ಶ್ರೀರಂಗಪಟ್ಟಣ : ಶಿವಮೊಗ್ಗದಲ್ಲಿ ಹತ್ಯೆಯಾಗಿದ್ದ ಬಜರಂಗದಳದ ಕಾರ್ಯಕರ್ತ ಹರ್ಷ ಚಿತಾಭಸ್ಮ ರಥಯಾತ್ರೆಗೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿರುವುದಕ್ಕೆ ಗುರುವಾರ ಕಾಳಿ ಮಠದ ಋಷಿಕುಮಾರ ಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ಶಿವಮೊಗ್ಗದಿಂದ ಶೀರಂಗಪಟ್ಟಣದವರೆಗೆ ಚಿತಾಭಸ್ಮದೊಂದಿಗೆ ಹೊರಟಿದ್ದ ಕಾಳಿಸ್ವಾಮಿ ಅವರಿಗೆ ರಥಯಾತ್ರೆ ನಡೆಸಲು ಕಾನೂನು ಸುವ್ಯವಸ್ಥೆ ಕಾರಣಕ್ಕಾಗಿ ಅವಕಾಶ ನೀಡಲಿಲ್ಲ.
ರಾಜ್ಯಸರ್ಕಾರ ರಥಯಾತ್ರೆಗೆ ಅವಕಾಶ ನೀಡಿಲ್ಲ. ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ.ಮುಖ್ಯಮಂತ್ರಿಗಳು ಮತ್ತು ಗೃಹಸಚಿವರಿಗೆ ನಮಗೆ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ.ಹಿಂದೂಗಳ ಅಸ್ಥಿಗೆ ಭದ್ರತೆ ನೀಡದ ಈ ಸರ್ಕಾರ ಹಿಂದುಗಳ ಅಸ್ತಿತ್ವ ಕಾಯಲ್ಲ.ಸಂತ್ರಸ್ತ ಕುಟುಂಬಕ್ಕೆ ಕೇವಲ ಹಣದ ಸಹಾಯ ಜನಸಾಮಾನ್ಯರನ್ನು ಮರಳು ಮಾಡುವ ತಂತ್ರವಷ್ಟೆ.ಇಡೀ ರಾತ್ರಿ ಪೊಲೀಸರ ಬೆಂಗಾವಲಿನಲ್ಲಿ ನನ್ನನ್ನು ನಾಗಮಂಗಲದ ಪ್ರವಾಸಿ ಮಂದಿರಕ್ಕೆ ಕರೆತರಲಾಗಿದೆ ಎಂದು ಕಾಳಿ ಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ಕುಟುಂಬದ ಸದಸ್ಯರು ಹಸ್ತಾಂತರಿಸಿದ ಬಳಿಕ ಮಂಡ್ಯ ಜಿಲ್ಲೆ ನಾಗಮಂಗಲದ ಪ್ರವಾಸಿ ಮಂದಿರದಲ್ಲಿ ಹರ್ಷನ ಚಿತಾಭಸ್ಮಕ್ಕೆ ಕಾಳಿಸ್ವಾಮಿ ಪೂಜೆ ಸಲ್ಲಿಸಿ ಕಾವೇರಿ ನದಿಯಲ್ಲಿ ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ ವಿಸರ್ಜನೆ ಮಾಡಲಾಗಿದೆ.
ನಾನು ಇಲ್ಲಿಯೇ ಉಪವಾಸ ಸತ್ಯಗ್ರಹ ಮಾಡುತ್ತೇನೆ ಎಂದು ಹಠ ಹಿಡಿದಿದ್ದ ಕಾಳಿ ಸ್ವಾಮೀಜಿ ಅವರಿಗೆ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರು ದೂರವಾಣಿ ಮೂಲಕ ಮನವೊಲಿಸಿದರು. ಆ ಬಳಿಕವೇ ಕಾಳಿಸ್ವಾಮಿ ಶ್ರೀರಂಗಪಟ್ಟಣಕ್ಕೆ ತೆರಳಿದರು.
ಪ್ರಮೋದ್ ಮುತಾಲಿಕ್ ಭಾಗಿ
ಪಶ್ಚಿಮವಾಹಿನಿಯಲ್ಲಿ ನಡೆದ ಅಸ್ಥಿ ವಿಸರ್ಜನೆ, ಸದ್ಗತಿ ಪೂಜಾ ಕಾರ್ಯದಲ್ಲಿ ಪ್ರಮೋದ್ ಮುತಾಲಿಕ್ ಭಾಗಿಯಾದರು.ಹರ್ಷ ಅಸ್ಥಿಯನ್ನ ಕಾಳಿ ಸ್ವಾಮಿ. ತಲೆ ಮೇಲೆ ಹೊತ್ತು ತಂದರು. ಈ ವೇಳೆ ಕಾವೇರಿ ನದಿಯಲ್ಲಿ ಮುತಾಲಿಕ್ ಸ್ನಾನ ಮಾಡಿದರು. ಪಶ್ಚಿಮವಾಹಿನಿಯ ಅರಳಿ ಕಟ್ಟೆ ಬಳಿ ಅಸ್ಥಿ ವಿಸರ್ಜನಾ ಕಾರ್ಯ ನಡೆಸಲಾಯಿತು.
ಪ್ರಧಾನ ಅರ್ಚಕರಾದ ಸಂದೀಪ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಸಲಾಯಿತು. ದರ್ಮತಿ ನಾರಾಯಣ ಹೋಮ, ಅಸ್ಥಿ ಸಂಚಯನ, ವಿಸರ್ಜನೆ, ಪಂಚಾಮೃತ ಅಭಿಷೇಕ, ದಶದಾನ, ಪುಣ್ಯಃ ಸೇರಿದಂತೆ ಹಲವು ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು.