ಚಂಡೀಗಢ: ಹರಿಯಾಣ ಪರಿಶಿಷ್ಠ ಜಾತಿ ಆಯೋಗದ ವರದಿಯನ್ನು ರಾಜ್ಯ ಸರಕಾರ ಅಂಗೀಕರಿಸಿದ್ದು, ಪರಿಶಿಷ್ಟ ಜಾತಿಗೆ ಸರಕಾರಿ ಕೆಲಸಗಳನ್ನು ಶೇ.20ರಷ್ಟು ಮೀಸಲಾತಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ರವಿವಾರ ಹೇಳಿದ್ದಾರೆ.
ಅಲ್ಲದೇ ಈ ಪೈಕಿ ಅವಕಾಶ ವಂಚಿತ ಪರಿಶಿಷ್ಟ ಜಾತಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗುವುದು ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯ ಬಳಿಕ ಈ ನಿಯಮವನ್ನು ಜಾರಿ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆ ಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದೇ ವೇಳೆ ಚುನಾವಣೆ ಘೋಷಣೆಯ ಬಗ್ಗೆ ಮಾತನಾಡಿ, ಬಿಜೆಪಿ ಚುನಾವಣೆಗೆ ಸಿದ್ಧವಾಗಿದ್ದು, ಸತತ 3ನೇ ಬಾರಿ ಅಧಿಕಾರಕ್ಕೇರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಹರಿಯಾಣದಲ್ಲಿ ಅತಂತ್ರ ವಿಧಾನಸಭೆ: ಟೈಮ್ಸ್ ನೌ, ಮ್ಯಾಟ್ರೈಜ್ ಸಮೀಕ್ಷೆ
ಹರಿಯಾಣದಲ್ಲಿ ವಿಧಾನಸಭೆ ಚುನಾ ವಣೆ ಘೋಷಣೆಯಾಗುತ್ತಿದ್ದಂತೆ ಟೈಮ್ಸ್ ನೌ ಹಾಗೂ ಮ್ಯಾಟ್ರೈಜ್ ಸಮೀಕ್ಷೆ ನಡೆಸಿದ್ದು, ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿದೆ.
ಬಿಜೆಪಿ ಹಾಗೂ ಮಿತ್ರಪಕ್ಷಗಳು 37-42 ಸ್ಥಾನಗಳಲ್ಲಿ, ಕಾಂಗ್ರೆಸ್ 33-38, ಜೆಜೆಪಿ 3-8 ಹಾಗೂ ಇತರರು 7-12 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ. 90 ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ ಬಹುಮತಕ್ಕೆ 45 ಸ್ಥಾನಗಳ ಆವಶ್ಯಕತೆ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 41 ಸ್ಥಾನ ಹಾಗೂ ಮಿತ್ರಪಕ್ಷಗಳು ಸೇರಿ 43 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು 32 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದವು. ರಾಜಕೀಯ ಬಿಕ್ಕಟ್ಟುಗಳ ನಡುವೆಯೂ ಬಿಜೆಪಿ 5 ವರ್ಷ ಆಡಳಿತ ನಡೆಸುವಲ್ಲಿ ಯಶಸ್ವಿಯಾಗಿತ್ತು.