Advertisement

Haryana; ಬಿಜೆಪಿಗೆ ಸೆಡ್ದು ಹೊಡೆದು ಪಕ್ಷೇತರರಾಗಿ ಗೆದ್ದ ದೇಶದ ಶ್ರೀಮಂತ ಮಹಿಳೆ !

11:36 AM Oct 09, 2024 | ವಿಷ್ಣುದಾಸ್ ಪಾಟೀಲ್ |

ಹರಿಯಾಣ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ರೆಬೆಲ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ 35.5 ಬಿಲಿಯನ್ ಡಾಲರ್‌ ಸಂಪತ್ತಿನೊಂದಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಸಾವಿತ್ರಿ ಜಿಂದಾಲ್(Savitri Jindal) ಗೆಲುವು ಸಾಧಿಸಿದ್ದಾರೆ.

Advertisement

ಪ್ರಮುಖವಾಗಿ ಬಿಜೆಪಿಯ ಕುರುಕ್ಷೇತ್ರ ಸಂಸದ ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಅವರ ತಾಯಿ,ಶ್ರೀಮಂತ ಮಹಿಳಾ ಉದ್ಯಮಿ ಸಾವಿತ್ರಿ ಜಿಂದಾಲ್ ಅವರು ಹಿಸಾರ್ ವಿಧಾನಸಭಾ ಕ್ಷೇತ್ರದಿಂದ  ಪಕ್ಷೇತರರಾಗಿ ಗೆಲುವಿನ ಸಿಹಿ ಕಂಡಿದ್ದಾರೆ. ಹರಿಯಾಣದಲ್ಲಿ  ಕಾಂಗ್ರೆಸ್ ಮತ್ತು ಬಿಜೆಪಿಯ ಜಿದ್ದಾಜಿದ್ದಿನ ಹೋರಾಟದಲ್ಲಿ ಮೂವರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಆ ಪೈಕಿ ಸಾವಿತ್ರಿ ಹೆಚ್ಚು ಸುದ್ದಿಯಾಗಿದ್ದಾರೆ. ಹಿಸಾರ್ ವಿಧಾನಸಭಾ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿತ್ತು.

74 ರ ಹರೆಯದ ಸಾವಿತ್ರಿ ಜಿಂದಾಲ್ ಉತ್ಸಾಹದ ರಾಜಕಾರಣ ಮುಂದುವರಿಸಲು ಬಯಸಿ ಹಿಸಾರ್‌ನಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಬಯಸಿದ್ದರು, ಆದರೆ ಬಿಜೆಪಿ ಟಿಕೆಟ್ ನಿರಾಕರಿಸಿ ಹಾಲಿ ಶಾಸಕ ಮತ್ತು ಸಚಿವ ಡಾ.ಕಮಲ್ ಗುಪ್ತಾ ಅವರಿಗೆ ಟಿಕೆಟ್ ನೀಡಿತ್ತು. ಸಾವಿತ್ರಿ ಅವರು ಕಾಂಗ್ರೆಸ್ ಅಭ್ಯರ್ಥಿ ರಾಮ್ ನಿವಾಸ್ ವಿರುದ್ಧ 18941 ಮತಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಗುಪ್ತಾ 17385 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್‌ ಕೂಡ ಸಾವಿತ್ರಿ ಅವರನ್ನು ಸೆಳೆಯಲು ಯತ್ನ ನಡೆಸಿತ್ತು. ಆದರೆ ಅವರು ಪಕ್ಕಾ ರಾಜಕೀಯ ಲೆಕ್ಕಾಚಾರ ಮಾಡಿ ಪಕ್ಷೇತರರಾಗಿಯೇ ಕಣಕ್ಕಿಳಿದಿದ್ದರು. ಭೂಪಿಂದರ್ ಸಿಂಗ್ ಹೂಡಾ ನನ್ನ ಅಣ್ಣನಿದ್ದಂತೆ, ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ, ಅವರಿಂದಲೇ ನಾನು ರಾಜಕೀಯವನ್ನು ಕಲಿತಿದ್ದೇನೆ. ನಾನು ರಾಜಕೀಯಕ್ಕೆ ಬಂದಾಗ ನನಗೆ ಹೆಚ್ಚು ತಿಳಿದಿರಲಿಲ್ಲ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನಾನು ಹಿಸಾರ್ ಜನರಿಗೆ ಮಾತ್ರ ಸೇವೆ ಸಲ್ಲಿಸಲು ಬಯಸುತ್ತೇನೆ. ಜನರಿಗೆ ಸೇವೆ ಸಲ್ಲಿಸಲು ರಾಜಕೀಯ ಒಂದು ವೇದಿಕೆಯಾಗಿದೆ. ಇದನ್ನೇ ನಾನು ಮಾಡಬೇಕೆಂದಿದ್ದೇನೆ” ಎಂದು ಸಾವಿತ್ರಿ ಜಿಂದಾಲ್  ನಾಪಪತ್ರ ಸಲ್ಲಿಸುವ ಮುನ್ನ ಹೇಳಿಕೆ ನೀಡಿದ್ದರು.

Advertisement

ಬಿಜೆಪಿ ನಾಯಕರಿಗೂ, ಪುತ್ರನಿಗೂ ಸಾವಿತ್ರಿ ಅವರನ್ನು ಮನವೊಲಿಸುವುದು ಸಾಧ್ಯವಾಗಿರಲಿಲ್ಲ. ಕಣಕ್ಕಿಳಿದು ಭರ್ಜರಿ ಪ್ರಚಾರ ನಡೆಸಿದ್ದ ಅವರು ತನ್ನ ಪ್ರಭಾವದ ಸಿರಿವಂತಿಕೆಯಿಂದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹರಿಯಾಣದಲ್ಲಿ ಹ್ಯಾಟ್ರಿಕ್ ಸಾಧಿಸಿ ಬಿಜೆಪಿ ಅಧಿಕಾರಕ್ಕೇರಿದ್ದು ಕ್ಷೇತ್ರದ ಜನರ ಹಿತದೃಷ್ಟಿಯಿಂದ, ಪುತ್ರನ ರಾಜಕೀಯ ಭವಿಷ್ಯದ ಕಾರಣಕ್ಕಾಗಿ ಸಾವಿತ್ರಿ ಅವರು ಸರಕಾರವನ್ನು ಬೆಂಬಲಿಸುವ ಎಲ್ಲ ಸಾಧ್ಯತೆಗಳಿವೆ.

ಓ.ಪಿ. ಜಿಂದಾಲ್ ಎಂದೇ ಪ್ರಸಿದ್ಧರಾಗಿದ್ದ ದಿವಂಗತ ಓಂ ಪ್ರಕಾಶ್ ಜಿಂದಾಲ್ ಅವರು ಹರಿಯಾಣದ ಹಿಸಾರ್‌ನವರು. ಅವರು ಜಿಂದಾಲ್ ಸಂಸ್ಥೆಯ ಅಡಿಯಲ್ಲಿ ಜಿಂದಾಲ್ ಸ್ಟೀಲ್ ಮತ್ತು ಪವರ್, JSW ಗ್ರೂಪ್ ಮತ್ತು ಜಿಂದಾಲ್ ಸ್ಟೇನ್‌ಲೆಸ್ ಲಿಮಿಟೆಡ್ ಸೇರಿದಂತೆ ದಿಗ್ಗಜ ವ್ಯಾಪಾರ ಉದ್ಯಮಗಳನ್ನು ಸ್ಥಾಪಿಸಿದ್ದರು. ಪುತ್ರ ನವೀನ್ ಜಿಂದಾಲ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಸಂಸದರಾಗಿ ಆಯ್ಕೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next