Advertisement

ಆರೋಗ್ಯ ಕೇಂದ್ರಕ್ಕೆ ಮತ್ತೆ ಜಲಗಂಡಾಂತರದ ಆತಂಕ

01:52 PM Oct 21, 2020 | Suhan S |

ಕನಕಪುರ: ಉತ್ತಮ ಸೇವೆಯಿಂದಕಾಯಕಲ್ಪಕ್ಕೆ ಆಯ್ಕೆಯಾಗಿದ್ದ ಹಾರೋಹಳ್ಳಿ ಸಮುದಾಯಆರೋಗ್ಯ ಕೇಂದ್ರಕ್ಕೆ ಈಗ ಜಲಕಂಟಕ  ಎದುರಾಗಿದ್ದು ವೈದ್ಯರು ಮತ್ತು ರೋಗಿಗಳು ಆತಂಕದಲ್ಲಿ ದಿನದೂಡುವಂತಾಗಿದೆ.

Advertisement

ತಾಲೂಕಿನ ಹಾರೋಹಳ್ಳಿ ಹೋಬಳಿ ಕೇಂದ್ರದ ಬಸ್‌ ನಿಲ್ದಾಣದ ಬಳಿ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಜಿಲ್ಲಾಡಳಿತ ಕೆರೆ ಅಂಗಳದಲ್ಲಿ 4 ಎಕರೆ ಜಾಗ ಮಂಜೂರು ಮಾಡಿತ್ತು. ಸ್ಥಳೀಯರು ಕೆರೆಯಂಗಳದಲ್ಲಿ ಆಸ್ಪತ್ರೆ ಕಟ್ಟಲು ವಿರೋಧ ವ್ಯಕ್ತಪಡಿಸಿದರೂ ಅಧಿಕಾರಿಗಳು, ಎಂಜಿನಿಯರ್‌ಗಳು ಪಟ್ಟುಹಿಡಿದು ಅವೈಜ್ಞಾನಿಕವಾಗಿ ಕೆರೆಯಂಗಳದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಮಾಡಿದ್ದರು. ನಂತರ ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗದೆ ಬರಗಾಲ ಪೀಡಿತವಾಗಿತ್ತು. ಹೀಗಾಗಿ ಯಾವುದೇ ಸಮಸ್ಯೆಗಳು ಉದ್ಭವಿಸಿರಲಿಲ್ಲ.

ನೀರು ಪಾಲಾಗಿತ್ತು: ಆದರೆ, ಕಳೆದ 3 ವರ್ಷಗಳ ಹಿಂದೆ 2016ರಲ್ಲಿ ನಿರೀಕ್ಷಿತ ಮಳೆಯಾಗಿ ಕೆರೆಯಲ್ಲಿ ಸಂಗ್ರಹವಾದಹೆಚ್ಚುವರಿ ನೀರು ಹೊರಹೋಗಲು ಅವಕಾಶವಿಲ್ಲದೆ ಕೆರೆಯ ತುಂಬೆಲ್ಲಾ ನೀರು ತುಂಬಿಕೊಂಡು ಆಸ್ಪತ್ರೆ ನೀರಿನಲ್ಲಿ ಮುಳುಗಡೆಯಾಗಿತ್ತು. ಹಾವು, ವಿಷಜಂತುಗಳು ಆಸ್ಪತ್ರೆ ತುಂಬೆಲ್ಲಾ ಹರಿದಾಡಿದ್ದವು.ಆಸ್ಪತ್ರೆಯಲ್ಲಿದ್ದ ಬೆಲೆ ಬಾಳುವ ಚಿಕಿತ್ಸಾ ವಿದ್ಯುತ್‌ ಉಪಕರಣ, ಬೆಡ್‌ ಸೇರಿದಂತೆ ಅನೇಕ ವಸ್ತುಗಳು ನೀರಿನಲ್ಲಿ ತೇಲಾಡ ತೊಡಗಿದ್ದವು. ರೋಗಿಗಳು ಮತ್ತು ವೈದ್ಯರು ಪಾಡಂತೂ ಹೇಳತೀರದಾಗಿತ್ತು.  ಉಳಿದುಕೊಳ್ಳಲು ಪರ್ಯಾಯ ಮಾರ್ಗವಿಲ್ಲದೆ 2 ದಿನ ಬೀದಿಯಲ್ಲಿ ಕಾಲ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಅಂಬೇಡ್ಕರ್‌ ಭವನಕ್ಕೆ ರೋಗಿಗಳನ್ನು ಸ್ಥಳಾಂತರಿಸಿ ತಾತ್ಕಾಲಿಕವಾಗಿ ಒಪಿಡಿ ತೆರೆದು ಚಿಕಿತ್ಸೆ ನೀಡಲಾಗುತ್ತಿತ್ತು.

