ಹರಿಯಾಣ: ದೇಶದ ಹಲವು ರಾಜ್ಯಗಳಲ್ಲಿ ಪರೀಕ್ಷೆಯ ವೇಳೆ ನಕಲು ಮಾಡುವ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ, ಕೆಲವು ರಾಜ್ಯಗಳಲ್ಲಿ ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಪ್ಪಿಸಲು ಸರಕಾರ ಕೆಲವೊಂದು ಕ್ರಮಗಳನ್ನು ಜಾರಿಗೆ ತಂದಿದೆಯಾದರೂ ನಕಲು ಮಾಡುವವರ ಸಂಖ್ಯೆ ತಕ್ಕ ಮಟ್ಟಿಗೆ ಕಡಿಮೆಯಾಗಿದ್ದರೂ ಇನ್ನೂ ಕೆಲವು ರಾಜ್ಯಗಳಲ್ಲಿ ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಪ್ಪಿಸುವಲ್ಲಿ ಅಧಿಕಾರಿಗಳೇ ವಿಫಲರಾಗಿದ್ದಾರೆ.
ಅಂತದ್ದೇ ಪ್ರಕರಣವೊಂದು ಹರಿಯಾಣದ ನುಹ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಜನ ತಮ್ಮ ಜೀವದ ಹಂಗು ತೊರೆದು ಕಾಲೇಜು ಕಟ್ಟಡವನ್ನು ಹತ್ತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಚೀಟಿ ಸರಬರಾಜು ಮಾಡುವ ದೃಶ್ಯ ಕಂಡು ಬಂದಿದೆ. ಅಲ್ಲದೆ ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇತ್ತೀಚಿಗೆ ನಡೆದ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹೊರಗಿನಿಂದ ಬಂದ ಯುವಕರ ತಂಡ ಕಾಲೇಜು ಕಟ್ಟಡದ ಗೋಡೆ ಹತ್ತಿ ಕಿಟಕಿಯಿಂದ ವಿದ್ಯಾರ್ಥಿಗಳಿಗೆ ಚೀಟಿ ನೀಡುತ್ತಿರುವುದು ಕಾಣಬಹುದು.
ಹರಿಯಾಣದ ನುಹ್ ಜಿಲ್ಲೆಯ ಯಾಸಿನ್ ಮಿಯೋ ಸೀನಿಯರ್ ಸೆಕೆಂಡರಿ ಸ್ಕೂಲ್ ಮತ್ತು ತವಾಡು ನಗರದ ಚಂದ್ರಾವತಿ ಶಾಲೆಯಲ್ಲಿ ಬೋರ್ಡ್ ಪರೀಕ್ಷೆಯ ಸಮಯದಲ್ಲಿ ಹೊರಗಿನ ಯುವಕರ ತಂಡ ಶಾಲೆಯ ಕಟ್ಟಡ ಏರಿ ಕಿಟಕಿಯ ಮೂಲಕ ಚೀಟಿಗಳನ್ನು ಕೊಡುವುದು ಕಂಡುಬಂದಿದೆ. ಆದರೆ ಸಾರ್ವಜನಿಕವಾಗಿ ನಡೆಯುತ್ತಿರುವ ಅವ್ಯವಹಾರಕ್ಕೆ ಶಾಲಾ ಆಡಳಿತ ಮಂಡಳಿ ಯಾವ ರೀತಿಯಲ್ಲಿ ಕ್ರಮ ಕೈಗೊಂಡಿದೆ ಎಂಬುದು ನಿಗೂಢ.