Advertisement

IPL 2023: ಕೆ-ಜಿ-ಎಫ್ ಶೋಗೆ ಸಡ್ಡು ಹೊಡೆದ ಲಕ್ನೋ; ರೋಚಕ ಒಂದು ವಿಕೆಟ್‌ ಜಯ

01:44 AM Apr 11, 2023 | Team Udayavani |

ಬೆಂಗಳೂರು: ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಸೋಮವಾರ ರಾತ್ರಿ ರಂಗೇರಿಸಿಕೊಂಡ “ಕೆ-ಜಿ-ಎಫ್ ಬ್ಯಾಟಿಂಗ್‌’ ಶೋಗೆ ಮಾರ್ಕಸ್‌ ಸ್ಟೋಯಿನಿಸ್‌-ನಿಕೋಲಸ್‌ ಪೂರಣ್‌ ಸೇರಿಕೊಂಡು ತಣ್ಣೀರೆರಚಿದರು. ಕೊಹ್ಲಿ-ಗ್ಲೆನ್‌ ಮ್ಯಾಕ್ಸ್‌ವೆಲ್‌-ಫಾ ಡು ಪ್ಲೆಸಿಸ್‌ ಅವರ ಬಿರುಸಿನ ಅರ್ಧ ಶತಕ ಸಾಹಸದ ಹೊರತಾಗಿಯೂ ಲಕ್ನೋ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ ಒಂದು ವಿಕೆಟ್‌ನ ಸೋಲನುಭವಿಸಿತು.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ಎರಡೇ ವಿಕೆಟಿಗೆ 212 ರನ್‌ ರಾಶಿ ಹಾಕಿದರೆ, ಲಕ್ನೋ ಓವರ್‌ಗಳಲ್ಲಿ 20 ಓವರ್‌ಗಳಲ್ಲಿ 9 ವಿಕೆಟಿಗೆ 213 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ಬೃಹತ್‌ ಮೊತ್ತದ ಚೇಸಿಂಗ್‌ ವೇಳೆ ಲಕ್ನೋ 3ನೇ ಎಸೆತದಲ್ಲೇ ಕೈಲ್‌ ಮೇಯರ್ ವಿಕೆಟ್‌ ಕಳೆದುಕೊಂಡಿತು. ಸಿರಾಜ್‌ ವಿಕೆಟ್‌ ಟೇಕರ್‌. ವೇಯ್ನ ಪಾರ್ನೆಲ್‌ ಒಂದೇ ಓವರ್‌ನಲ್ಲಿ ದೀಪಕ್‌ ಹೂಡಾ, ಕೃಣಾಲ್‌ ಪಾಂಡ್ಯ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. 23ಕ್ಕೆ 3 ವಿಕೆಟ್‌ ಬಿತ್ತು. ಈ ಹಂತದಲ್ಲಿ ಸ್ಟೋಯಿನಿಸ್‌ ಸಿಡಿದು ನಿಂತರು. 30 ಎಸೆತಗಳಿಂದ 65 ರನ್‌ ಚಚ್ಚಿ ಭೀತಿ ಮೂಡಿಸಿದರು (6 ಫೋರ್‌, 5 ಸಿಕ್ಸರ್‌). ನಿಕೋಲಸ್‌ ಪೂರಣ್‌ ಕೇವಲ 15 ಎಸೆತಗಳಿಂದ ಅರ್ಧ ಶತಕ ಬಾರಿಸಿ ಸುಂಟರಗಾಳಿಯಾದರು. ಆರ್‌ಸಿಬಿ ಕೈಲಿದ್ದ ಗೆಲುವನ್ನು ಕಸಿದರು. ಪೂರಣ್‌ ಗಳಿಕೆ 19 ಎಸೆತಗಳಿಂದ 62 ರನ್‌ (4 ಬೌಂಡರಿ, 7 ಸಿಕ್ಸರ್‌).