ನೀರಿನ ಮಟ್ಟ ಹೆಚ್ಚಳ: ಸಮಸ್ಯೆ ಬಗೆಹರಿಸುವಂತೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ರಾಜು ಅವರು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ, ಶಾಸಕರು, ಸಂಸದರಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವೊಬ್ಬ ಜನಪ್ರತಿನಿಧಿಯೂ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವುದಿರಲಿ, ಕನಿಷ್ಟ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಆಲಿಸುವ ಪ್ರಯತ್ನ ಮಾಡಿಲ್ಲ.

ತಾಲೂಕಿನಲ್ಲಿ ಈ ಬಾರಿ ನಿರೀಕ್ಷೆಗಿಂತಲೂ ಹೆಚ್ಚಿನ ಮಳೆಯಾಗಿದ್ದ ಬಹುತೇಕ ಕೆರೆಯಲ್ಲಿ ದಿನೇ ದಿನೆ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಇನ್ನೂ ಒಂದು ಬಾರಿಹೆಚ್ಚು ಮಳೆಯಾದರೆ ಸಮುದಾಯಆರೋಗ್ಯ ಕೇಂದ್ರ ನೀರಿನಲ್ಲಿ ಮುಳುಗಡೆಯಾಗಲಿದೆ. 3 ವರ್ಷದ ಹಿಂದೆ ನಡೆದ ಘಟನೆ ಮತ್ತೆ ಮರುಕಳಿಸುವ ಮುನ್ಸೂಚನೆ ಕಾಣುತ್ತಿದೆ. ಹೊರ ರೋಗಿಗಳ ಜತೆಗೆ ಪ್ರಸ್ತುತ ಆಸ್ಪತ್ರೆಯಲ್ಲಿ ಅನೇಕ ಗರ್ಭಿಣಿಯರು ಆಸ್ಪತ್ರೆಯಲ್ಲಿದ್ದಾರೆ. ಅಲ್ಲದೆ, ಕೋವಿಡ್‌ ನಂತಹ ಸಂದರ್ಭದಲ್ಲಿ ಆಸ್ಪತ್ರೆ ಜಲಾವೃತವಾದರೆ ಬಹಳಷ್ಟು ಸಮಸ್ಯೆ ಉಂಟಾಗಲಿವೆ. ಹೀಗಾಗಿ ಜಿಲ್ಲಾ, ತಾಲೂಕು ಆಡಳಿತ ಎಚ್ಚೆತ್ತು ಒತ್ತುವರಿ ಮಾಡಿರುವ ರಾಜಕಾಲುವೆ ತೆರವುಗೊಳಿಸಿ ಸಮಸ್ಯೆ ಬಗೆ ಹರಿಸರಿಸಲು ಕ್ರಮಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

