ಹಾವೇರಿ: ಪಂಚಮಸಾಲಿ ಜಗದ್ಗುರು ಪೀಠ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಸಹಯೋಗದಲ್ಲಿ ಜನವರಿ 14 ಹಾಗೂ 15ರಂದು ಹರಿಹರದ ಪಂಚಮಸಾಲಿಜಗದ್ಗುರು ಪೀಠದಲ್ಲಿ ಹರ ಜಾತ್ರಾ ಮಹೋತ್ಸವ ಹಾಗೂ ಬೆಳ್ಳಿ ಬೆಡಗು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ ಹೆಚ್ಚಿನ ಜನರು ಭಾಗವವಹಿಸಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಕಾರ್ಯದರ್ಶಿ ಸಿ.ಆರ್. ಬಳ್ಳಾರಿ ಕೋರಿದರು. ಮಂಗಳವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಸ್ಥಾಪನೆಯಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಮಾಜವನ್ನು ಸಂಘಟಿಸುವ ಸಲುವಾಗಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಹರ ಜಾತ್ರಾ ಮಹೋತ್ಸವ ಮತ್ತು ಬೆಳ್ಳಿ ಬೆಡಗು ಕಾರ್ಯಕ್ರಮವನ್ನು ಅದ್ಧೂರಿಯಿಂದ ಆಚರಿಸುವ ಸಲುವಾಗಿ ರಾಜ್ಯ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಸಮಾಜದ ಜನರಿಗೆ ತಿಳಿಸಲಾಗುತ್ತಿದೆ. ಈಗಾಗಲೇ ಶ್ರೀಗಳು ಸಹ ಗ್ರಾಮಗಳಿಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭಕ್ತರನ್ನು ಆಹ್ವಾನಿಸುತ್ತಿದ್ದಾರೆ ಎಂದರು.
ಹರಿಹರ ಪೀಠದ ಟ್ರಸ್ಟಿ ಪಿ.ಡಿ. ಶಿರೂರು ಮಾತನಾಡಿ, ಹರ ಜಾತ್ರಾ ಮಹೋತ್ಸವ ಮತ್ತು ಬೆಳ್ಳಿ ಬೆಡಗು ಕಾರ್ಯಕ್ರಮದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. ಹಾವೇರಿ ಜಿಲ್ಲೆಯ ಪ್ರತಿ ತಾಲೂಕಿನಿಂದ 10 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದರು. ಹರ ಜಾತ್ರಾ ಮಹೋತ್ಸವಕ್ಕೆ ಬರುವವರಿಗೆ ವಿಶ್ರಾಂತಿ ಕೊಠಡಿ, ಊಟದ ವ್ಯವಸ್ಥೆ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಆಡಳಿತ ಪಕ್ಷ, ವಿರೋಧ ಪಕ್ಷ ಸೇರಿದಂತೆ ಎಲ್ಲ ಗಣ್ಯ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಸಂತಕ್ಕ ಹುಲ್ಲತ್ತಿ ಮಾತನಾಡಿ, ಎರಡು ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ಜನವರಿ 14ರಂದು ಬೈಕ್ ರ್ಯಾಲಿ, ಯುವ ಸಮಾವೇಶ ವಚನಾನಂದ ಸ್ವಾಮೀಜಿ ಮೆರವಣಿಗೆ ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಎರಡು ಸಾವಿರ ಜನರಿಗೆ ಇಷ್ಟಂಲಿಂಗ ಪೂಜೆ ಜರುಗಲಿದೆ. ಜನವರಿ 15ರಂದು ಮಹಿಳಾ ಸಮಾವೇಶ ಜರುಗಲಿದೆ. ಮಹಿಳೆಯಿಂದ ವಿವಿಧ ಕಲಾತಂಡದೊಂದಿಗೆ ಕುಂಭಮೇಳ, ಮಹಿಳಾಗೋಷ್ಠಿ, ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಸಂಘದ ಅಧ್ಯಕ್ಷ ಎಸ್.ಆರ್. ಅಂಗಡಿ, ಚಂದ್ರಶೇಖರ ಪೂಜಾರ, ಈರಣ್ಣ ಸಂಗೂರ, ಮಲ್ಲಿಕಾರ್ಜುನ ಹಾವೇರಿ, ವೀರೇಶ ಮತ್ತಿಹಳ್ಳಿ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.