ಕೊಹ್ಲಿ ಬಿರುಸಿನ ಆಟ
ವಿರಾಟ್‌ ಕೊಹ್ಲಿ ಆಕ್ರಮಣಕಾರಿ ಆಟದ ಮೂಲಕ ಲಕ್ನೋ ಬೌಲರ್‌ಗಳ ಮೇಲೆರಗಿದರು. ಆಗ ನಾಯಕ ಫಾ ಡು ಪ್ಲೆಸಿಸ್‌ ಪ್ರೇಕ್ಷಕನಾಗಿ ಉಳಿದರು. ಕೊಹ್ಲಿ ಪರಾಕ್ರಮದಿಂದ ಹತ್ತರ ಸರಾಸರಿಯಲ್ಲಿ ರನ್‌ ಪೇರಿಸತೊಡಗಿದ ಆರ್‌ಸಿಬಿ, ಪವರ್‌ ಪ್ಲೇಯಲ್ಲಿ 54 ರನ್‌ ರಾಶಿ ಹಾಕಿತು. ಇದರಲ್ಲಿ ಕೊಹ್ಲಿ ಕೊಡುಗೆ 42 ರನ್‌. ಇದು ಐಪಿಎಲ್‌ ಪವರ್‌ ಪ್ಲೇ ವೇಳೆ ಕೊಹ್ಲಿ ಬಾರಿಸಿದ ಗರಿಷ್ಠ ಮೊತ್ತ.

ಆವೇಶ್‌ ಖಾನ್‌ ಮತ್ತು ಮಾರ್ಕ್‌ ವುಡ್‌ ಅವರನ್ನು ಟಾರ್ಗೆಟ್‌ ಮಾಡಿಕೊಂಡ ಕೊಹ್ಲಿ ಇನ್ನಷ್ಟು ಬಿರುಸು ಪಡೆಯುತ್ತ ಹೋದರು. ವುಡ್‌ ಎಸೆತವನ್ನು ಡೀಪ್‌ ವಿಕೆಟ್‌ ಮೂಲಕ ಸಿಕ್ಸರ್‌ಗೆ ರವಾನಿಸಿದ ಕೊಹ್ಲಿ, 5.3 ಓವರ್‌ಗಳಲ್ಲಿ ಆರ್‌ಸಿಬಿಯ 50 ರನ್‌ ಪೂರ್ತಿಗೊಳಿಸಿದರು. ವುಡ್‌ ಅವರ ಮೊದಲ ಓವರ್‌ನಲ್ಲಿ 14 ರನ್‌ ಸೋರಿ ಹೋಯಿತು.
35 ಎಸೆತಗಳಲ್ಲಿ ವಿರಾಟ್‌ ಕೊಹ್ಲಿ ಅವರ ಅರ್ಧ ಶತಕ ಪೂರ್ತಿಗೊಂಡಿತು. ಆಗ ಡುಪ್ಲೆಸಿಸ್‌ 19 ರನ್‌ನಲ್ಲಿದ್ದರು. ಇದು ಪ್ರಸಕ್ತ ಋತುವಿನಲ್ಲಿ ಕೊಹ್ಲಿ ದಾಖಲಿಸಿದ 2ನೇ ಅರ್ಧ ಶತಕ. ಮುಂಬೈ ವಿರುದ್ಧ ಅಜೇಯ 82 ರನ್‌ ಬಾರಿಸಿದ್ದರು.
10 ಓವರ್‌ ಅಂತ್ಯಕ್ಕೆ ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 87 ರನ್‌ ಗಳಿಸಿತು. ಈ ಜೋಡಿ ಯನ್ನು ಮುರಿಯಲು ಅಮಿತ್‌ ಮಿಶ್ರಾ ಬರಬೇಕಾಯಿತು. ಅದು ಪಂದ್ಯದ 12ನೇ ಹಾಗೂ ಮಿಶ್ರಾ ಅವರ ಮೊದಲ ಓವರ್‌ ಆಗಿತ್ತು. 3ನೇ ಎಸೆತವನ್ನು ಪುಲ್‌ ಮಾಡಲು ಹೋದ ಕೊಹ್ಲಿ ಡೀಪ್‌ ಮಿಡ್‌ ವಿಕೆಟ್‌ನಲ್ಲಿದ್ದ ಸ್ಟೋಯಿನಿಸ್‌ ಕೈಗೆ ಕ್ಯಾಚ್‌ ನೀಡಿದರು. ಕೊಹ್ಲಿ ಗಳಿಕೆ 44 ಎಸೆತಗಳಿಂದ 61 ರನ್‌. 4 ಬೌಂಡರಿ, 4 ಸಿಕ್ಸರ್‌ ಸಿಡಿಸಿ ಆರ್‌ಸಿಬಿ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು. ಆಗ 11.3 ಓವರ್‌ಗಳಿಂದ 96 ರನ್‌ ಒಟ್ಟುಗೂಡಿತ್ತು.

