮಾನಗಳನ್ನು ಹಾರಿಸಿ ಮತ್ತು ಕೋವಿಡ್ ಸಮಯದಲ್ಲಿ ವಂದೇ ಭಾರತ್ ಮಿಷನ್‌ನಲ್ಲಿ ಭಾಗಿಯಾಗಿ ತನ್ನದೇ ಆದ ಹಿರಿಮೆಯನ್ನು ಹೊಂದಿರುವ ಯುವ ಮುಖವಾಗಿದ್ದಾರೆ.
ಜಾತಿ ಲೆಕ್ಕಾಚಾರ
ಜಾಟ್ ಮತದಾರರ ಪ್ರಾಬಲ್ಯ ಹೊಂದಿರುವ ಕ್ಷೇತ್ರವಾಗಿದ್ದು ಅಂದಾಜು 81,000 ಮತದಾರರು ಭವಿಷ್ಯ ನಿರ್ಧರಿಸಲಿದ್ದಾರೆ. ಹಿಂದುಳಿದ ವರ್ಗದ (33,608) ಮತ್ತು ಪರಿಶಿಷ್ಟ ಜಾತಿ (29,661) ಮತದಾರರೂ ಇದ್ದಾರೆ. ಕಾರ್ಯತಂತ್ರ ರೂಪಿಸಿರುವ ಬಿಜೆಪಿ ಜಾಟ್ ಅಲ್ಲದ ಹಿಂದುಳಿದ ವರ್ಗದ ಬೈರಾಗಿ ಅವರನ್ನು ಕಣಕ್ಕಿಳಿಸಿದೆ, ವಿವಿಧ ಸಮುದಾಯಗಳಲ್ಲಿ ತನ್ನ ಮತಗಳನ್ನು ಸೆಳೆಯುವ ಇರಾದೆ ಹೊಂದಿದೆ.
ಬಿಜೆಪಿಯ ಪ್ರಬಲ ಮುಖಂಡ ಸುರೇಂದರ್ ಸಿಂಗ್ ಲಾಥರ್ ಮತ್ತು ಬೆಂಬಲಿಗರು ಪಕ್ಷ ತೊರೆದು ಭಾರತೀಯ ರಾಷ್ಟ್ರೀಯ ಲೋಕದಳ (INLD)-ಬಹುಜನ ಸಮಾಜ ಪಕ್ಷ (BSP) ಮೈತ್ರಿ ಕೂಟ ಸೇರಿ ಟಿಕೆಟ್ ಗಿಟ್ಟಿಸಿಕೊಂಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ತೊಡೆ ತಟ್ಟಿದ್ದಾರೆ.
ಹಾಲಿ ಶಾಸಕ ಪ್ರಬಲ ಸ್ಪರ್ಧಿ
ಜಾಟ್ ಪ್ರಾಬಲ್ಯದ ಕ್ಷೇತ್ರದಲ್ಲಿ ಜನನಾಯಕ ಜನತಾ ಪಕ್ಷದ ಹಾಲಿ ಶಾಸಕ ಅಮರ್‌ಜೀತ್ ಧಂಡಾ ಮತ್ತೆ ಕಣಕ್ಕಿಳಿದಿದ್ದು ಅವರೂ ಪ್ರಬಲ ಸ್ಪರ್ಧಿ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ತನ್ನದೇ ಆದ ಪಕ್ಷದ ಕಾರ್ಯಕರ್ತರ ಬಲ ಮತ್ತು ವರ್ಚಸ್ಸನ್ನು ಅವರು ಹೊಂದಿದ್ದು, ಬಹುಕೋನದ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೋ ಎನ್ನುವುದನ್ನು ಮತದಾರರು ನಿರ್ಧರಿಸಬೇಕಿದೆ.
ಒಟ್ಟಾರೆ ಹರಿಯಾಣದಲ್ಲೇ ವಿವಿಧ ಪಕ್ಷಗಳ ಕಾರ್ಯಕರ್ತರಲ್ಲಿ ಅತ್ಯಧಿಕ ಉತ್ಸಾಹ ಜುಲಾನದಲ್ಲಿ ಕಂಡು ಬರುತ್ತಿದೆ. ಎಲ್ಲ ಪಕ್ಷಗಳು ಭರ್ಜರಿ ಪ್ರಚಾರವನ್ನೂ ಆರಂಭಿಸಿವೆ.