ಮಡಿಕೇರಿ: ಕಾಳು ಮೆಣಸು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಅರವತ್ತೂಕ್ಲು ಗ್ರಾಮದ ನಿವಾಸಿ ಎಂ. ಸುಬ್ಬಯ್ಯ ಅವರ ಮನೆಯ ಸಂಗ್ರಹಣ ಕೊಠಡಿಯಲ್ಲಿ ಶೇಖರಿಸಿಟ್ಟಿದ್ದ 450 ಕೆ.ಜಿ. ಕಾಳುಮೆಣಸನ್ನು ಮೇ 16ರಂದು ಮನೆಯಲ್ಲಿ ಯಾರೂ ಇಲ್ಲದಿರುವ ಸಂದರ್ಭ ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಐವರನ್ನು ಬಂಧಿಸಿದ್ದಾರೆ.
ಅರವತ್ತೂಕ್ಲು ಗ್ರಾಮದ ನಿವಾಸಿಗಳಾದ ಸುಬ್ರಮಣಿ (24), ಮಂಜು (25), ಬೆಳ್ಳಿ (36), ಕರ್ಪ (49) ಹಾಗೂ ಕುಶಾಲ (19) ಬಂಧಿತರು. ಇವರ ಬಳಿಯಿಂದ 450 ಕೆ.ಜಿ. ಕಾಳುಮೆಣಸು ಮತ್ತು ಕೃತ್ಯಕ್ಕೆ ಬಳಸಿದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿರಾಜಪೇಟೆ ಉಪ ವಿಭಾಗದ ಡಿವೈಎಸ್‌ಪಿ ಆರ್.ಮೋಹನ್‌ಕುಮಾರ್, ಗೋಣಿಕೊಪ್ಪ ವೃತ್ತದ ಸಿಪಿಐ ಶಿವರಾಜ ಮುಧೋಳ್, ಪಿಎಸ್‌ಐಗಳಾದ ರೂಪದೇವಿ ಬಿರಾದರ್, ಗೌರಿಶಂಕರ್, ಸಿಬಂದಿ ಹಾಗೂ ತಾಂತ್ರಿಕ ಸಿಬಂದಿಗಳ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿತು.
ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿಯ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್.ಕೆ.ಎಸ್ ಶ್ಲಾ ಸಿದ್ದಾರೆ.