Advertisement

ಕೊಹ್ಲಿ ನಿರ್ಗಮನದ ಬಳಿಕ ಡು ಪ್ಲೆಸಿಸ್‌ ಬಿರುಸಿನ ಆಟಕ್ಕೆ ಮುಂದಾದರು. ಕೊಹ್ಲಿಯಂತೆ ದ್ವಿತೀಯ ಅರ್ಧ ಶತಕ ಪೂರ್ತಿಗೊಳಿಸಿದರು. ಮುಂಬೈ ವಿರುದ್ಧ 73 ರನ್‌ ಬಾರಿಸಿದ್ದ ಡು ಪ್ಲೆಸಿಸ್‌ ಇಲ್ಲಿ 46 ಎಸೆತಗಳಿಂದ 79 ರನ್‌ ಹೊಡೆದರು (5 ಬೌಂಡರಿ, 5 ಸಿಕ್ಸರ್‌). ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೂಡ ಜೋಶ್‌ನಲ್ಲಿದ್ದರು. ಅವರಿಂದ 24 ಎಸೆತಗಳಲ್ಲಿ ಅರ್ಧ ಶತಕ ಪೂರ್ತಿಯಾಯಿತು. 29 ಎಸೆತಗಳಿಂದ 59 ರನ್‌ (3 ಬೌಂಡರಿ, 6 ಸಿಕ್ಸರ್‌) ಸಿಡಿಸಿ ಕೊನೆಯ ಓವರ್‌ನಲ್ಲಿ ಪೆವಿಲಿಯನ್‌ ಸೇರಿಕೊಂಡರು.

15 ಓವರ್‌ ಅಂತ್ಯಕ್ಕೆ ಆರ್‌ಸಿಬಿ ಒಂದು ವಿಕೆಟಿಗೆ 137 ರನ್‌ ಗಳಿಸಿತ್ತು. ಡೆತ್‌ ಓವರ್‌ಗಳಲ್ಲಿ ಜತೆಗೂಡಿದ ಡು ಪ್ಲೆಸಿಸ್‌-ಮ್ಯಾಕ್ಸ್‌ವೆಲ್‌ 42 ಎಸೆತಗಳಲ್ಲಿ ಶತಕದ ಜತೆಯಾಟ ಪೂರ್ತಿಗೊಳಿಸಿ ಆರ್‌ಸಿಬಿ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ದ್ವಿತೀಯ ವಿಕೆಟಿಗೆ 50 ಎಸೆತಗಳಲ್ಲಿ 115 ರನ್‌ ಹರಿದು ಬಂತು.

