ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂಭಾಗದಲ್ಲಿ ನಡೆದ ಘಟನೆಯನ್ನು ಹಿಂದೂ ಹಾಗೂ ಮುಸ್ಲಿಂ ಧರ್ಮ ಗುರುಗಳು ಖಂಡಿಸಿದ್ದು, ತಪ್ಪು ಮಾಡಿರುವ ಕಿಡಿಗೇಡಿಗಳಿಗೆ ಶಿಕ್ಷೆಯಾಗಲಿ. ಅಮಾಯಕರಿಗೆ ಶಿಕ್ಷೆಯಾಗಬಾರದು. ಧರ್ಮದ ಹೆಸರಲ್ಲಿನ ಅಶಾಂತಿ ಮೂಡಿಸಿ ಕಾನೂನು ಕೈಗೆತ್ತಿಕೊಂಡವರ ಬೆಂಬಲಕ್ಕೆ ಯಾರೂ ನಿಲ್ಲಬಾರದು. ಪ್ರತಿಯೊಬ್ಬರು ಶಾಂತಿ ನೆಲೆಸಲು ಶ್ರಮಿಸಬೇಕು ಎಂದು ಪ್ರತಿಪಾದಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಧರ್ಮಗುರು ಹಜರತ್ ಸೈಯದ್ ಅಹ್ಮದ್ ರಜಾ ಸರಖಾಜಿ ಮಾತನಾಡಿ, ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಧರ್ಮದ ಭಾವನೆಗೆ ಧಕ್ಕೆಯುಂಟು ಮಾಡಿದ ವ್ಯಕ್ತಿಯನ್ನು ಬಂಧಿಸಿದ ನಂತರ ಪ್ರತಿಭಟನೆ ಮಾಡಿರುವುದು ಸರಿಯಲ್ಲ. ಅಲ್ಲದೆ ಕಾನೂನು ಕೈಗೆತ್ತಿಕೊಂಡು ಸಾರ್ವಜನಿಕ ಆಸ್ತಿ ಹಾನಿ ಮಾಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಘಟನೆಗೆ ಪ್ರಚೋದನೆ ನೀಡಿದವರು, ಕಲ್ಲು ತೂರಾಟ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಭಾರತದ ಕಾನೂನು, ಸಂವಿಧಾನ ಅಂತಹವರಿಗೆ ಶಿಕ್ಷೆ ನೀಡುತ್ತದೆ ಎನ್ನುವ ಗೌರವ ಹಾಗೂ ಭರವಸೆಯಿದೆ. ಆದರೆ ಘಟನೆ ನೋಡಲು ಬಂದವರು, ಯಾವುದೇ ಗಲಾಟೆ ಮಾಡದವರನ್ನು ಬಂಧಿಸುವುದು, ಅಂತವರಿಗೆ ಶಿಕ್ಷೆಯಾಗದಂತೆ ಮುತುವರ್ಜಿ ವಹಿಸಬೇಕು ಎಂದು ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಮನವಿ ಮಾಡುವುದಾಗಿ ತಿಳಿಸಿದರು.
ಈದ್ಗಾ ಮೈದಾನದ ಗಲಾಟೆ ನಂತರ ಹುಬ್ಬಳ್ಳಿಯಲ್ಲಿ ಯಾವುದೇ ಮತೀಯ ಗಲಭೆಗಳಾಗಿಲ್ಲ. ಎಲ್ಲಾ ಧರ್ಮದವರೂ ಸಹೋದರರಂತೆ ಜೀವನ ನಡೆಸುವಾಗ ಈ ಘಟನೆ ನಡೆಯಬಾರದಿತ್ತು. ಎಲ್ಲಾ ಧರ್ಮಗಳಲ್ಲೂ ಬೆರಳೆಣಿಕೆ ಜನ ಶಾಂತಿ ಕದಡುವ ಕೆಲಸ ಮಾಡುತ್ತಾರೆ. ಇದರಿಂದಾಗಿ ಇಡೀ ಸಮಾಜವನ್ನು ದೂರುವುದು, ತಪ್ಪಿಸ್ಥ ಸ್ಥಾನದಲ್ಲಿ ನೋಡುವುದು ಸರಿಯಲ್ಲ ಎಂದರು.
