ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯ ಕುಂಬಾರಗಡಿಗೆಯಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಹತ್ಯೆ ಪ್ರಕರಣದ ಆರೋಪಿಯನ್ನು ಶನಿವಾರ ಬೆಳಗ್ಗೆ ಬಂಧಿಸಲಾಗಿದೆ. ಬಾಲಕಿಯೊಂದಿಗೆ ವಿವಾಹ ಸಾಧ್ಯವಾಗದ ಹಿನ್ನೆಲೆ ಹತಾಶೆಯಿಂದ ಆರೋಪಿ ಪ್ರಕಾಶ್ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಜಿಲ್ಲಾ ಎಸ್‌ಪಿ ಕೆ. ರಾಮರಾಜನ್ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಅವರು ಮಾಹಿತಿ ನೀಡಿ, ಬಂಧಿತ ಆರೋಪಿ ಪ್ರಕಾಶ್ (ಓಂಕಾರಪ್ಪ)ನನ್ನು ವಿಚಾರಣೆಗೆ ಒಳಪಡಿಸಿ, ಹತ್ಯೆಗೊಳಗಾದ ಮೀನಾಳ ರುಂಡವನ್ನು ಕುಂಬಾರಗಡಿಗೆಯ ಆಕೆಯ ಮನೆಯಿಂದ ಸುಮಾರು 50 ರಿಂದ 100 ಮೀಟರ್ ದೂರದ ಮರಕಾಡುಗಳ ನಡುವೆ ಪತ್ತೆ ಮಾಡಲಾಗಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಲಾದ ಕತ್ತಿ ಮತ್ತು ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಎಸೆಸೆಲ್ಸಿ ಫಲಿತಾಂಶದ ದಿನ ಮೀನಾ ಹಾಗೂ ಪ್ರಕಾಶ್‌ನ ವಿವಾಹ ನಿಶ್ಚಿತಾರ್ಥ ವಿತ್ತು. ಈ ಬಗ್ಗೆ ಮಾಹಿತಿ ತಿಳಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ 18 ವರ್ಷದ ಅನಂತರ ವಿವಾಹ ಮಾಡುವಂತೆ ಕಾನೂನಿನ ಅರಿವು ಮೂಡಿಸಿದ್ದರು. ಅನಂತರ ಎರಡೂ ಮನೆಯವರು ಮೀನಾಳಿಗೆ 18 ವರ್ಷ ತುಂಬಿದ ಮೇಲೆ ವಿವಾಹ ಮಾಡಲು ನಿಶ್ಚಯಿಸಿದರು.
ಇದಕ್ಕೆ ಸಂಬಂಧಿಸಿದಂತೆ ಮೀನಾಳ ಸಹೋದರಿಯೊಬ್ಟಾಕೆ ಇಲಾಖೆಗೆ ಮಾಹಿತಿ ನೀಡಿರಬಹುದೆನ್ನುವ ಅನುಮಾನಗಳ ಹಿನ್ನೆಲೆ ಪ್ರಕಾಶ್, ಮೀನಾಳನ್ನು ಹತ್ಯೆಗೈದ ಬಳಿಕ ತನ್ನ ಮನೆಗೆ ತೆರಳಿ ಬಂದೂಕಿನೊಂದಿಗೆ ಎರಡು ದಿನಗಳ ಕಾಲ ಅಲ್ಲೆ ಸುತ್ತಮುತ್ತಲ ಅರಣ್ಯದಲ್ಲಿ ಅಡ್ಡಾಡುತ್ತಿದ್ದ ಎಂದು ಹೇಳಿದ ಎಸ್‌ಪಿ, ಹತ್ಯೆಗೊಳಗಾದ ಮೀನಾಳ ಕುಟುಂಬ ವರ್ಗಕ್ಕೆ ಸಂಪೂರ್ಣ ರಕ್ಷಣೆ ಒದಗಿಸಿದ್ದೆವು ಎಂದರು.
ಸಹವರ್ತಿಗಳ ಬಗ್ಗೆ ತನಿಖೆ
ಮೀನಾಳ ಹತ್ಯೆ ಸಂದರ್ಭ ಕುಂಬಾರಗಡಿಗೆಯ ಆಕೆಯ ಮನೆ ಬಳಿ ವಾಹನವೊಂದರಲ್ಲಿ ಇನ್ನಿಬ್ಬರು ಪ್ರಕಾಶ್‌ನೊಂದಿಗೆ ಆಗಮಿಸಿದ್ದು, ಇವರು ಆರೋಪಿಗೆ ಸಹಕರಿಸಲು ಬಂದಿದ್ದರೊ, ಇಲ್ಲವೋ ಎನ್ನುವ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಮರಾಜನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.