ನವದೆಹಲಿ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಹೊಸ ಕೃಷಿ ಕಾಯ್ದೆಗಳನ್ನು ಖಂಡಿಸಿ ಪಂಜಾಬ್‌ನ ರೈತರು ಗುರುವಾರ ಹಮ್ಮಿಕೊಂಡಿದ್ದ “ದೆಹಲಿ ಚಲೋ’ ಪ್ರತಿಭಟನೆ ಹೈಡ್ರಾಮಾಗಳಿಗೆ ಸಾಕ್ಷಿಯಾಯಿತು.
ಪಂಜಾಬ್‌ನಿಂದ ಕಾಲ್ನಡಿಗೆ ಮೂಲಕ ಹಾಗೂ ಟ್ರ್ಯಾಕ್ಟರ್ ಮೂಲಕ ಪ್ರತಿಭಟನಾಕಾರ ರೈತರು ದೆಹಲಿಯತ್ತ ಹೆಜ್ಜೆ ಹಾಕಿದ್ದು, ಹರ್ಯಾಣದ ಗಡಿ ದಾಟುತ್ತಿದ್ದಂತೆ ಪೊಲೀಸರು ಅವರನ್ನು ತಡೆದರು. ಹರ್ಯಾಣದ ಗಡಿಯಲ್ಲಿರುವ ಸೇತುವೆಯೊಂದರ ಮೇಲೆ ರೈತರು ಹಾಗೂ ಪೊಲೀಸರ ನಡುವೆ ಭಾರೀ ಘರ್ಷಣೆ ನಡೆಯಿತು. ಪ್ರತಿಭಟನಾಕಾರರ ಪೈಕಿ ಕೆಲವರು ಖಡ್ಗ ಹಾಗೂ ಲಾಠಿಗಳನ್ನು ಹಿಡಿದುಕೊಂಡು ಬಂದಿದ್ದು, ಪೊಲೀಸರು ಜಲಫಿರಂಗಿ ಹಾಗೂ ಅಶ್ರುವಾಯು ಸಿಡಿಸಿ ಅವರನ್ನು ಚದುರಿಸಲು ಯತ್ನಿಸಿದರು.
ಈ ವೇಳೆ, ಕೆಲವರು ಅಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಸೇತುವೆಯ ಕೆಳಗೆ ಎಸೆದು, ಪೊಲೀಸರ ಮೇಲೆ ಇಟ್ಟಿಗೆ ಎಸೆದು, ಪೊಲೀಸರ ವಾಹನಗಳಿಗೆ ಹಾನಿ ಮಾಡಿದ ಘಟನೆಯೂ ನಡೆಯಿತು. ಕೇರಳ, ಉತ್ತರಪ್ರದೇಶ, ರಾಜಸ್ಥಾನ ಸೇರಿದಂತೆ 6 ರಾಜ್ಯಗಳ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮೆಟ್ರೋ ಸಂಚಾರ ಸ್ಥಗಿತ
ದೆಹಲಿ ಚಲೋ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಇತರೆ ನಗರಗಳ ನಡುವಿನ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ದೆಹಲಿ ಮೆಟ್ರೋ ತಿಳಿಸಿದೆ.
ಮಾತುಕತೆಗೆ ಆಹ್ವಾನ: ಹರ್ಯಾಣದಲ್ಲಿನ ಬೆಳವಣಿಗೆ ಬೆನ್ನಲ್ಲೇ ಮಾತನಾಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್, “ಸರ್ಕಾರವು ರೈತರ ಕ್ಷೇಯೋಭಿವೃದ್ಧಿಗೆ ಬದ್ಧವಾಗಿದ್ದು, ರೈತರು ಕೂಡಲೇ ಪ್ರತಿಭಟನೆ ಸ್ಥಗಿತಗೊಳಿಸಬೇಕು. ಕನಿಷ್ಠ ಬೆಂಬಲ ಬೆಲೆ, ಮೂಲಸೌಕರ್ಯ ಸೇರಿದಂತೆ ಎಲ್ಲ ವಿಚಾರಗಳ ಕುರಿತು ಚರ್ಚೆಗೂ ನಾವು ಸಿದ್ಧರಿದ್ದೇವೆ. ಡಿ.3ರಂದು ರೈತ ಮುಖಂಡರು ಮಾತುಕತೆಗೆ ಬರಲಿ’ ಎಂದು ಆಹ್ವಾನ ನೀಡಿದ್ದಾರೆ.