ಹಾರೂಗೇರಿ: ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ, ಹೊಡೆಯುವುದು ಇನ್ನಿತರ ಗಂಭೀರ ಆಪಾದನೆಗಳು ಶಿಕ್ಷಕರ ಮೇಲೆ ಕೇಳಿ ಬರುತ್ತಿವೆ. ಜೈನ ಧರ್ಮದಲ್ಲಿ ದಿಗಂಬರ ಸಮಾಜಕ್ಕಿಂತ ಶ್ವೇತಾಂಬರ ಪರಂಪರೆಯ ಮಕ್ಕಳಿಗೆ ಜ್ಞಾನ, ಸಂಸ್ಕಾರಯುತ ಶಿಕ್ಷಣ ಕೊಡಲಾಗುತ್ತಿದೆ. ಬಹುತೇಕ ಜೈನ ಮಕ್ಕಳಿಗೆ ಜೈನ ಧರ್ಮವೇ ಗೊತ್ತಿಲ್ಲ. ಈ ಬಗ್ಗೆ ಜೈನ ಶಿಕ್ಷಕರು ಚಿಂತನೆ ಮಾಡಬೇಕಿದೆ ಎಂದು ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯೆ ಡಾ| ಪದ್ಮಿನಿ ನಾಗರಾಜು ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ರವಿವಾರ 108 ಜ್ಞಾನೇಶ್ವರ ಮುನಿ ಮಹಾರಾಜರ 19ನೇ ಪಾವನ ವರ್ಷಾಯೋಗ-2018 ನಿಮಿತ್ತ ಬೆಳಗಾವಿ ವಿಭಾಗೀಯ 7ನೇ ಜೈನ ಶಿಕ್ಷಕರ ಸಮಾವೇಶ ಮತ್ತು ಶ್ರೀ ಜ್ಞಾನೇಶ್ವರ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲರೂ ಬೌದ್ಧ ಧರ್ಮವೇ ಜೈನ ಧರ್ಮವೆಂದು ತಿಳಿದುಕೊಂಡಿದ್ದಾರೆ. ಇನ್ನೊಂದೆಡೆ ಜೈನ ಧರ್ಮವನ್ನೇ ಮರೆಯುವಂತಾಗಿದೆ. ಈ ಬಗ್ಗೆ ಜೈನ ಶಿಕ್ಷಕರು ಚಿಂತನೆ ಮಾಡಬೇಕಿದೆ ಎಂದರು.
ಆಚಾರ್ಯ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರು ಆಶೀರ್ವಚನ ನೀಡಿ, ಧರ್ಮದ ತಳಹದಿಯ ಮೇಲೆ ಭಾರತಕ್ಕೆ ಗುರುವಿನ ಸ್ಥಾನವಿದೆ. ಶಿಕ್ಷಣದಿಂದ ಮಕ್ಕಳು ಜ್ಞಾನ, ಧಾರ್ಮಿಕ ಸಂಸ್ಕಾರ ಪಡೆಯುವಂತಾಗಬೇಕು. ಉತ್ತಮ ಸಂಸ್ಕಾರ ಪಡೆದ ಮಕ್ಕಳು ಪರಿಪೂರ್ಣ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ. ವ್ಯಸನಮುಕ್ತ ಸಮಾಜ ನಿರ್ಮಾಣವೇ ಶಿಕ್ಷಕರ ಧ್ಯೇಯವಾಗಬೇಕು. ಶಿಕ್ಷಕರು ಸಂಬಳಕ್ಕಾಗಿ ನೌಕರಿ ಮಾಡದೇ, ಕರ್ತವ್ಯವೆಂದು ತಿಳಿದು ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಬೇಕು ಎಂದರು.
ಅಖಿಲ ಕರ್ನಾಟಕ ಜೈನ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ| ಅಜೀತ ಮುರಗುಂಡೆ, ಉಪನ್ಯಾಸಕರಾದ ಗದಗ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಡಾ| ಅಪ್ಪಣ್ಣ ಹಂಜೆ, ಡಾ| ರಾಜೇಂದ್ರ ಸಾಂಗಾವೆ ಮಾತನಾಡಿದರು. ಶಿಕ್ಷಕರಿಗೆ ಶ್ರೀ ಜ್ಞಾನೇಶ್ವರ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರಿಗೆ ಜೀವಮಾನ ಸಾಧನೆ ಪ್ರಶಸ್ತಿ, ರಾಜ್ಯಮಟ್ಟದ ಪ್ರಶಸ್ತಿ, ಆದರ್ಶ ಜೈನ ಶಿಕ್ಷಕ ದಂಪತಿ ಪ್ರಶಸ್ತಿ ವಿತರಿಸಲಾಯಿತು.
ಖ್ಯಾತ ಉದ್ಯಮಿ ಜಿನ್ನಪ್ಪ ಅಸ್ಕಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಶೇಖರ ಸದಲಗಿ ಸಮಾವೇಶ ಉದ್ಘಾಟಿಸಿದರು. ಚಡಚಣ ಶಿಕ್ಷಣಾಧಿಕಾರಿ ಮಹಾವೀರ ಮಾಲಗಾಂವೆ, ಸಿದ್ದಪ್ಪ ನಾಗನೂರ, ಸಾಹಿತಿ ಡಾ| ಪಿ.ಜಿ. ಕೆಂಪಣ್ಣವರ, ಶ್ರೀಪಾಲ ದಟವಾಡ, ಸಾತಪ್ಪಗೊಂಗಡಿ, ಜೆ.ಪಿ. ತಂಗಡಿ, ವಿ.ಬಿ. ಜೋಡಟ್ಟಿ, ಡಿ.ಎಸ್. ಡಿಗ್ರಜ್, ವಿಜಯಪುರ ಸಹಾಯಕ ನಿರ್ದೇಶಕ ಸಂಜು ಹುಲ್ಲೋಳ್ಳಿ, ಅರಿಹಂತ ರಾಮತೀರ್ಥ, ಬಿ.ಬಿ. ಕರ್ಣವಾಡಿ, ಸುರೇಶ ಬದ್ನಿಕಾಯಿ, ಬಾಳಪ್ಪ ತಮದಡ್ಡಿ, ಶ್ರೀಧರ ಸದಲಗಿ, ಎ.ಜೆ. ಚೌಗಲಾ, ವಿ.ಡಿ. ಉಪಾಧ್ಯೆ ಇದ್ದರು. ಶ್ರೀಕಾಂತ ಖೋಂಬಾರೆ ಸ್ವಾಗತಿಸಿದರು. ಆದಿನಾಥ ಹಳ್ಳೂರ ನಿರೂಪಿಸಿದರು. ಶ್ರೀಕಾಂತ ತುರಮುರೆ ವಂದಿಸಿದರು.