Advertisement

ಬಾಬಾ ಹಿಂಸಾಚಾರ:ಖಟ್ಟರ್‌ ಸರ್ಕಾರದ ವಿರುದ್ಧ ಹೈಕೋರ್ಟ್‌ ಕಿಡಿ

01:06 PM Aug 26, 2017 | |

ಸಿರ್ಸಾ: ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿ ಜೈಲು ಸೇರಿರುವ ಸ್ವಯಂ ಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಂ ಸಿಂಗ್‌ನ  ಉದ್ರಿಕ್ತ ಬೆಂಬಲಿಗರು ನಡೆಸಿರುವ ಹಿಂಸಾಚಾರದಲ್ಲಿ  ಅಪಾರ ಆಸ್ತಿ ಪಾಸ್ತಿ ಹಾನಿಯಾಗಿರುವ ಹಿನ್ನಲೆಯಲ್ಲಿ ನಷ್ಟ ಸರಿದೂಗಿಸಲು ಬಾಬಾನ ಆಸ್ತಿಯನ್ನೇ ಮುಟ್ಟುಗೋಲು ಹಾಕಿಕೊಳ್ಳಲು ಪಂಜಾಬ್‌ ಹರಿಯಾಣ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಸಾರ್ವಜನಿಕ ಆಸ್ತಿ ಸಾನಿ ಮತ್ತು  ಮೃತರ ಕುಟುಂಬಗಳಿಗೂ ಡೇರಾ ಸಚ್ಚಾ ಸೌದಾವೇ ಪರಿಹಾರ ನೀಡಲಿ ಎಂದು ಹೈಕೋರ್ಟ್‌ ಹೇಳಿದೆ. 

ಖಟ್ಟರ್‌ ಸರ್ಕಾರದ ವಿರುದ್ಧ ಕಿಡಿ 
ಹಿಂಸಾಚಾರಕ್ಕೆ ಸಂಬಂಧಿಸಿ ಮನೋಹರ್‌ ಲಾಲ್‌ ಖಟ್ಟರ್‌ ಅವರ ಬಿಜೆಪಿ ಸರ್ಕಾರದ ವಿರುದ್ಧ  ಹೈಕೋರ್ಟ್‌ ಕಿಡಿ ಕಾರಿದ್ದು, ‘ರಾಜಕೀಯ ಲಾಭಕ್ಕಾಗಿ ನಗರ ಹೊತ್ತಿ ಉರಿಯಲು ಅವಕಾಶ ನೀಡಿದಿರೇ’ ಎಂದು ಪ್ರಶ್ನಿಸಿದೆ.

‘ಸರ್ಕಾರ ಉದ್ರಿಕ್ತ ಹೋರಾಟಗಾರರಿಗೆ ಶರಣಾಗಿದೆ’ ಎಂದಿರುವ ಹೈಕೋರ್ಟ್‌ ‘ಈ ಬಗ್ಗೆ ನಿಮಗೆ ಗೊತ್ತಿರಲಿಲ್ಲವೆ, ರಾಜ್ಯದಲ್ಲಿ  ಗುಪ್ತಚರ ಇಲಾಖೆ ಇಲ್ಲವೆ?ಯಾಕಾಗಿ ಹಿಂಸಾಚಾರ ಭುಗಿಲೇಳಲು ಅವಕಾಶ ನೀಡಿದಿರಿ’ ಎಂದು ಛೀಮಾರಿ ಹಾಕಿದೆ.

ಶುಕ್ರವಾರ ಹರ್ಯಾಣದ ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯ ಬಾಬಾ ದೋಷಿ ಎಂದು ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದು 32ಕ್ಕೂ ಹೆಚ್ಚು  ಮಂದಿ ಸಾವನ್ನಪ್ಪಿದ್ದಾರೆ. 

Advertisement

ಪಂಚಕುಲದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಹರ್ಯಾಣ ಮತ್ತು ಪಂಜಾಬ್, ದೆಹಲಿ, ರಾಜಸ್ಥಾನಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಅಧಿಕಾರಿಗಳ ವಿಶೇಷ ಸಭೆ ಕರೆಯಲಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರೂ ಸಭೆಯಲ್ಲಿ ಭಾಗಿಯಾಗಲಿದ್ದಾರೆ. 

ಸದ್ಯ ಬಾಬಾ ಬಂಧಿಯಾಗಿರುವ ರೋಹಟಕ್‌ನ ಜಿಲ್ಲಾ ನ್ಯಾಯಾಲಯದ ಸುತ್ತ ಸೇನೆ ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿ ಪಂಚಕುಲದ ಡಿಸಿಪಿಯನ್ನು ಅಮಾನತು ಮಾಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next