Advertisement

ಪೈಪ್‌ಗಳನ್ನು ಮುಚ್ಚಿದ ‌ಒತ್ತುವರಿದಾರರು : ಪೂರ್ವಿಕರ ಕಾಲದಿಂದಲೂ ಒಂದು ಕೆರೆಯಿಂದ ಮತ್ತೂಂದು ಕೆರೆಗೆ ಹೆಚ್ಚುವರಿ ನೀರು  ಹರಿದುಹೋಗಲು ರಾಜಕಾಲುವೆಗಳಿವೆ.ಆದರೆ,ಈ ಕೆರೆಗೆ ಇದ್ದ ರಾಜಕಾಲುವೆಯನ್ನು ಸ್ಥಳೀಯರು ಒತ್ತುವರಿ ಮಾಡಿಕೊಂಡು ಮುಚ್ಚಿಹಾಕಿದ್ದಾರೆ. ಹೀಗಾಗಿ ಕೆರೆ ನೀರು ಹೊರಗೆ ಬಿಡಲು ಆಗದೆ ಕೆರೆಯಲ್ಲಿ ನೀರು ಸಂಗ್ರಹವಾದಂತೆಲ್ಲಾ ಆಸ್ಪತ್ರೆಗೆ ನೀರು ನುಗ್ಗುತ್ತಿದೆ.ಕಳೆದ3 ವರ್ಷಗಳ ಹಿಂದೆ ಈ ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ತರಾತುರಿಯಲ್ಲಿ ಸರ್ವೆ ನಡೆಸಿ ಒತ್ತುವರಿ ರಾಜ ಕಾಲುವೆ ಗಡಿ ಗುರುತಿಸಿ ತೆರವುಗೊಳಿಸಲು ಸೂಚನೆ ನೀಡಿ ತಾತ್ಕಾಲಿಕವಾಗಿ ನೀರನ್ನು ಹೊರಬಿಡಲು ಕ್ರಮ ಕೈಗೊಂಡಿದ್ದರು. ಆದರೆ, ಒತ್ತುವರಿ ಆಗಿರುವ ಜಾಗವನ್ನು ತೆರವುಗೊಳಿಸಲು ಜಿಲ್ಲಾಡಳಿತ, ತಾಲೂಕು ಆಡಳಿತವಾಗಲಿ ಈ ವರೆಗೂ ಮುಂದಾಗಿಲ್ಲ. ಸಮಸ್ಯೆಯಿಂದ ಇತ್ತೀಚಿಗೆ ತಾತ್ಕಾಲಿಕವಾಗಿ ನೀರು ಹೊರಹೋಗಲು ಅಳವಡಿಸಿದ್ದ ಪೈಪುಗಳನ್ನು ಒತ್ತುವರಿದಾರರು ಮತ್ತೆ ಮಣ್ಣು ಹಾಕಿ ಮುಚ್ಚಿದ್ದಾರೆ. ಈ ಸಂಬಂಧ ವೈದ್ಯರು ಹಾರೋಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಹ ಹಾರೋಹಳ್ಳಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಘಟನೆಯಿಂದ ಆಸ್ಪತ್ರೆ ಮತ್ತೆ ಯಥಾಸ್ಥಿಗೆ ಮರಳಲು 6 ತಿಂಗಳು ಕಾಯ ಬೇಕಾಯಿತು.

ಮಳೆ ನೀರು ಆಸ್ಪತ್ರೆ ಸಮೀಪಕ್ಕೆ ಬಂದು ನಿಂತಿದೆ. ಜೋರು ಮಳೆ ಬಿದ್ದರೆ ಮತ್ತೆ ಆಸ್ಪತ್ರೆಗೆ ನೀರು ನುಗ್ಗುತ್ತದೆ. ಆಸ್ಪತ್ರೆಯಲ್ಲಿ ಹೊರ ರೋಗಿಗಳ ಜತೆಗೆ ಹೆರಿಗೆ ವಿಭಾಗವೂ ಇದ್ದು ಗರ್ಭಿಣಿ, ಬಾಣಂತಿಯರಿದ್ದಾರೆ.ಕೋವಿಡ್ ಇರುವುದರಿಂದ ಬಹಳಷ್ಟು ಸಮಸ್ಯೆ ಆಗಲಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಒತ್ತುವರಿ ತೆರವುಗೊಳಿಸಿ ಕೆರೆ ನೀರನ್ನು ಹೊರಬಿಡಲುಕ್ರಮಕೈಗೊಳ್ಳಬೇಕು. ರಾಜು, ಹಾರೋಹಳ್ಳಿ ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿ

ಕನಕಪುರ ತಾಲೂಕಿನ ಹಾರೋಹಳ್ಳಿಯ ಸಮುದಾಯ ಆರೋಗ್ಯಕೇಂದ್ರಕ್ಕೆ ಜಲಕಂಟಕ ಎದುರಾಗುವ ಬಗ್ಗೆ ಗಮನವಿದೆ.ಕೋಡಿ ನೀರು ಹರಿದು ಹೋಗಲು ಸ್ಥಳ ಇಲ್ಲದ ಕಾರಣ ಅಲ್ಲಿ ಮಳೆ ನೀರು ನಿಲ್ಲುತ್ತಿದೆ. ಈಗಾಗಲೇ ಜಿಪಂ ಸಿಇಒ ಅವರ ಬಳಿ ಚರ್ಚಿಸಿದ್ದೇನೆ. ಇತ್ತೀಚೆಗಷ್ಟೆ ಅಲ್ಲಿಗೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದೇವೆ.-ಡಾ.ನಿರಂಜನ್‌, ಜಿಲ್ಲಾ ಆರೋಗ್ಯ ಅಧಿಕಾರಿ

 

-ಬಿ.ಟಿ.ಉಮೇಶ್‌

Advertisement

Udayavani is now on Telegram. Click here to join our channel and stay updated with the latest news.

Next