ಚಂಡೀಗಢ : ಹರಿಯಾಣದ ಮಹೇಂದ್ರಗಢ ಜಿಲ್ಲೆಯಲ್ಲಿ 19ರ ಹರೆಯದ ತರುಣಿಯ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ ಆರೋಪಿಯನ್ನು ಗುರುತಿಸಲಾಗಿದ್ದು ಆತನು ರಾಜಸ್ಥಾನದಲ್ಲಿ ರಕ್ಷಣಾ ಇಲಾಖೆಯ ಸಿಬಂದಿ ಎಂದು ಗೊತ್ತಾಗಿದೆ.
ಈಗಲೂ ತಲೆ ಮರೆಸಿಕೊಂಡಿರುವ ಆತನ ಬಂಧನಕ್ಕೆ ವ್ಯಾಪಕವಾಗಿ ಬಲೆ ಬೀಸಲಾಗಿದೆ ಎಂದು ವಿಶೇಷ ತನಿಖಆ ತಂಡದ ನೇತೃತ್ವ ವಹಿಸಿರುವ ಮೇವಾತ್ ಎಸ್‌ಪಿ ನಾಝನೀನ್ ಭಾಸಿನ್ ತಿಳಿಸಿದ್ದಾರೆ.
ಈ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಒಟ್ಟು ಮೂವರು ಆರೋಪಿಗಳು ಶಾಮೀಲಾಗಿದ್ದಾರೆ. ಪ್ರಮುಖ ಆರೋಪಿ ರಕ್ಷಣಾ ಇಲಾಖೆ ಸಿಬಂದಿಯಾಗಿದ್ದು ಆತನ ಬಂಧನಕ್ಕೆ ನಾವು ವಾರಂಟ್ ಪಡೆಯುತ್ತಿದ್ದೇವೆ; ಉಳಿದಿಬ್ಬರು ಆರೋಪಿಗಳನ್ನು ಶೀಘ್ರವೇ ಬಂಧಿಸಲಿದ್ದೇವೆ’ ಎಂದು ಹರಿಯಾಣ ಡಿಜಿಪಿ ಬಿ ಎಸ್ ಸಂಧು ಹೇಳಿದರು.
ನಿನ್ನೆ ಶುಕ್ರವಾರ ಎಸ್‌ಪಿ ಭಾಸಿನ್ ಅವರು ರೇಪ್ ಸಂತ್ರಸ್ತ ಮಹಿಳೆಯನ್ನು ರೇವಾರಿಯಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಭೇಟಿಯಾದರು. ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದರು. ರೇಪ್ ಸಂತ್ರಸ್ತೆಯು ತನ್ನ ಮೇಲೆ ಎಂಟರಿಂದ ಹತ್ತು ಪುರುಷರಿಂದ ಅತ್ಯಾಚಾರ ನಡೆದಿರಬಹುದು ಎಂದು ಹೇಳಿದ್ದಾಗಿ ತಿಳಿಸಿದರು.
ಈ ನಡುವೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು), ಹರಿಯಾಣ ಡಿಜಿಪಿ ಅವರಿಗೆ ಪತ್ರ ಬರೆದು ಈ ಗ್ಯಾಂಗ್ ರೇಪ್ ಪ್ರಕರಣದ ತಾಜಾ ವಿದ್ಯಮಾನಗಳ ವಿವರಗಳನ್ನು ನೀಡುವಂತೆ ಕೋರಿದೆ.
ಗ್ಯಾಂಗ್ ರೇಪ್ ಪ್ರಕರಣ ಮೂವರು ಆರೋಪಿಗಳನ್ನು ಸೆರೆ ಹಿಡಿಯಲು ನಿನ್ನೆ ಶುಕ್ರವಾರ ರೇವಾರಿ ಮತ್ತು ಮಹೇಂದ್ರಗಢ ಜಿಲ್ಲೆ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿತ್ತು ಎಂದು ಭಾಸಿನ್ ತಿಳಿಸಿದರು.