ಹೈದರಾಬಾದ್‌ ವಿರುದ್ಧ ಕ್ಲಿಕ್‌ ಆದ ಸ್ಪಿನ್ನರ್‌ಗಳಾದ ಕೃಣಾಲ್‌ ಪಾಂಡ್ಯ ಮತ್ತು ರವಿ ಬಿಷ್ಣೋಯಿ ಇಲ್ಲಿ ವಿಕೆಟ್‌ ಕೀಳಲು ವಿಫ‌ಲರಾದರು.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಸಿ ಸ್ಟೋಯಿನಿಸ್‌ ಬಿ ಮಿಶ್ರಾ 61
ಫಾ ಡು ಪ್ಲೆಸಿಸ್‌ ಔಟಾಗದೆ 79
ಗ್ಲೆನ್‌ ಮ್ಯಾಕ್ಸ್‌ವೆಲ್‌ ಬಿ ವುಡ್‌ 59
ದಿನೇಶ್‌ ಕಾರ್ತಿಕ್‌ ಔಟಾಗದೆ 1
ಇತರ 12
ಒಟ್ಟು (20 ಓವರ್‌ಗಳಲ್ಲಿ 2 ವಿಕೆಟಿಗೆ) 212
ವಿಕೆಟ್‌ ಪತನ: 1-96, 2-211.
ಬೌಲಿಂಗ್‌: ಜೈದೇವ್‌ ಉನಾದ್ಕತ್‌ 2-0-27-0
ಆವೇಶ್‌ ಖಾನ್‌ 4-0-53-0
ಕೃಣಾಲ್‌ ಪಾಂಡ್ಯ 4-0-35-0
ಮಾರ್ಕ್‌ ವುಡ್‌ 4-1-32-1
ರವಿ ಬಿಷ್ಣೋಯಿ 4-0-39-0
ಅಮಿತ್‌ ಮಿಶ್ರಾ 2-0-16-1

ಲಕ್ನೋ ಸೂಪರ್‌ ಜೈಂಟ್ಸ್‌
ಕೈಲ್‌ ಮೇಯರ್ ಬಿ ಸಿರಾಜ್‌ 0
ಕೆ.ಎಲ್‌. ರಾಹುಲ್‌ ಸಿ ಕೊಹ್ಲಿ ಬಿ ಸಿರಾಜ್‌ 18
ದೀಪಕ್‌ ಹೂಡಾ ಸಿ ಕಾರ್ತಿಕ್‌ ಬಿ ಪಾರ್ನೆಲ್‌ 9
ಕೃಣಾಲ್‌ ಪಾಂಡ್ಯ ಸಿ ಕಾರ್ತಿಕ್‌ ಬಿ ಪಾರ್ನೆಲ್‌ 0
ಮಾರ್ಕಸ್‌ ಸ್ಟೋಯಿನಿಸ್‌ಸಿ ಶಾಬಾಜ್‌ ಬಿ ಕಣ್‌ì 65
ನಿಕೋಲಸ್‌ ಪೂರಣ್‌ ಸಿ ಶಾಬಾಜ್‌ ಬಿ ಸಿರಾಜ್‌ 62
ಆಯುಶ್‌ ಬದೋನಿ ಹಿಟ್‌ ವಿಕೆಟ್‌ ಬಿ ಪಾರ್ನೆಲ್‌ 30
ಜೈದೇವ್‌ ಉನಾದ್ಕತ್‌ ಸಿ ಪ್ಲೆಸಿಸ್‌ ಬಿ ಪಟೇಲ್‌ 9
ಮಾರ್ಕ್‌ ವುಡ್‌ ಬಿ ಪಟೇಲ್‌ 1
ರವಿ ಬಿಷ್ಣೋಯಿ ಔಟಾಗದೆ 3
ಆವೇಶ್‌ ಖಾನ್‌ ಔಟಾಗದೆ 0
ಇತರ 16
ಒಟ್ಟು ( 20 ಓವರ್‌ಗಳಲ್ಲಿ 9 ವಿಕೆಟ್‌ಗೆ) 213
ವಿಕೆಟ್‌ ಪತನ: 1-1, 2-23, 3-23, 4-99, 5-105, 6-189, 7-206, 8-209, 9-212
ಬೌಲಿಂಗ್‌: ಮೊಹಮ್ಮದ್‌ ಸಿರಾಜ್‌ 4-0-22-3
ಡೇವಿಡ್‌ ವಿಲ್ಲಿ 4-0-32-0
ವೇಯ್ನ ಪಾರ್ನೆಲ್‌ 4-0-41-3
ಹರ್ಷಲ್‌ ಪಟೇಲ್‌ 4-0-48-2
ಕಣ್‌ì ಶರ್ಮ 3-0-48-1
ಶಾಬಾಜ್‌ ಅಹ್ಮದ್‌ 1-0-15-0

 

 

Advertisement

Udayavani is now on Telegram. Click here to join our channel and stay updated with the latest news.

Next