ತಿರುವನಂತಪುರಂ: 50 ವರ್ಷದ ಮಹಿಳೆಯರಿಬ್ಬರು ಶಬರಿ ಮಲೆ ಪ್ರವೇಶಿಸಿದ ಬೆನ್ನಲ್ಲೇ ಬುಧವಾರ ಕೇರಳ ರಾಜ್ಯಾಧ್ಯಂತ ಅಯ್ಯಪ್ಪ ಭಕ್ತರು ಮತ್ತು ವಿವಿಧ ಸಂಘಟನೆಗಳು ತೀವ್ರ ಆಕ್ರೋಶ ಹೊರ ಹಾಕಿದ್ದು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಗುರುವಾರ ಕೆಲ ಸಂಘಟನೆಗಳು ಕೇರಳ ಬಂದ್‌ಗೆ ಕರೆ ನೀಡಿವೆ.
ತಿರುವನಂತಪುರಂ ಸೇರಿದಂತೆ ಹಲವೆಡೆ ಪೊಲೀಸರತ್ತ ಕಲ್ಲು ತೂರಾಟ ನಡೆಸಲಾಗಿದೆ. ಹಲವು ಕಡೆಗಳಲ್ಲಿ ರಸ್ತೆ ತಡೆ ನಡೆಸಿ ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಲಾಗಿದೆ.
ಮಹಿಳೆಯರಿಗೆ ಪ್ರವೇಶ ನೀಡಲು ಸರಕಾರ ಮತ್ತು ಪೊಲೀಸರು ಸಹಕಾರ ನೀಡಿರುವುದನ್ನು ಖಂಡಿಸಿ ಶಬರಿಮಲಾ ಕರ್ಮ ಸಮಿತಿ ಗುರುವಾರ ಬೆಳಗ್ಗೆ 6 ರಿಂದ ಸಂಜೆ 6 ರ ವರೆಗೆ ರಾಜ್ಯಾಧ್ಯಂತ ಹರತಾಳಕ್ಕೆ ಕರೆ ನೀಡಿದೆ.
ಇನ್ನೊಂದೆಡೆ ರಾಜ್ಯಾಧ್ಯಂತ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದಿದ್ದು, ಭಾರೀ ಪ್ರತಿಭಟನೆ ಆರಂಭಿಸಿದ್ದಾರೆ. ನಾಳಿನ ಬಂದ್ ಕರೆಗೆ ಬೆಂಬಲ ಸೂಚಿಸಿದ್ದಾರೆ.
ರಾಜ್ಯದೆಲ್ಲೆಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಎಲ್ಲಾ ಸಚಿವರುಗಳಿಗೆ ಭದ್ರತೆ ಹೆಚ್ಚಿಸಲಾಗಿದೆ.
ಬುಧವಾರ ನಸುಕಿನ 3.45 ರ ವೇಳೆ ಬಿಂದು ಎನ್ನುವ ವಕೀಲೆ ಮತ್ತು ಸರ್ಕಾರಿ ಉದ್ಯೋಗಿ ಕನಕದುರ್ಗಾ ಎನ್ನುವ ಇಬ್ಬರು 50 ವರ್ಷದ ಒಳಗಿನ ಮಹಿಳೆಯರು ಪ್ರವೇಶಿದ್ದರು.