ಬೆಂಗಳೂರಿನ ಶ್ರೀ ಚನ್ನಬಸವೇಶ್ವರ ಜ್ಞಾನ ಪೀಠದ ಶ್ರೀ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಎಲ್ಲಾ ಸಮಾಜಗಳು ಇಂತಹ ವ್ಯಕ್ತಿಗಳಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚರ ಇರಬೇಕು. ಧಾರ್ಮಿಕ ಘಟನೆಗಳ ಹಿಂದೆ ರಾಜಕಾರಣಗಳ ಕುತಂತ್ರ ಅಡಗಿರುತ್ತದೆ. ಅಧಿಕಾರಕ್ಕಾಗಿ ಏನು ಬೇಕಾದರೂ ಅವರು ಸಿದ್ಧರಿರುತ್ತಾರೆ. ತಮ್ಮ ಧರ್ಮ ಮೈಗೂಡಿಸಿಕೊಂಡು ಇನ್ನೊಂದು ಧರ್ಮವನ್ನು ಗೌರವಿಸುವವನು ನಿಜವಾದ ಮನುಷ್ಯ. ಮಠದಲ್ಲಿ ನಮಾಜ್, ದರ್ಗಾದಲ್ಲಿ ಲಿಂಗ ಪೂಜೆ ನಡೆದಾಗ ನಿಜವಾದ ಸಮಾನತೆ, ಸಾಮರಸ್ಯ ಮೂಡಲು ಸಾಧ್ಯ ಎಂದರು.
ಇಲ್ಲಿನ ಹೊಸಮಠದ ಶ್ರೀ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹಾಗೂ ಬೈಲಹೊಂಗಲದ ಶ್ರೀ ಶಿವಾನಂದ ಪರಮಹಂಸ ಸ್ವಾಮೀಜಿ ಮಾತನಾಡಿ, ಯಾವ ಧರ್ಮವೂ ಹಿಂಸೆ ಬಯಸಲ್ಲ. ಆದರೆ ಕೆಲವರು ತಮ್ಮ ಸ್ವ ಹಿತಾಸಕ್ತಿಗಾಗಿ ಧರ್ಮದ ಹೆಸರಿನಲ್ಲಿ ಅಶಾಂತಿ ಮೂಡಿಸಿ ಸಾಮರಸ್ಯ ಕದಡುವ ಕೆಲಸ ಮಾಡುತ್ತಾರೆ. ಇಂತಹ ಕೃತ್ಯಗಳಿಗೆ ಬಡವರ ಮಕ್ಕಳನ್ನು ಬಳಸಿಕೊಂಡು ಅವರ ಪ್ರಾಣದ ಜತೆ ಆಟವಾಡುತ್ತಿದ್ದಾರೆ. ಯುವಕರು ಇಂತಹ ಕೃತ್ಯಗಳ ಬಗ್ಗೆ ಎಚ್ಚರ ವಹಿಸಬೇಕು. ಕಾನೂನು ಕೈಗೆತ್ತಿಕೊಂಡವರ ಬಗ್ಗೆ ಯಾರ ಕಾಳಜಿ ಅಥವಾ ಕನಿಕರವಿಲ್ಲ. ಅಂಥಹವರಿಗೆ ಕಠಿಣ ಶಿಕ್ಷೆಯಾಗಲಿ. ಮುಂದೆ ಇಂತಹ ಕೃತ್ಯ ಎಸಗುವವರಿಗೆ ಇದು ಪಾಠವಾಗಬೇಕು ಎಂದರು. ಪ್ರಮುಖರಾದ ಸೈಯದ್ ಅಹ್ಮದ್ ನಿಸಾರ್ ಅಹ್ಮದ್ ಖಾದ್ರಿ, ಮೊಹ್ಮದ್ ಆನ್ಸಾರ್ ಮುಕ್ರಿ ಖಾದ್ರಿ, ಹಫಿಸ್ ಆಲಿಮುದ್ದಿನ್ ತಜ್ವಿ, ಮುಸ್ಲಿಂ ಸಮಾಜದ ಮುಖಂಡ ಅಷ್ಪಾಕ್ ಕುಮಟಾಕರ ಸೇರಿದಂತೆ ಇನ್ನಿತರರಿದ್ದರು.
ಹಳೇ ಹುಬ್ಬಳ್ಳಿ ಠಾಣೆ ಮುಂಭಾಗದ ಪೊಲೀಸರ ವಾಹನ ಏರಿ ಮಾತನಾಡುತ್ತಿದ್ದ ವ್ಯಕ್ತಿ ಪಠಾಣ ಎನ್ನುವ ವ್ಯಕ್ತಿ ಮೌಲ್ವಿ ಅಲ್ಲ. ಆದರೆ ಮಾಧ್ಯಮಗಳಲ್ಲಿ ಅವನನ್ನು ಮೌಲ್ವಿ ಎಂದು ತೋರಿಸಲಾಗುತ್ತಿದೆ. ಮುಸ್ಲಿಂ ಧರ್ಮದಲ್ಲಿ ದಾಡಿ ಬಿಟ್ಟು, ಜುಬ್ಬ, ಟೋಪಿ ಧರಿಸಿದಾಕ್ಷಣ ಮೌಲ್ವಿ ಆಗಲ್ಲ. ಮೌಲ್ವಿ ಅಥಾವ ಸೂಫಿ ಸಂತರು ಇಂತಹ ಕೃತ್ಯ ಮಾಡಲು ಸಾಧ್ಯವಿಲ್ಲ.
-ಅಬ್ದುಲ್ ರಜಾಕ್ ಖಾದ್ರಿ ಸುತಾರಿ, ಮುಸ್ಲಿಂ ಧರ್ಮಗುರು.